Advertisement

ವಿಕಾಸ ಆದರೆ ವಿಶ್ವಾಸ ಸಿಗುತ್ತದೆ 

09:14 AM May 31, 2019 | Vishnu Das |

ಜನ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದರಷ್ಟೇ ಸಾಲದು ಅವುಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕೆಲಸವೂ ಆಗಬೇಕು. ಇದಾದರೆ ಮಾತ್ರ ಸಬ್‌ ಕಾ ವಿಕಾಸ್‌ ಆಗಬಹುದು. ವಿಕಾಸ ಅನುಭವಕ್ಕೆ ಬಂದರೆ ವಿಶ್ವಾಸ ಸಿಗುವುದು ಕಷ್ಟವೇನಲ್ಲ.

Advertisement

ದೇಶದ 130 ಕೋಟಿ ಜನರ ಆಶೋತ್ತರಗಳ ಪ್ರತಿನಿಧಿಯಾಗಿ ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪದಗ್ರಹಣ ಮಾಡುತ್ತಿದ್ದಾರೆ. ಬಿಜೆಪಿಯೇ 303 ಸ್ಥಾನಗಳನ್ನು ಗೆಲ್ಲುವ ಮೂಲಕ ನಿಚ್ಚಳ ಬಹುಮತ ಗಳಿಸಿದೆ. ಮಿತ್ರಪಕ್ಷಗಳ ಸಂಸದರು ಸೇರಿ ಎನ್‌ಡಿಎ ಬಲ 340 ದಾಟಿದೆ. ಬಿಜೆಪಿಯಲ್ಲೇ 131 ಯುವ ಸಂಸದರಿದ್ದಾರೆ. ಜತೆಗೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಗರಿಷ್ಠ 77 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ 50ಕ್ಕೂ ಹೆಚ್ಚು ಮಂದಿ ಬಿಜೆಪಿಯವರೇ ಇದ್ದಾರೆ. ಹಿರಿಯರು, ಕಿರಿಯರು, ಮಹಿಳೆಯರ ಸಮಪಾಕವನ್ನು ಒಳ ಗೊಂಡಿರುವ ಸಂತುಲಿತ ಸಂಸತ್‌ ಈ ಸಲ ಸಿಕ್ಕಿದೆ. ಇವರನ್ನೆಲ್ಲ ಜತೆಗೊಯ್ದು ತನ್ನ ಕನಸಿನ ನವಭಾರತವನ್ನು ಸೃಷ್ಟಿಸುವ ಅಪೂರ್ವವಾದ ಅವಕಾಶ ಅವರಿಗೆ ಇದೆ.

ಪದಗ್ರಹಣ ಸಮಾರಂಭ ಸ್ಮರಣೀಯವಾಗುವಂತೆ ಮಾಡುವುದು ಮೋದಿಯ ವೈಶಿಷ್ಟé. 2014ರಲ್ಲಿ ಅವರು ಸಾರ್ಕ್‌ ದೇಶದ ಪ್ರಮುಖರನ್ನು ತನ್ನ ಪದ ಗ್ರಹಣಕ್ಕೆ ಆಹ್ವಾನಿಸಿದ್ದರು. ಈ ಮೂಲಕ ನೆರೆ ದೇಶಗಳ ಜತೆಗಿನ ಬಾಂಧವ್ಯಕ್ಕೆ ಹೊಸ ವ್ಯಾಖ್ಯಾನ ಬರೆದರು. ಈ ಸಲ ಬಿಮ್‌ಸ್ಟೆಕ್‌ ದೇಶಗಳ ಪ್ರಮುಖರನ್ನು ಆಹ್ವಾನಿಸುವ ಮೂಲಕ ಪೂರ್ವದ ದೇಶಗಳ ಜತೆಗಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾದ ಹೆಜ್ಜೆಯಿಟ್ಟಿದ್ದಾರೆ. ಇದೇ ವೇಳೆ ಪಾಕಿಸ್ಥಾನವನ್ನು ಆಹ್ವಾನಿಸದಿರುವ ಮೂಲಕ ಆ ದೇಶಕ್ಕೆ ನೀಡಬೇಕಾದ ಸಂದೇಶವನ್ನು ನೀಡಿದ್ದಾರೆ.

ಯಾವುದೇ ಪಕ್ಷ ಸತತ ಎರಡನೇ ಅವಧಿಗೆ ಹಿಂದಿನ ಅವಧಿಗಿಂತಲೂ ಹೆಚ್ಚಿನ ಬಹುಮತವನ್ನು ಗಳಿಸಿ ಅಧಿಕಾರಕ್ಕೇರಿದ ನಿದರ್ಶನವಿಲ್ಲ. ದೇಶದ ಜನರು ಮೋದಿಗೆ ಈ ಅಪೂರ್ವ ಅವಕಾಶವನ್ನು ನೀಡಿದ್ದಾರೆ. ಇದು ಜನರು ಮೋದಿಯ ಮೇಲಿಟ್ಟಿರುವ ವಿಶ್ವಾಸದ ದ್ಯೋತಕ. ಈ ವಿಶ್ವಾಸಕ್ಕೆ ಧಕ್ಕೆಯಾಗದಂಥ ಆಡಳಿತವನ್ನು ನೀಡುವ ಬಾಧ್ಯತೆ ಮೋದಿ ಸರಕಾರಕ್ಕಿದೆ. ಇದು ಸಾಧ್ಯವಾಗಬೇಕಾದರೆ ಪ್ರತಿ ಯೊಬ್ಬ ಸಂಸದರೂ ಬದ್ಧತೆಯಿಂದ ಕೆಲಸ ಮಾಡಬೇಕು. ಈ ಸಲ ನಿಮ್ಮನ್ನು ಆರಿಸಿರುವುದು ಮೋದಿಯ ಮುಖ ನೋಡಿಯೇ ಹೊರತು ನಿಮ್ಮ ಸಾಧನೆಯನ್ನು ನೋಡಿ ಅಲ್ಲ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದನ್ನು ಬಿಜೆಪಿ ಮತ್ತು ಮಿತ್ರಪಕ್ಷಗಳ ಎಲ್ಲ ಸಂಸದರೂ ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಸಲ ಮೋದಿಯ ಹೆಸರು ಹೇಳಿಕೊಂಡು ಗೆಲ್ಲಬಹುದು ಎಂದು ಭಾವಿಸಬೇಡಿ. ಮುಂದಿನ ಸಲ ನಿಮ್ಮ ಸಾಧನೆಯನ್ನು ಹೇಳಿಕೊಂಡು ಮತ ಕೇಳು ವಂತಾಗಬೇಕು. ನಮ್ಮವರನ್ನು ಮಾತ್ರವಲ್ಲದೆ ವಿರೋಧ ಪಕ್ಷಗಳನ್ನು ಜತೆಗೊಯ್ಯಬೇಕು.ನಮಗೆ ಮತ ಹಾಕಿದವರು ಮಾತ್ರ ನಮ್ಮವರಲ್ಲ, ಮತ ಹಾಕದವರು ನಮ್ಮವರೇ. ನಾವು ಈ ದೇಶದವರು ಮತ್ತು ಈ ದೇಶ ನಮ್ಮದು ಎಂಬ ಮಾತನ್ನು ಮೋದಿಯವರು ಮೇ 23ರಂದು ಹೇಳಿದ್ದಾರೆ. ಅಂತೆಯೇ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌‌ಗೆ ಸಬ್‌ ಕಾ ವಿಶ್ವಾಸ್‌ ಎಂಬ ಇನ್ನೊಂದು ಪದಗುಚ್ಚವನ್ನು ಸೇರಿಸಿದ್ದಾರೆ. ಇದು ಪರೋಕ್ಷವಾಗಿ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಹೇಳಿದ ಮಾತು. ಅವರಲ್ಲಿನ ಭೀತಿಯ ಭಾವನೆಯನ್ನು ದೂರವಾಗಿಸಿ ಅವರೂ ನಮ್ಮವರಾಗಬೇಕೆಂಬ ಉನ್ನತ ಧ್ಯೇಯ ಈ ಮಾತಿನ ಹಿಂದಿದೆ. ಎಲ್ಲರನ್ನೂ ಒಳಗೊಂಡಿರುವ ರಾಜಕೀಯ ಎನ್ನುವುದು ಈ ಮಾತಿನ ಹಿಂದಿನ ಆಶಯ. ಇದು ಸಾಧ್ಯವಾಗ ಬೇಕಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಉಪಕ್ರಮಗಳನ್ನು ಅಧಿಕಾರಕ್ಕೇರಿದ ಮೊದಲ ದಿನ ದಿಂದಲೇ ಆರಂಭಿಸಬೇಕು. ಹಿಂದಿನ ಅವಧಿಯಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ತಂದಿರುವ ಗೋ ರಕ್ಷಣೆ ನೆಪದಲ್ಲಿ ಹಿಂಸಾಚಾರ, ಗುಂಪು ಹಿಂಸೆಗಳಂಥ ಘಟನೆಗಳು ಮರುಕಳಿಸದಂತೆ, ಇಂಥ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊ ಳ್ಳಬೇಕು.

ಶೈಕ್ಷಣಿಕವಾಗಿ, ಬೌದ್ಧಿಕ ಮತ್ತು ಭೌತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ದೇಶವನ್ನು ಸಶಕ್ತಗೊಳಿಸುವ ಗುರಿ ಮೋದಿ ಸರಕಾರದ ಮುಂದಿದೆ. ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಮೂಲಸೌಕರ್ಯ ಸೇರಿದಂತೆ ಎಲ್ಲ ವಲಯಗಳಲ್ಲೂ ಆಗಬೇಕಾದ ಅಭಿವೃದ್ಧಿ ಕೆಲಸಗಳು ಸಾಕಷ್ಟಿವೆ. ದೇಶವನ್ನು ಸರ್ವಾಂಗೀಣವಾಗಿ ಅಭ್ಯುದಯ ಕ್ಕೊಯ್ಯಲು ಮೋದಿಯೇ 2022ರ ಗುರಿಯಿರಿಸಿ ಕೊಂಡಿದ್ದಾರೆ. ಅರ್ಥಾತ್‌ ಇನ್ನು ಮೂರು ವರ್ಷಗಳಲ್ಲಿ ದೃಷ್ಟಿ ಗೋಚರವಾಗುವಂಥ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖ ವಾಗಬೇಕು. ಜನರ ಬದುಕಿನಲ್ಲಿ ಯಾವ ರೀತಿಯ ಗುಣಾತ್ಮಕವಾದ ಬದಲಾವಣೆಗಳಾಗಿವೆ ಎನ್ನುವುದರ ಆಧಾರದ ಮೇಲೆ ಸರಕಾರದ ಸೋಲು ಗೆಲುವನ್ನು ನಿರ್ಧರಿಸುತ್ತಾರೆ. ಜನ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ¨ರಷ್ಟೇ ಸಾಲದು ಅವುಗಳನ್ನು ಪರಿಣಾಮ ಕಾರಿಯಾಗಿ ಜನರಿಗೆ ತಲುಪಿಸುವ ಕೆಲಸವೂ ಆಗಬೇಕು. ಇದಾದರೆ ಮಾತ್ರ ಸಬ್‌ ಕಾ ವಿಕಾಸ್‌ ಆಗಬಹುದು. ವಿಕಾಸ್‌ ಅನುಭವಕ್ಕೆ ಬಂದರೆ ವಿಶ್ವಾಸ್‌ ಸಿಗುವುದು ಕಷ್ಟವೇನಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next