ನವದೆಹಲಿ:ಪಾಕಿಸ್ತಾನ ಮಿಲಿಟರಿ ಪಡೆಯ ಸತತ ದಾಳಿಯಿಂದ ಭಾರತೀಯ ಯೋಧರ ಹತ್ಯೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಯೋಧರೊಬ್ಬರ ಪತ್ನಿ ಪ್ರತಿಭಟನಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 56ಇಂಚಿನ ಬ್ಲೌಸ್ ಅನ್ನು ಕಳುಹಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಧೈರ್ಯಕ್ಕೆ ಮತ್ತೊಂದು ಹೆಸರೇ ಪ್ರಧಾನಿ ಮೋದಿ ಹಾಗಾಗಿ ಅವರದ್ದು 56 ಇಂಚಿನ ಎದೆ ಎಂಬ ಹೇಳಿಕೆಗೆ ತಿರುಗೇಟು ಎಂಬಂತೆ ಮಾಜಿ ಯೋಧ ಧರ್ಮಾವೀರ್ ಸಿಂಗ್ ಪತ್ನಿ ಸುಮನ್ ಸಿಂಗ್ 56 ಇಂಚಿನ ಬ್ಲೌಸ್ ಅನ್ನು ಕಳುಹಿಸಿದ್ದಾರೆ.
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಒಂದು ವೇಳೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದರೆ ಪಾಕಿಸ್ತಾನ ಭಾರತೀಯ ಯೋಧರ ಮೇಲೆ ದಾಳಿ ನಡೆಸುವ ಧೈರ್ಯ ತೋರುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಆದರೆ ಇದೀಗ ಪರಿಸ್ಥಿತಿ ವಿರುದ್ಧವಾಗಿದೆ. ಆದರೂ ಪಾಕ್ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಲೌಸ್ ಜೊತೆಗೆ ಪ್ರಧಾನಿ ಹೆಸರಿನಲ್ಲಿ ಪತ್ರ ಬರೆದಿರುವುದಾಗಿ ಧರ್ಮಾವೀರ್ ಸಿಂಗ್ ಫತೇಬಾದ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ಇತ್ತೀಚೆಗೆ ಗಡಿಯಲ್ಲಿ ಭಾರತೀಯ ಯೋಧರ ಹತ್ಯೆ, ಶಿರಚ್ಛೇದ ನಡೆಸುತ್ತಿರುವ ಘಟನೆಯಿಂದ ನೊಂದು ಸುಮನ್ ತನ್ನ ನೋವನ್ನು ಈ ರೀತಿ ವ್ಯಕ್ತಪಡಿಸಿರುವುದಾಗಿ ವಿವರಿಸಿದ್ದಾರೆ.
ನಾವು ನಮ್ಮ ಮಕ್ಕಳನ್ನು, ಸಹೋದರರನ್ನು, ಪತಿಯನ್ನು ದೇಶದ ಮಾತೃಭೂಮಿಯ ಗಡಿ ಕಾಯಲು ಕಳುಹಿಸುತ್ತೇವೆ. ಆದರೆ ನಾವು ಅವರ ಶಿರಚ್ಚೇದಗೊಂಡ ದೇಹವನ್ನು ಪಡೆಯಲು ಅಲ್ಲ ಎಂದು ಕಿಡಿಕಾರಿರುವ ಸುಮನ್, ಈಗ 56 ಇಂಚಿನ ಎದೆ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ.