ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದಿರುವ ಚುನಾವಣೆ ಮತ ಎಣಿಕೆ ಮೇ 15ರಂದು ನಗರದ ಹೊರವಲಯದಲ್ಲಿ ಅರ್ಚಕರಹಳ್ಳಿ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬಿಗಿ ಭದ್ರತೆ: ವಿಶಾಲವಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಬಂದಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಕ್ಷೇತ್ರವಾರು ಕೊಠಡಿಗಳಲ್ಲಿ ಶೇಖರಣೆಯಾಗಿದ್ದು, ರಕ್ಷಣೆಗೆ ಕೇಂದ್ರ ಮೀಸಲು ಪಡೆ ಮತ್ತು ಶಸ್ತ್ರ ಸಜ್ಜಿತ ಪೊಲೀಸ್ ಪಡೆದ ನಿಯೋಜನೆಗೊಂಡಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಕೊಠಡಿಗಳಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳು ಸುರಕ್ಷಿತವಾಗಿವೆ. ಇವಿಎಂಗಳು ಇರುವ ಕೊಠಡಿಗಳ ಕಿಟಿಕಿಗಳು, ಬಾಗಿಲುಗಳು, ವೆಂಟಿಲೇಟರ್‌ಗಳನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಕ್ರಿಮಿ ಕೀಟಗಳು ಒಳ ನುಸುಳಲು ಅವಕಾಶವಿಲ್ಲದಂತಾಗಿದೆ. ಇಡೀ ಕಟ್ಟಡ ಕೇಂದ್ರ ಮೀಸಲು ಪಡೆ ಮತ್ತು ಸಶಸ್ತ್ರ ಪೊಲೀಸ್ ಪಡೆಯ ವಶದಲ್ಲಿದೆ.
ಮತ ಏಣಿಕೆ ಹೇಗೆ?: ಮೇ 15ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ. ಬೆಳಗ್ಗೆ ನಿಗದಿತ ಸಮಯಕ್ಕೆ ಮತ ಎಣಿಕೆ ಸಿಬ್ಬಂದಿ, ಅಭ್ಯರ್ಥಿಗಳು ಹಾಗೂ ಅವರಿಂದ ನಿಯೋಜಿತಗೊಂಡಿರುವ ಏಜೆಂಟರು ಆಗಮಿಸಲಿದ್ದಾರೆ. ತದ ನಂತರ ಎಲ್ಲರ ಸಮ್ಮುಖದಲ್ಲಿ ಅಧಿಕಾರಿಗಳು ಇವಿಎಂ ಯಂತ್ರಗಳಿರುವ ಕೊಠಡಿಗಳ ಬೀಗ ತೆಗೆಯುವ ಪ್ರಕ್ರಿಯೆ ನಡೆಯುತ್ತದೆ.
ನಂತರ ಇವಿಎಂ ಯಂತ್ರಗಳು ಮತ ಎಣಿಕೆ ಕೊಠಡಿಗಳಿಗೆ ರವಾನೆಯಾಗುತ್ತವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ಮತ ಎಣಿಕಾ ಕೊಠಡಿಗಳು ಒಟ್ಟು 8 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‌ಗಳನ್ನು ಸ್ಥಾಪಿಸಲಾಗುವುದು. ಅಂದರೆ ಪ್ರತಿ ಕೊಠಡಿಯಲ್ಲಿ 7 ಟೇಬಲ್‌ಗಳು ಇರಲಿವೆ.
ಡಿಸಿ ಭೇಟಿ ಪರಿಶೀಲನೆ: ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಡಾ.ಪ್ರಶಾಂತ್, ಚುನಾವಣಾ ವೀಕ್ಷಕರು ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಮತ ಎಣಿಕೆ ಕೊಠಡಿಗಳಲ್ಲಿ ಪ್ರಗತಿಯಲ್ಲಿರುವ ಮತ ಎಣಿಕೆಗೆ ನಡೆಯುತ್ತಿರುವ ವ್ಯವಸ್ಥೆ ವೀಕ್ಷಿಸಿದರು.