ಹೊಸದಿಲ್ಲಿ: ಆರ್ಥಿಕವಾಗಿ ಮೇಲ್ವರ್ಗದ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ಇಂದು ತೀರ್ಪು ಪ್ರಕಟಿಸಿದ್ದು, ಶೇ.10ರಷ್ಟು ಮೀಸಲು ನೀಡುವುದನ್ನು ಎತ್ತಿಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಿದ್ದು, ಐವರು ನ್ಯಾಯಾಧೀಶರಲ್ಲಿ ಮೂವರು ಈ ಮೀಸಲಾತಿ ಪರವಾಗಿ ತೀರ್ಪು ನೀಡಿದ್ದಾರೆ.
ಆರ್ಥಿಕ ಮಾನದಂಡಗಳ ಮೇಲಿನ ಮೀಸಲಾತಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ. ಈ ಮೀಸಲಾತಿಯು ಸಮಾನತೆಯ ಕೋಡ್ ಅನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹೇಳಿದರು.
ಇದನ್ನೂ ಓದಿ:ಹತ್ತು ವರ್ಷಗಳ ಬಳಿಕ ರಮ್ಯಾ ಕಮ್ ಬ್ಯಾಕ್: ಡಾಲಿ ಜೊತೆಯಾದ ಮೋಹಕ ತಾರೆ
ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಮಾಜಿಕ ಸಮಾನತೆ ತರಲು ಮೇಲ್ವರ್ಗಗಳಲ್ಲಿರುವ ಬಡವರಿಗೆ ಕೇಂದ್ರ ಸರ್ಕಾರ 2019ರಲ್ಲಿ ಶೇ.10 ರಷ್ಟು ಮೀಸಲಾತಿ ನೀಡಿ ಕಾಯ್ದೆ ಜಾರಿಗೊಳಿಸಿತ್ತು. ಇದು ಒಟ್ಟು ಮೀಸಲಾತಿಗೆ ಇರುವ 50% ಮಿತಿಗೆ ಹೊರತಾಗಿದೆ. ಇದನ್ನು ಪ್ರಶ್ನಿಸಿ 40ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದವು. ಸಾಂವಿಧಾನಿಕ ಪೀಠ ಅವುಗಳ ವಿಚಾರಣೆ ನಡೆಸಿವೆ.