ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಥಮ ಸ್ಥಾನ ಬಂದಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಬಂದಿರುವ ಫಲಿತಾಂಶ ನೋಡಿದರೆ ಇವಿಎಂಗಳ ಮೇಲೆ ಅನುಮಾನ ಮೂಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆಯಾಗಬೇಕೆಂದು ಟ್ವೀಟ್ ಕೂಡ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವಿಎಂಗಳಲ್ಲಿ ತೋರಿಸುತ್ತಿರುವ ಅಂಕಿ ಸಂಖ್ಯೆಗಳಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. 15 ದಿನದ ಹಿಂದೆ ಆಗಿರುವ ಮತದಾನಕ್ಕೂ, ಈಗ ಆಗಿರುವ ಮತದಾನಕ್ಕೂ ವ್ಯತ್ಯಾಸ ಇದೆ ಎಂದರೆ, ಈ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಫಲಿತಾಂಶ ನೋಡಿ ನಮಗೆ ಆಶ್ಚರ್ಯವಾಗಿತ್ತು. ಈ ಫಲಿತಾಂಶ ಮೈತ್ರಿ ಪಕ್ಷಗಳಿಗೆ ಹೆಚ್ಚು ಸ್ಫೂರ್ತಿದಾಯಕವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಮಾಡಿದೆ. ಮಂಗಳೂರಿನ ಮೂಡಬಿದರೆಯಲ್ಲಿ ಬಿಜೆಪಿ ನಮಗಿಂತ ಒಂದು ಸ್ಥಾನ ಹೆಚ್ಚು ಗೆದ್ದಿದೆ.
ಮುಲ್ಕಿಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ. ಇದನ್ನು ನೋಡಿದರೆ, ಇವಿಎಂಗಳನ್ನು ಮ್ಯಾನೇಜ್ ಮಾಡಲಾಗುತ್ತದೆಯೇ ಎಂಬ ಬಗ್ಗೆ ಅನುಮಾನ ಮೂಡುತ್ತದೆ. ಇದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಸ್ವಂತ ಬಲವಿದ್ದರೆ ಅಧಿಕಾರ ಹಿಡಿಯಲು ಸೂಚಿಸಲಾಗಿದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಕಡೆ ಜೆಡಿಎಸ್ ಜತೆ ಸೇರಿ ಅಧಿಕಾರ ಹಿಡಿಯುವಂತೆ ಸೂಚಿಸಲಾಗಿದೆ ಎಂದರು.