ವರದಿ: ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಜನತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲ ರೀತಿಯಿಂದಲೂ ಅಭಯ ನೀಡಿದ್ದಾರೆ. ಕೊರೊನಾ ಸಂಕಷ್ಟದ ವೇಳೆ ಜನತೆಗೆ ಚಿಕಿತ್ಸೆಯ ಕೊರತೆಯಾಗದಂತೆ ಹಾಗೂ ಆಕ್ಸಿಜನ್, ಆಂಬ್ಯುಲೆನ್ಸ್, ಮಾಸ್ಕ್, ಪಿಪಿಇ ಕಿಟ್ ಹೀಗೆ ಎಲ್ಲವನ್ನೂ ಒದಗಿಸುವ ಮೂಲಕ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ.
ಹೌದು. ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ನಗರ-ಪಟ್ಟಣ ಹಾಗೂ 114 ಹಳ್ಳಿಗಳಿದ್ದು, ಇಲ್ಲಿನ ಜನರಿಗೆ ಕೊರೊನಾ 2ನೇ ಅಲೆಯ ಭೀತಿ ಕಡಿಮೆಗೊಳ್ಳುವ ಜತೆಗೆ ಸೋಂಕಿತರಿಗೆ ತಕ್ಷಣ ಅಗತ್ಯ ಚಿಕಿತ್ಸೆ ದೊರೆಬೇಕೆಂಬ ಸದುದ್ದೇಶದಿಂದ ಹಲವು ಪ್ರಯತ್ನ ಮಾಡಿದ್ದು, ದೂರದ ಬೆಂಗಳೂರಿನಲ್ಲಿದ್ದರೂ ನಿತ್ಯವೂ ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳು, ಪಕ್ಷದ ಪ್ರಮುಖರೊಂದಿಗೆ ಸಮಾಲೋಚಿಸುತ್ತ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸಿ, ಕ್ಷೇತ್ರದಲ್ಲಿ ಕೊರೊನಾ ಸ್ಥಿತಿಗತಿ ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿದ್ದೇ ಕ್ಷೇತ್ರದ ಜನತೆಗೆ ಅಗತ್ಯವಾದ ಸೌಲಭ್ಯ-ಸಾಮಗ್ರಿ ಪೂರೈಸಲು ನೆರವಾಗಿದ್ದಾರೆ. ಪ್ರಾಣವಾಯು ನೆರವು: ಬಾದಾಮಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ಎರಡು ತಾಲೂಕುಗಳಿದ್ದು, ಮೂರು ನಗರ ಸ್ಥಳೀಯ ಸಂಸ್ಥೆಗಳಿವೆ. 114 ಹಳ್ಳಿಗಳಿದ್ದು, ಒಟ್ಟಾರೆ 2.12 ಲಕ್ಷ ಜನಸಂಖ್ಯೆ ಇದೆ. ಕೊರೊನಾ 2ನೇ ಅಲೆಯ ವೇಳೆ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಗೆ ದುಡಿಯಲು ಹೋಗಿದ್ದ 1573 ಜನ ವಲಸಿಗರು ಮರಳಿ ಬಂದಿದ್ದು, ಅವರನ್ನೆಲ್ಲ ಕೊರೊನಾ ತಪಾಸಣೆಗೆ ಒಳಪಡಿಸಿದ್ದು, 52 ಜನರಿಗೆ ಪಾಸಿಟಿವ್ ಬಂದಿದೆ. ಪ್ರತಿಯೊಬ್ಬರಿಗೂ 10 ದಿನಗಳ ಕ್ವಾರಂಟೈನ್ ಮಾಡಿ, ಗುಣಮುಖರಾದ ಬಳಿಕ ಹಳ್ಳಿಗೆ ಕಳುಹಿಸಲಾಗಿದೆ.
ಬಾದಾಮಿ ಪಟ್ಟಣದಲ್ಲಿ 50 ಹಾಸಿಗೆಯ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, ಇಲ್ಲಿ ಆಕ್ಸಿಜನ್ ಕೊರತೆಯಾದಾಗ ತಕ್ಷಣ ನೆರವಿಗೆ ಧಾವಿಸಿ, ಹೊಸಪೇಟೆಯ ಮುನಿರಾಬಾದ್‌ನಿಂದ ನಿತ್ಯ 40 ಜಂಬೋ ಸಿಲಿಂಡರ್‌ಗಳನ್ನು ನೇರವಾಗಿ ಬಾದಾಮಿ ಆಸ್ಪತ್ರೆಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ಸಿದ್ದರಾಮಯ್ಯ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಕಾಡುತ್ತಿದ್ದ ಆಕ್ಸಿಜನ್ ಕೊರತೆ ಸದ್ಯಕ್ಕೆ ದೂರಾಗಿದ್ದು, 2 ಖಾಸಗಿ ಆಸ್ಪತ್ರೆಗಳು ಕೊರೊನಾಗೆ ಚಿಕಿತ್ಸೆ ನೀಡುತ್ತಿದ್ದು, ಅವರಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲೂ ಸೂಚನೆ ನೀಡಿದ್ದಾರೆ.
ಮತ್ತೂಂದು ಸಿಸಿಸಿ ಕೇಂದ್ರ: ಸದ್ಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ವಸತಿ ಸಹಿತ ಶಾಲೆಯಲ್ಲಿ 100 ಬೆಡ್ ಹಾಗೂ ಗುಳೇದಗುಡ್ಡದ ಬಿಸಿಎಂ ಹಾಸ್ಟೆಲ್‌ನಲ್ಲಿ 50 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿ ಸೋಂಕಿತರಿಗೆ ಆರೈಕೆ ಮಾಡಲಾಗುತ್ತಿದೆ. ಅವರಿಗೆ ನಿತ್ಯ ಊಟ, ಶುದ್ಧ ಕುಡಿಯುವ ನೀರು, ಯೋಗ-ಪ್ರಾಣಾಯಾಮ ಹೇಳಿ, ಕೊರೊನಾ ಕುರಿತ ಭಯ-ಆತಂಕ ದೂರ ಮಾಡಲು ನಿರ್ದೇಶನ ನೀಡಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಇನ್ನೊಂದು ಕೊರೊನಾ ಕೇರ್ ಸೆಂಟರ್ ಆರಂಭಿಸಿ, ಮೂರು ಕೇಂದ್ರಗಳಲ್ಲಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಬೇಕು. ಯಾವುದೇ ತುರ್ತು ಸಂದರ್ಭದಲ್ಲೂ ಸೋಂಕಿತರಿಗೆ ಚಿಕಿತ್ಸೆಯ ಕೊರತೆಯಾಗಬಾರದು ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಮಾಲೋಚನೆ ಸಭೆಯಲ್ಲಿ ತಿಳಿಸಿದ್ದಾರೆಂದು ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಅವರ ಆಪ್ತ ಹೊಳಬಸು ಶೆಟ್ಟರ ಉದಯವಾಣಿಗೆ ತಿಳಿಸಿದರು.
ಉಚಿತ ಮಾಸ್ಕ್-ಪಿಪಿಇ ಕಿಟ್: ಕಳೆದ ಬಾರಿ ಕೊರೊನಾ 2ನೇ ಅಲೆಯಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ನೆರವಾಗಲು ಎನ್ -95 ಮಾಸ್ಕ್ ಹಾಗೂ ಪಿಪಿಇ ಕಿಟ್ ಅನ್ನು ಉಚಿತವಾಗಿ ಪೂರೈಸಲಾಗಿದೆ. ಅಲ್ಲದೇ ತಾಲೂಕು ಆಡಳಿತಕ್ಕೆ ಯಾವುದೇ ರೀತಿಯ ನೆರವು ಬೇಕಾದಲ್ಲಿ ಕಲ್ಪಿಸಲು ಸಿದ್ಧ. ಕ್ಷೇತ್ರದ ಜನರಿಗೆ ಯಾವ ತೊಂದರೆಯೂ ಆಗಬಾರದು ಎಂಬುದು ಸಿದ್ದರಾಮಯ್ಯ ಅವರ ಸ್ಪಷ್ಟ ಸೂಚನೆ. ಕ್ಷೇತ್ರದ ಜನರ ಅನುಕೂಲಕ್ಕಾಗಿ 3 ಆಂಬ್ಯುಲೆನ್ಸ್ ಕೂಡ ಉಚಿತವಾಗಿ ನೀಡಿದ್ದಾರೆ.