Advertisement
ಎಕ್ಸಿಟ್ ಪೋಲ್ಗಳಲ್ಲಿ ಮೂಡಿ ಬಂದ ‘ಫಲಿತಾಂಶ’ವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಯಥಾಪ್ರಕಾರ ಇವಿಎಂಗಳತ್ತ ಬೊಟ್ಟು ಮಾಡುತ್ತಿವೆ. ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಮತ್ತು ತಿರುಚಲಾಗಿದೆ ಎನ್ನುವುದು ಪ್ರತಿಪಕ್ಷಗಳ ಗಂಭೀರ ಆರೋಪ.
Related Articles
Advertisement
ಹಾಗಾದರೆ, ಮತದಾನದ ನಂತರ ಇವಿಎಂಗಳನ್ನು ಯಾವ ರೀತಿ ಸುರಕ್ಷಿತವಾಗಿ ಇಡಲಾಗುತ್ತದೆ. ಮತ ಎಣಿಕೆ ವೇಳೆ ಯಾವ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಪಾಲ್ಗೊಳ್ಳುವಿಕೆ ಹೇಗಿರುತ್ತದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಮತದಾನದ ಬಳಿಕವೂ ಇವಿಎಂ ಸುರಕ್ಷಿತ:•ಮತದಾನ ಪೂರ್ಣಗೊಂಡ ನಂತರ, ಚುನಾವಣಾಧಿ ಕಾರಿಯು ಚುನಾವಣಾ ಏಜೆಂಟರ ಸಮಕ್ಷಮದಲ್ಲಿ ಇವಿಎಂ ಮೇಲಿರುವ ‘ಕ್ಲೋಸ್’ ಗುಂಡಿಯನ್ನು ಒತ್ತುತ್ತಾರೆ. ಇದಾದ ನಂತರ, ಇವಿಎಂನಲ್ಲಿ ಯಾವುದೇ ಮತಗಳನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ. ಇದಾದ ನಂತರ, ಇಡೀ ವಿದ್ಯುನ್ಮಾನ ಮತಯಂತ್ರವನ್ನು ಮೊಹರು (ಸೀಲ್) ಮಾಡಲಾಗುತ್ತದೆ. ಈ ಮೊಹರುಗಳ ಮೇಲೆ ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ತಮ್ಮ ಸಹಿ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಮತ ಎಣಿಕೆ ಪ್ರಾರಂಭವಾಗುವ ಮೊದಲು ಆ ಮೊಹರು ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಪರೀಕ್ಷಿಸಬಹುದು. ಇವಿಎಂಗಳನ್ನು ಮತಗಟ್ಟೆಗಳಿಂದ ಮತ ಎಣಿಕೆ ಕೇಂದ್ರದಲ್ಲಿನ ದಾಸ್ತಾನು ಕೋಣೆಗಳಿಗೆ (ಸ್ಟ್ರಾಂಗ್ ರೂಂ) ಸಾಗಿಸುವ ವಾಹನಗಳನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಹಿಂಬಾಲಿಸಿಕೊಂಡು ಹೋಗಬಹುದು. •ಎಣಿಕೆಗಾಗಿ ಇವಿಎಂಗಳನ್ನು ಸಂಗ್ರಹಿಸಿಡುವ ಭದ್ರ ಕೋಣೆಗಳಿಗೂ ಸಹ ಮೊಹರು (ಸೀಲ್)ಮಾಡಲಾಗುತ್ತದೆ ಮತ್ತು ದಿನದ 24 ಗಂಟೆಯೂ ಅವುಗಳ ಮೇಲೆ ನಿಗಾ ಇಡಲಾಗಿರುತ್ತದೆ. ಭದ್ರ ಕೋಣೆಗಳ ಬಾಗಿಲುಗಳ ಮೇಲೆ ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳಿಗೆ ಅವರ ಸ್ವಂತ ಮೊಹರು ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಅವರಿಗೂ ಸಹ ಭದ್ರ ಕೋಣೆಯ ಮೇಲೆ ದಿನದ 24 ಗಂಟೆಗಳ ಕಾಲ ಪಹರೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಭದ್ರ ಕೋಣೆಗಳ ಸುತ್ತಮುತ್ತಲೂ ಬಹು ಸುತ್ತುಗಳ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿರುತ್ತದೆ. •ಸ್ಟ್ರಾಂಗ್ ರೂಂನಿಂದ ಮತ ಎಣಿಕೆ ಕೇಂದ್ರಗಳಿಗೆ ಮತಯಂತ್ರಗಳನ್ನು ತರುವಾಗಲೂ ಬಿಗಿ ಭದ್ರತೆ ಇರುತ್ತದೆ. ಇವುಗಳ ವಿಡಿಯೋ ಮಾಡಲಾಗುತ್ತದೆ. ಇವಿಎಂಗಳನ್ನು ಸ್ಟ್ರಾಂಗ್ ರೂಂನಿಂದ ಮತ ಎಣಿಕೆ ಕೇಂದ್ರಗಳಿಗೆ ಸಾಗಿಸುವ ವಾಹನಗಳನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಹಿಂಬಾಲಿಸಿಕೊಂಡು ಹೋಗಬಹುದು. ವಿವಿಪ್ಯಾಟ್ ಚೀಟಿಗಳ ತಾಳೆ ಪ್ರಕ್ರಿಯೆ ಹೇಗೆ?:ಇವಿಎಂನ ಕಂಟ್ರೋಲ್ ಯೂನಿಟ್‌ನಲ್ಲಿ ಬಿದ್ದ ಮತಗಳನ್ನು ಖಾತರಿಪಡಿಸಿಕೊಳ್ಳಲು ವಿವಿಪ್ಯಾಟ್‌ನ ಮುದ್ರಿತ ಚೀಟಿ ಗಳನ್ನು ಎಣಿಸಿ, ತಾಳೆ ಮಾಡಲಾಗುತ್ತದೆ. ಈ ಹಿಂದೆ, ಕೇಂದ್ರ ಚುನಾವಣಾ ಆಯೋಗ ತನ್ನ ಸ್ವಯಂ ನಿರ್ಧಾರದಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಯಾವುದಾದರೂ ಒಂದು ಮತ ಗಟ್ಟೆಯನ್ನು ಆಯ್ಕೆ ಮಾಡಿಕೊಂಡು ಅದರ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಿ ತಾಳೆ ಮಾಡುತ್ತಿತ್ತು. ಆದರೆ, ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಿ ಅವುಗಳನ್ನು ಇವಿಎಂನ ಕಂಟ್ರೋಲ್ ಯೂನಿಟ್‌ನ ಮತಗಳಿಗೆ ತಾಳೆ ಹಾಕಲಾಗುತ್ತದೆ. ಇದಕ್ಕಾಗಿ ಪ್ರತಿ ಮತ ಎಣಿಕೆಯ 14 ಟೇಬಲ್ಗಳ ಮತಗಟ್ಟೆಗಳ ಪೈಕಿ ಲಾಟರಿ ಎತ್ತುವ ಮೂಲಕ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯನ್ನು ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಮತ್ತು ಚುನಾವಣಾ ಏಜೆಂಟ್ ಸಮ್ಮುಖದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗದಿಂದ ನಿಯೋಜಿಸಲ್ಪಟ್ಟ ವಿಶೇಷ ವೀಕ್ಷಕರ ಸಮಕ್ಷಮದಲ್ಲಿ ನಡೆಸಲಾಗುತ್ತದೆ. ಒಂದು ಮತಗಟ್ಟೆಯ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಿ ತಾಳೆ ಹಾಕಲು ಕನಿಷ್ಠ 45 ನಿಮಿಷ ಬೇಕಾಗುತ್ತದೆ. ಎಲ್ಲ 5 ಮತಗಟ್ಟೆಗಳ ವಿವಿಪ್ಯಾಟ್ನ್ನು ಏಕಕಾಲಕ್ಕೆ ಎಣಿಕೆ ಮಾಡುವುದಿಲ್ಲ. ಬದಲಿಗೆ, ಒಂದಾದ ಮೇಲೆ ಒಂದನ್ನು ಎಣಿಕೆ ಮಾಡಲಾಗುತ್ತದೆ. ಇನ್ನುಳಿದಂತೆ ತಾಂತ್ರಿಕ ದೋಷದಿಂದಾಗಿ ಕಂಟ್ರೋಲ್ ಯೂನಿಟ್ ಡಿಸ್‌ಪ್ಲೇ ಆಗದಿದ್ದರೆ, ಅಣಕು ಮತದಾನದ ಮಾಹಿತಿ ಅಳಿಸದೇ ಇದ್ದರೆ ಮತ್ತು ಮಾನವ ನಿರ್ಮಿತ ಲೋಪಗಳೇನಾದರೂ ಇದ್ದರೂ ಸಹ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಲಾಗುತ್ತದೆ. ಚುನಾವಣಾ ಮಾದರಿ ನೀತಿ ಸಂಹಿತೆ ನಿಯಮಗಳು -1961ರ ಉಪ ನಿಯಮ 56ಡಿ ಅನ್ವಯ ಇವಿಎಂನ ಕೊನೆಯ ಸುತ್ತಿನ ಎಣಿಕೆ ಪೂರ್ಣಗೊಂಡ ಬಳಿಕ ವಿವಿಪ್ಯಾಟ್‌ನಲ್ಲಿರುವ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ. ಜತೆಗೆ, ಇವಿಎಂಗಳ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳಲ್ಲಿ ಪೂರ್ಣ ಪ್ರಮಾಣದ ವಿಶ್ವಾಸ ಮೂಡಿಸಲು ಪ್ರತಿಯೊಂದು ಹಂತದಲ್ಲಿ ಅವರ ಸಕ್ರೀಯ ಮತ್ತು ದಾಖಲೆಸಹಿತ ಪಾಲ್ಗೊಳ್ಳುವಿಕೆಯನ್ನು ಆಯೋಗ ಖಾತರಿಪಡಿಸುತ್ತಿದೆ. ● ರಫೀಕ್ ಅಹ್ಮದ್