ಹೊಸದಿಲ್ಲಿ: 2014ರ ಲೋಕಸಭೆ ಚುನಾವಣೆಯಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಲಂಡನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದ ಸೈಯದ್ ಶುಜಾ ಎಂಬ ವ್ಯಕ್ತಿ ಎಂದೂ ಭಾರತೀಯ ಎಲೆಕ್ಟ್ರಾನಿಕ್ ಕಾರ್ಪೊರೇಶನ್ ಉದ್ಯೋಗಿಯಾಗಿರಲಿಲ್ಲ. ಅಷ್ಟೇ ಅಲ್ಲ, ಆತ ಅರೆಕಾಲಿಕವಾಗಿಯೂ ಕಂಪನಿಗೆ ಸಂಬಂಧಿಸಿದವನಾಗಿರಲಿಲ್ಲ. ಆತ ಉಲ್ಲೇಖೀಸಿರುವ ಯಾವ ವ್ಯಕ್ತಿಗಳೂ ಇಸಿಐಎಲ್‌ಗೆ ಸಂಬಂಧಿಸಿರಲಿಲ್ಲ ಎಂದು ಕಂಪನಿ ಸ್ಪಷ್ಟನೆ ನೀಡಿದೆ.
ಇದೇ ವೇಳೆ, ಸೈಯದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿ ದೆಹಲಿ ಪೊಲೀಸರಿಗೆ ಚುನಾವಣಾ ಆಯೋಗ ದೂರು ನೀಡಿದೆ. ಇದು ಜನರಲ್ಲಿ ಭೀತಿ ಮೂಡಿಸಲು ಮಾಡಿದ ಆರೋಪವಾಗಿದೆ. ಹೀಗಾಗಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಆಯೋಗ ಸೂಚಿಸಿದೆ.
ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮ: ಇವಿಎಂಗಳನ್ನು 2014ರಲ್ಲಿ ಹ್ಯಾಕ್ ಮಾಡಲಾಗಿತ್ತು ಎಂದು ಶುಜಾ ಆರೋಪಿಸಿ ಲಂಡನ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್ ಆಯೋಜಿಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ಆತನ ನಿಜಬಣ್ಣವನ್ನು ನಾವು ಬಯಲು ಮಾಡುತ್ತೇವೆ ಎಂದು ಪ್ರಸಾದ್ ಹೇಳಿದ್ದಾರೆ.
ಸೈಯದ್ ಶುಜಾ ಮಾಡಿದ ಆರೋಪಗಳು ಗಂಭೀರವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆಯಾಗ ಬೇಕಿದೆ. ಅವರ ಆರೋಪಗಳು ನಿಜವಾಗಿದ್ದರೆ, ಅದು ಗಂಭೀರ ವಿಷಯವಾಗಿರುತ್ತದೆ ಹಾಗೂ ಆರೋಪ ಸುಳ್ಳಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ.
ಕಪಿಲ್ ಸಿಬಲ್, ಕಾಂಗ್ರೆಸ್ ನಾಯಕ
ಇವಿಎಂ ಬಗ್ಗೆ ಆರೋಪ ಮಾಡಿರುವ ಸೈಯದ್ ಶುಜಾ ಐಸಿಸ್ ಉಗ್ರ ಸಂಘಟನೆಗೆ ಸೇರಿ ದವನೇ? ಇದು ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರ ಮಾರ್ಗದರ್ಶನದಲ್ಲಿ ಪಾಕಿಸ್ತಾನ ಮತ್ತು ಚೀನಾದ ಅಜೆಂಡಾವನ್ನು ಜಾರಿ ಮಾಡಲು ನಡೆಸಿದ ಯತ್ನವಾಗಿರಲೂಬಹುದು.
ಗಿರಿರಾಜ್ ಸಿಂಗ್, ಕೇಂದ್ರ ಸಚಿವ