ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಿರೂಪಕಿ ಅನುಶ್ರೀ ವಿಚಾರದಲ್ಲಿ ಒತ್ತಡ ಹೇರಿರುವ ಮಾಜಿ ಮುಖ್ಯಮಂತ್ರಿ ಯಾರು ಎಂಬುದು ಬಹಿರಂಗವಾಗಲಿ ಎಂದು ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ದೊಡ್ಡ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಕಪೋಲಕಲ್ಪಿತ ಸುದ್ದಿಗಳು ನಿತ್ಯ ಪ್ರಸಾರವಾಗುತ್ತಿವೆ. ಎರಡು ಬಾರಿ ಸಿಎಂ ಆಗಿದ್ದರು. ಮಾಜಿ ಸಿಎಂ ಪುತ್ರ ಕೂಡ ಸಂಪರ್ಕದಲ್ಲಿದ್ದಾರೆ ಎಂದೆಲ್ಲ ಪ್ರಸಾರವಾಗುತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ವೀರಪ್ಪ ಮೊಲಿ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಸಿದ್ದರಾಮಯ್ಯ ಕೂಡ ಮಾಜಿ ಮುಖ್ಯಮಂತ್ರಿಗಳು.ಯಾರು ಒತ್ತಡ ಹೇರಿದ್ದಾರೆ ಎಂಬುದು ಬಹಿರಂಗವಾಗಲಿ ಹಾಗೂ ಆ ಬಗ್ಗೆ ತನಿಖೆಯೂ ಆಗಲಿ ಎಂದು ಅವರು ಆಗ್ರಹಿಸಿದರು.
ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ನಾನೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಇಂತಹ ಸುದ್ದಿ ಅಥವಾ ಮಾಹಿತಿಯನ್ನು ವರದಿಗಾರರಿಗೆ ಕೊಟ್ಟವರು ಯಾರು? ಬೇಕಾಬಿಟ್ಟಿ ಏನಾದರೂ ಮಾಹಿತಿ ಕೊಟ್ಟರೆ ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಯಾರೇ ಆಗಿರಲಿ. ಸರಕಾರ ಸಾರ್ವಜನಿಕವಾಗಿ ತನಿಖೆ ಮಾಡಲಿ. ಸುಳ್ಳು ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾನು ಅನುಶ್ರೀ ಅವರನ್ನು ನೋಡಿಲ್ಲ. ಎರಡು ತಿಂಗಳ ಹಿಂದೆ ನನ್ನ ಮಗನ ಸಂದರ್ಶನ ಮಾಡಿದ್ದಾರೆ. ಅನಂತರ ಯಾವ ಸಂಪರ್ಕವೂ ಇಲ್ಲ ಎಂದು ಹೇಳಿದರು.