Advertisement

ಇವಿಎಂಗಳು ತಾಂತ್ರಿಕವಾಗಿ ಬಹಳ ಸುರಕ್ಷಿತ: ಮಹಾರಾಷ್ಟ್ರ ಸಿಇಒ

01:20 PM Aug 03, 2019 | Suhan S |

ಮುಂಬಯಿ, ಆ. 2: ಎಲೆಕ್ಟ್ರಾನಿಕ್‌ ಮತ ಯಂತ್ರಗಳು (ಇವಿಎಂ) ತಾಂತ್ರಿಕವಾಗಿ ಬಹಳ ಸುರಕ್ಷಿತ ಮತ್ತು ಅವುಗಳಲ್ಲಿ ಎಂದೂ ಸುಳ್ಳು ಮತಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಹಾಗೂ ಅವುಗಳ ಭದ್ರತೆಯನ್ನು ಮುರಿಯುವುದು ಕೂಡ ಅಸಾಧ್ಯವಾಗಿದೆ ಎಂದು ಗುರುವಾರ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಬಲದೇವ್‌ ಸಿಂಗ್‌ ಹೇಳಿದ್ದಾರೆ.

Advertisement

ಕೆಲವು ರಾಜಕೀಯ ಪಕ್ಷಗಳ ಟೀಕೆಗೆ ಗುರಿಯಾಗಿರುವ ಇವಿಎಂ ಯಂತ್ರವು ವಾಸ್ತವದಲ್ಲಿ ಅತ್ಯಂತ ಸುರಕ್ಷಿತ ಸಾಧನವಾಗಿದೆ ಎಂದು ಸಿಇಒ ಬಲದೇವ್‌ ಸಿಂಗ್‌ ಹೇಳಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಇವಿಎಂಗಳನ್ನು ತಿರುಚಬಹುದಾಗಿದೆ ಎಂದು ಹೇಳಿಕೊಳ್ಳುತ್ತಿವೆ. ಆದರೆ, ಅದು ಸಾಧ್ಯವಿಲ್ಲ ಮಾತು ಎಂದವರು ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶಾದ್ಯಂತ ಸುಮಾರು 61.3 ಕೋಟಿ ಜನರು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಇವಿಎಂಗಳ ಮೂಲಕ ಮತ ಚಲಾಯಿಸಿದರು ಮತ್ತು ವಿವಿಪ್ಯಾಟ್‌ಗಳಲ್ಲಿ ತಮ್ಮ ಮತವನ್ನು ದೃಢಪಡಿಸಿಕೊಂಡಿದ್ದರು. ಇವಿಎಂಗಳೊಂದಿಗೆ ಜೋಡಿಸಲಾದ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳು ಮತದಾರರಿಗೆ ಅವರ ಮತವು ಅವರ ನೆಚ್ಚಿನ ಅಭ್ಯರ್ಥಿಗೆ ಹೋಗಿದೆಯೇ ಎಂಬುದನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಪ್ರತಿ ಇವಿಎಂ ಅನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಮೊಹರು ಹಾಕಲಾಗುತ್ತದೆ. ಅಲ್ಲದೆ, ಅವರ ಪ್ರತಿನಿಧಿಗಳು ಯಂತ್ರದ ಮೊಹರಿಗೆ ಸಹಿ ಕೂಡ ಹಾಕುತ್ತಾರೆ. ಎಲ್ಲಾ ಕ್ಷೇತ್ರಗಳು ಮತ್ತು ಮತದಾನ ಕೇಂದ್ರಗಳಿಗೆ ಇವಿಎಂಗಳನ್ನು ಹಂಚಲಾಗುವುದರಿಂದ ಯಾವ ಮತಗಟ್ಟೆಗೆ ಯಾವ ಯಂತ್ರಗಳನ್ನು ಕಳುಹಿಸಲಾಗುವುದು ಎಂಬ ಬಗ್ಗೆ ಯಾವುದೇ ಪೂರ್ವಭಾವಿ ಕಲ್ಪನೆ ಇರುವುದಿಲ್ಲ. ನಾಮಪತ್ರ ಹಿಂತೆಗೆದುಕೊಳ್ಳುವ ಗಡುವು ಮುಗಿದ ಮರುದಿನವೇ ಸ್ಪರ್ಧೆಯ ಅಭ್ಯರ್ಥಿಗಳ ಪಟ್ಟಿಯನ್ನು ನಿಗದಿಪಡಿಸಲಾಗುತ್ತಿದೆ ಎಂದು ಬಲದೇವ್‌ ಸಿಂಗ್‌ ಹೇಳಿದ್ದಾರೆ.

ಮತದಾನ ಕೇಂದ್ರದಲ್ಲಿ ಬಳಸುವ ಇವಿಎಂ ಯಂತ್ರಗಳ ಸರಣಿ ಸಂಖ್ಯೆಯನ್ನು ಪ್ರತಿ ಅಭ್ಯರ್ಥಿಗೆ ನೀಡಲಾಗುತ್ತದೆ ಎಂದು ಐಎಎಸ್‌ ಅಧಿಕಾರಿ ತಿಳಿಸಿದ್ದಾರೆ. ನಿಜವಾದ ಮತದಾನ ಪ್ರಾರಂಭವಾಗುವ ಮೊದಲು ಪ್ರತಿ ಅಭ್ಯರ್ಥಿಯ ಪ್ರತಿನಿಧಿಯ ಸಮ್ಮುಖದಲ್ಲಿ ಅಣಕು ಮತದಾನ ನಡೆಯುತ್ತದೆ. ಈ ಪ್ರತಿನಿಧಿಗಳು ತಮ್ಮದೇ ಆದ ಮತವನ್ನು ನೋಂದಾಯಿಸಿಕೊಳ್ಳುತ್ತಾರೆ ಮತ್ತು ವಿವಿಪಿಎಟಿ ಸ್ಲಿಪ್‌ ಮೂಲಕ ಇವಿಎಂನಲ್ಲಿ ಫಲಿತಾಂಶವನ್ನು ಪರಿಶೀಲಿಸುತ್ತಾರೆ ಎಂದು ಸಿಂಗ್‌ ಹೇಳಿದ್ದಾರೆ. ಅವರ ಪ್ರಮಾಣೀಕರಣದ ಅನಂತರವೇ ನಿಜವಾದ ಮತದಾನ ಪ್ರಾರಂಭವಾಗುತ್ತದೆ. 2019ರ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳನ್ನು ಒಂದು ಶತಕೋಟಿಗೂ ಹೆಚ್ಚು ಮತದಾನ ಪ್ರತಿನಿಧಿಗಳು ಪ್ರಮಾಣೀಕರಿಸಿದ್ದರು ಎಂದು ಸಿಇಒ ತಿಳಿಸಿದ್ದಾರೆ.

ಮತದಾನ ಪೂರ್ಣಗೊಂಡ ಅನಂತರ, ಈ ಪ್ರತಿನಿಧಿಗಳು ಯಂತ್ರವನ್ನು ಮೊಹರು ಮಾಡಿ ಅದಕ್ಕೆ ಸಹಿ ಮಾಡುತ್ತಾರೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. ವಿವಿಪ್ಯಾಟ್‌ನಲ್ಲಿ ಕೇವಲ 17 ಮತಗಳು ಮಾತ್ರ ತಪ್ಪಾಗಿದ್ದವು. ಆದರೆ ಈ 17 ಮತದಾರರು ಮತ್ತೆ ಮತ ಚಲಾಯಿಸಿದ ಅನಂತರ ಅವರ ಪ್ರತಿಪಾದನೆ ಸುಳ್ಳು ಎಂದು ಸಾಬೀತಾಗಿದೆ ಎಂದು ಸಿಂಗ್‌ ಹೇಳಿದ್ದಾರೆ. ಅಲ್ಲದೆ, ಕೇವಲ 51 ಮತಗಳು (ಒಟ್ಟು ಮತದಾನದ ಶೇ.0.0004) ಮಾತ್ರ ಸರಿಹೊಂದಿರಲಿಲ್ಲ. ಆದರೆ, ಇದು ಮಾನವ ದೋಷದಿಂದಾಗಿ ಸಂಭವಿಸಿದೆಯೇ ಹೊರತೂ ಯಂತ್ರದಲ್ಲಿನ ಯಾವುದೇ ದೋಷದಿಂದಾಗಿ ಅಲ್ಲ ಎಂದವರು ತಿಳಿಸಿದ್ದಾರೆ. ಇವಿಎಂ ಯಂತ್ರಗಳು ಅತ್ಯಂತ ಪ್ರಬಲವಾದ ಭದ್ರತಾ ಪ್ರೋಟೋಕಾಲ್ ಅನ್ನು ಹೊಂದಿವೆ ಮತ್ತು ಅದನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ಸಿಂಗ್‌ ಪ್ರತಿಪಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next