ನವದೆಹಲಿ: ಬೇನಾಮಿ ವ್ಯವಹಾರಗಳ ತಡೆ ಕಾಯ್ದೆಯಡಿಯಲ್ಲಿ ಎಐಎಡಿಎಂಕೆ ಮಾಜಿ ನಾಯಕಿ ವಿಕೆ ಶಶಿಕಲಾಗೆ ಸೇರಿದ 1,600 ಕೋಟಿ ರೂಪಾಯಿ ಮೌಲ್ಯದ ಒಂಬತ್ತು ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವುದಾಗಿ ಮಂಗಳವಾರ ವರದಿಯೊಂದು ತಿಳಿಸಿದೆ.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇದೀಗ ಆದಾಯ ತೆರಿಗೆ ಇಲಾಖೆ ಮತ್ತೊಂದು ಆಘಾತ ನೀಡಿದಂತಾಗಿದೆ.
ಕೇಂದ್ರ ಸರ್ಕಾರ ನೋಟು ನಿಷೇಧಿಸಿದ ನಂತರ ಸುಳ್ಳು ಹೆಸರುಗಳನ್ನು ಸೃಷ್ಟಿಸಿ ಸುಮಾರು 1,600 ಕೋಟಿ ರೂಪಾಯಿ ಬಳಸಿಕೊಂಡು ಈ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ನಿಕಟವರ್ತಿಯಾಗಿದ್ದ ವಿಕೆ ಶಶಿಕಲಾ ಈಗಾಗಲೇ ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದು, ಚೆನ್ನೈನಲ್ಲಿರುವ ಆದಾಯ ತೆರಿಗೆ ಇಲಾಖೆ ಅಧೀಕಾರಿಗಳು ಬೇನಾಮಿ ತಡೆ ಘಟಕ ಶಶಿಕಲಾ ಆಸ್ತಿ ಜಪ್ತಿ ಮಾಡಲು ಆದೇಶ ಹೊರಡಿಸಿತ್ತು ಎಂದು ವರದಿ ತಿಳಿಸಿದೆ.