Advertisement

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

05:19 PM Nov 24, 2024 | Team Udayavani |

ಮುಂಬಯಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮಹಾರಾಷ್ಟ್ರದ ಪಕ್ಷಗಳಿಂದ ಪಕ್ಷಾಂತರಗೊಂಡ ರಾಜಕಾರಣಿಗಳಿಗೆ ಕಾನೂನಿನ ಭಯವನ್ನು ತೆಗೆದುಹಾಕಿದ್ದಾರೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಭಾನುವಾರ ಕಟುವಾಗಿ ಟೀಕಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, “ಚಂದ್ರಚೂಡ್ ಅವರು ಪಕ್ಷಾಂತರಿಗಳಿಗೆ ಕಾನೂನಿನ ಭಯವನ್ನು ತೆಗೆದುಹಾಕಿದ್ದಾರೆ. ಅವರ ಹೆಸರನ್ನು ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆಯಲಾಗುವುದು” ಎಂದರು.

ಅನರ್ಹತೆ ಅರ್ಜಿಗಳನ್ನು ನಿರ್ಧರಿಸದೆ, ಚಂದ್ರಚೂಡ್ ಪಕ್ಷಾಂತರಕ್ಕೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟಿದ್ದರು ಎಂದು ರಾವತ್ ಕಿಡಿ ಕಾರಿದ್ದಾರೆ.

‘ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮೊದಲೇ ನಿರ್ಧಾರಿತವಾಗಿದ್ದವು. ಆಗಿನ ಸಿಜೆಐ ಅವರು ಅನರ್ಹತೆ ಅರ್ಜಿಗಳನ್ನು ಸಕಾಲದಲ್ಲಿ ತೀರ್ಮಾನಿಸಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು’ ಎಂದು ರಾವತ್ ಆರೋಪಿಸಿದ್ದಾರೆ.

“ನಾವು ದುಃಖಿತರಾಗಿದ್ದೇವೆ ಆದರೆ ನಿರಾಶೆಗೊಂಡಿಲ್ಲ. ನಾವು ಹೋರಾಟವನ್ನು ಅಪೂರ್ಣಗೊಳಿಸುವುದಿಲ್ಲ. ಮತಗಳ ವಿಭಜನೆಯೂ ಒಂದು ಅಂಶವಾಗಿದ್ದು, ಚುನಾವಣೆಯಲ್ಲಿ ಆರ್‌ಎಸ್‌ಎಸ್ ಪ್ರಮುಖ ಪಾತ್ರ ವಹಿಸಿದೆ. ವಿಷಪೂರಿತ ಪ್ರಚಾರವು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ”ಎಂದರು.

Advertisement

2022 ರಲ್ಲಿ ಅವಿಭಜಿತ ಶಿವಸೇನೆಯ ವಿಭಜನೆಯ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಬಣವು ಏಕನಾಥ್ ಶಿಂಧೆ ಜತೆಗೆ ಪಕ್ಷಾಂತರಗೊಂಡ ಪಕ್ಷದ ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿತ್ತು. ಶಿಂಧೆ ನೇತೃತ್ವದ ಸೇನಾ ಬಣವನ್ನು “ನೈಜ ರಾಜಕೀಯ ಪಕ್ಷ” ಎಂದು ಘೋಷಿಸುವ ಮೂಲಕ ಈ ವರ್ಷದ ಆರಂಭದಲ್ಲಿ ಅವರು ಮಾಡಿದ ಅನರ್ಹತೆ ಅರ್ಜಿಗಳ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ ಅಸೆಂಬ್ಲಿ ಸ್ಪೀಕರ್‌ಗೆ ಜವಾಬ್ದಾರಿಯನ್ನು ನೀಡಿತ್ತು.

ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಭಾಗವಾಗಿ ಸ್ಪರ್ಧಿಸಿದ 95 ಸ್ಥಾನಗಳಲ್ಲಿ ಕೇವಲ 20 ಸ್ಥಾನಗಳನ್ನು ಗಳಿಸಿದ ನಂತರ ಶಿವಸೇನಾ (ಯುಬಿಟಿ) ನಾಯಕನ ಕಿಡಿ ಕಾರುತ್ತಲೇ ಇದ್ದಾರೆ. ಕಾಂಗ್ರೆಸ್ 101 ಸ್ಥಾನಗಳಲ್ಲಿ ಕೇವಲ 16 ಮತ್ತು ಎನ್ ಸಿಪಿ (SP) ಸ್ಪರ್ಧಿಸಿದ 86 ಸ್ಥಾನಗಳಲ್ಲಿ 10 ಮಾತ್ರ ಗೆದ್ದು ಹೀನಾಯ ಸೋಲು ಅನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next