Advertisement

ಇವಿಎಂಗೆ ಅನುಮಾನ, ಮತದಾರರಿಗೆ ಅವಮಾನ ಮಾಡಿದಂತೆ

01:44 AM May 23, 2019 | Sriram |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಳಕೆಯಾಗಿರುವ ಇವಿಎಂಗಳ ಬಗ್ಗೆ ಅನುಮಾನ ಪಡುವುದು ಮತದಾರರಿಗೆ ಅವಮಾನ ಮಾಡಿದಂತೆ ಎಂದು ಕಾಂಗ್ರೆಸ್‌ ಶಾಸಕ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆ ಫ‌ಲಿತಾಂಶ ನೋಡಿ ಕೆಲವರು ಈಗಲೇ ಇವಿಎಂಗಳಲ್ಲಿ ದೋಷವಿದೆ ಎಂದು ಹೇಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹಿಂದಿನ ಚುನಾವಣೆಗಳಲ್ಲಿಯೂ ಇವಿಎಂ ಬಳಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಯುಪಿಎ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಕಳೆದ ವರ್ಷ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆಗಲೂ ಇವಿಎಂಗಳನ್ನು ಬಳಕೆ ಮಾಡಲಾಗಿತ್ತು. ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಅರವಿಂದ್‌ ಕೇಜ್ರಿವಾಲ್ ಅವರೂ ಇವಿಎಂ ಬಳಕೆ ಮಾಡಿದ ಸಂದರ್ಭದಲ್ಲಿಯೇ ಚುನಾವಣೆ ಗಳನ್ನು ಗೆದ್ದು ಅಧಿಕಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ದೇಶದ ಪ್ರಜೆಯಾಗಿ ಈ ಹೇಳಿಕೆ ನೀಡುತ್ತಿದ್ದೇನೆ. ಪಕ್ಷದ ನಾಯಕರ ಗಮನಕ್ಕೂ ಈ ವಿಷಯವನ್ನು ತಂದಿದ್ದೇನೆ. ದೇಶದ ಪ್ರಜೆಗಳಾಗಿ ಇರುವ ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು. ನಾವೇ ನಮ್ಮ ದೇಶದ ವ್ಯವಸ್ಥೆಯನ್ನು ಗೌರವಿಸದಿದ್ದರೆ, ಬೇರೆ ದೇಶಗಳು ಹೇಗೆ ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ಗೌರವ ನೀಡುತ್ತವೆ? ಯಾರಿಗಾದರೂ ಅನುಮಾನಗಳಿದ್ದರೆ, ಅದನ್ನು ಪರಿಹರಿಸಲು ಚುನಾವಣಾ ಆಯೋಗವಿದೆ. ಆಯೋಗ ಜನರ ಸಂಶಯಗಳನ್ನು ನಿವಾರಿಸುವ ಜವಾಬ್ದಾರಿ ಹೊರಬೇಕೆಂದು ಆಗ್ರಹಿಸಿದರು.

ಫ‌ಲಿತಾಂಶದ ನಂತರ ಏನಾದರೂ ಆಗಬಹುದು: ಇದೇ ವೇಳೆ, ಲೋಕಸಭೆ ಚುನಾವಣೆಯ ಫ‌ಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನಾದರೂ ಆಗಬಹುದು ಎಂದು ಹೇಳಿ ಕುತೂಹಲ ಮೂಡಿಸಿದರು. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ನನಗೆ ಬೇಸರವಿತ್ತು. ಈಗ ಯಾವುದೇ ಬೇಸರವಿಲ್ಲ. ಸದ್ಯಕ್ಕೆ ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಯಾರು ಬಲ್ಲರು ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

ರಾಜ್ಯದಲ್ಲಿ ಮೈತ್ರಿ ಪಕ್ಷಗಳು ಜಂಟಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರಿಂದ ಕನಿಷ್ಠ 15 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು. ಇಲ್ಲದಿದ್ದರೆ ನಾಯಕತ್ವದಲ್ಲಿ ಎಡವಿದ್ದೇವೆ ಎಂಬ ಭಾವನೆ ಮೂಡುತ್ತದೆ. ಇನ್ನು ಮಾಜಿ ಸಚಿವ ರೋಷನ್‌ ಬೇಗ್‌ ಸಿದ್ದರಾಮಯ್ಯ ಅವರ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಅವರಿಗೆ ಹಿಂದೆ ಎಲ್ಲ ಸಂದರ್ಭದಲ್ಲಿಯೂ ಸಚಿವ ಸ್ಥಾನ ನೀಡಲಾಗಿದೆ. ಈ ಬಾರಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಸಿದ್ದರಾಮಯ್ಯ ಒಬ್ಬರೇ ಕಾರಣರಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಸಮರ್ಥರು ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next