ಗೌಹಾತಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಗೊಗೊಯ್ ಅವರ ದೇಹದಲ್ಲಿ ಆಮ್ಲಜನಕ ಹೀರಿಕೊಳ್ಳುವಿಕೆ ಮಟ್ಟ ಕುಸಿತ ಕಂಡ ಹಿನ್ನಲೆಯಲ್ಲಿ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಆಸ್ಪತ್ರೆಯ ತುರ್ತುನಿಗಾ ಘಟಕಕ್ಕೆ ಇಂದು ವರ್ಗಾಯಿಸಲಾಗಿದೆ.
85 ವರ್ಷ ಪ್ರಾಯದ ತರುಣ್ ಗೊಗೊಯ್ ಅವರಿಗೆ ಆಗಸ್ಟ್ 26ರಂದು ಕೋವಿಡ್ 19 ಸೋಂಕು ಪಾಸಿಟಿವ್ ಆಗಿತ್ತು. ಬಳಿಕ ಅವರನ್ನು ಗೌಹಾತಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ (GMCH) ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ಐಸೊಲೇಟೆಡ್ ಕೊಠಡಿಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು ಅವರ ದೇಹದಲ್ಲಿ ಆಮ್ಲಜನಕ ಹೀರಿಕೊಳ್ಳುವಿಕೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡ ಕಾರಣ ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ತರುಣ್ ಗೊಗೊಯ್ ಅವರು 2001 ರಿಂದ 2016ರವರೆಗೆ ಸತತ ಮೂರು ಅವಧಿಗಳಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿರಿಯ ನಾಯಕನಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಅವರ ಆರೋಗ್ಯ ನಿಗಾಕ್ಕಾಗಿ ಅಸ್ಸಾಂ ಸರಕಾರ ಎಂಟು ಮಂದಿ ವೈದ್ಯರನ್ನೊಳಗೊಂಡ ವಿಶೇಷ ತಂಡವೊಂದನ್ನು ರಚಿಸಿತ್ತು. ಗೊಗೊಯ್ ಅವರಿಗೆ ಕಳೆದ ವಾರ ಕೊವಿಡ್ 19 ತಪಾಸಣೆ ನಡೆಸಿದ್ದ ಸಂದರ್ಭದಲ್ಲಿ ನೆಗೆಟಿವ್ ವರದಿ ಬಂದಿತ್ತು.