ಪಾಟ್ನಾ: ದೇಶ ವಿರೋಧಿ ಚಟುವಟಿಕೆಯಲ್ಲಿ ಶಾಮೀಲಾಗಿದ್ದ ಇಬ್ಬರು ಉಗ್ರರನ್ನು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಬಂಧಿಸಿದ್ದು, ಈ ಮೂಲಕ ಉಗ್ರರ ಸಂಚನ್ನು ವಿಫಲಗೊಳಿಸಿದಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಎತ್ತಿನ ಕತ್ತಿನ ಭಾರಕ್ಕೆ ನೊಗವಾದ ‘ರೋಲಿಂಗ್ ಸಪೋರ್ಟ್’
ಬಂಧಿತ ಉಗ್ರರಲ್ಲಿ ಒಬ್ಬನಾದ ಮೊಹಮ್ಮದ್ ಜಲಾಲುದ್ದೀನ್ ನಿವೃತ್ತ ಪೊಲೀಸ್ (ಜಾರ್ಖಂಡ್) ಅಧಿಕಾರಿಯಾಗಿದ್ದು, ಮತ್ತೊಬ್ಬ ಉಗ್ರ ಅತಾರ್ ಪರ್ವೇಜ್ ಪ್ರಸ್ತುತ ಪಿಎಫ್ ಐ ಸದಸ್ಯನಾಗಿದ್ದ ಎಂದು ವರದಿ ವಿವರಿಸಿದೆ.
ಪಾಟ್ನಾ ಪೊಲೀಸರ ಮಾಹಿತಿ ಪ್ರಕಾರ, ಇಬ್ಬರಿಗೂ ಭಯೋತ್ಪಾದನೆಯ ತರಬೇತಿ ನೀಡಲಾಗಿತ್ತು. ಬಂಧಿತರ ಬಳಿ ಪಿಎಫ್ಐ-ಎಸ್ ಡಿಪಿಐನ “2047ರ ಮಿಷನ್ ರಹಸ್ಯ ದಾಖಲೆ ಪತ್ತೆಯಾಗಿದೆ. ಇದರಲ್ಲಿ ಭಾರತವನ್ನು 2047ರೊಳಗೆ ಇಸ್ಲಾಂ ದೇಶವನ್ನಾಗಿ ಮಾಡಲಾಗುತ್ತದೆ ಎಂದು ಉಲ್ಲೇಖಿಸಿದೆ. ಅಷ್ಟೇ ಅಲ್ಲ ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ 15 ದಿನಗಳ ಮೊದಲು ಶಂಕಿತ ಉಗ್ರರಿಗೆ ಫುಲ್ವಾರಿ ಷರೀಫ್ ನಲ್ಲಿ ತರಬೇತಿ ನೀಡಲಾಗಿತ್ತು. ಪ್ರಧಾನಿ ಮೋದಿ ಅವರನ್ನು ಗುರಿಯಾಗಿರಿಸಿ ದಾಳಿ ನಡೆಸುವ ಸಂಚಿನ ಬಗ್ಗೆ ಜುಲೈ 6 ಮತ್ತು 7ರಂದು ಸಭೆ ನಡೆಸಿದ್ದರು. ಶಂಕಿತ ಉಗ್ರರಿಗಾಗಿ ಬಿಹಾರ ಪೊಲೀಸರು ಫುಲ್ವಾರಿ ಷರೀಫ್ ಕಚೇರಿ ಮೇಲೆ ದಾಳಿ ನಡೆಸಿದ್ದರು.
ಕಳೆದ ಎರಡು ತಿಂಗಳಿನಿಂದ ಇತರ ರಾಜ್ಯಗಳಿಂದ ತರಬೇತಿ ಪಡೆಯಲು ಆಗಮಿಸಿದ್ದವರು, ವಿಸಿಟರ್ಸ್ ಪುಸ್ತಕದಲ್ಲಿ, ಹೋಟೆಲ್ ನಲ್ಲಿ ಹೆಸರುಗಳನ್ನು ಬದಲಾಯಿಸಿ ವಿಳಾಸ ನೀಡಿದ್ದರು ಎಂದು ವರದಿ ವಿವರಿಸಿದೆ.
ಬಂಧಿತ ಆರೋಪಿಗಳು ದೇಶದ ವಿವಿಧೆಡೆ ವಾಸ್ತವ್ಯ ಹೂಡುತ್ತಿದ್ದು, ಯುವಕರನ್ನು ದಾರಿ ತಪ್ಪಿಸುತ್ತಿದ್ದರಲ್ಲದೇ, ತರಬೇತಿಯನ್ನೂ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.