Advertisement

ಪಿಎಫ್ಐ ದೇಶದ್ರೋಹಿ ಚಟುವಟಿಕೆಗೆ ಸಾಕ್ಷ್ಯ ಲಭ್ಯ: ಸಚಿವೆ ಶೋಭಾ ಕರಂದ್ಲಾಜೆ

06:53 PM Sep 30, 2022 | Team Udayavani |

ಉಡುಪಿ: ಪಿಎಫ್ಐ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷ್ಯಗಳು ದೊರಕಿವೆ. ಇದು ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದ್ದು, ಹಿಂದೂ ಯುವಕರ ಕೊಲೆಯಲ್ಲಿ ಭಾಗಿಯಾಗಿದೆ. ಎನ್‌ಐಎ ಮೂರು ವರ್ಷಗಳಿಂದ ಸಾಕ್ಷ್ಯ ದಾಖಲೆ ಸಂಗ್ರಹಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಉಡುಪಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ಬಾಂಬ್‌ ತಯಾರಿಕೆ, ಶಸ್ತ್ರಾಸ್ತ್ರ ಬಳಕೆ ಬಗ್ಗೆ ಪಿಎಫ್ಐ ತರಬೇತಿ ನೀಡುತ್ತಿತ್ತು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಮಾಡಲಾಗುತ್ತಿತ್ತು. ಶಿವಮೊಗ್ಗದಲ್ಲಿ ಮೂವರು ಎಂಜಿನಿಯರ್‌ಗಳ ಬಂಧನದ ಅನಂತರ ಈ ಮಾಹಿತಿ ಸಿಕ್ಕಿದೆ. ತುಂಗಾ ನದಿ ತೀರದಲ್ಲಿ ಬಾಂಬು ಪ್ರಯೋಗ ಯಶಸ್ವಿಯಾದಾಗ ರಾಷ್ಟ್ರಧ್ವಜ ಅರ್ಧ ಸುಟ್ಟು ಸಂಭ್ರಮಿಸಿದ್ದಾರೆ. ಭಾರತವನ್ನು ದುರ್ಬಲಗೊಳಿಸುವುದು ಪಿಎಫ್ಐ ಉದ್ದೇಶವಾಗಿತ್ತು ಎಂದವರು ಹೇಳಿದ್ದಾರೆ.

ಎಸ್‌ಡಿಪಿಐ ರಾಜಕೀಯ ಪಕ್ಷ
ಎಸ್‌ಡಿಪಿಐ ಒಂದು ರಾಜಕೀಯ ಪಕ್ಷ. ಇದರ ಮೇಲೆ ಕ್ರಮ ಕೈಗೊಳ್ಳಬೇಕಾದದ್ದು ಚುನಾವಣ ಆಯೋಗ. ಎಸ್‌ಡಿಪಿಐನಲ್ಲಿರುವ ಪಿಎಫ್ಐ ಕಾರ್ಯಕರ್ತರ ಬಗ್ಗೆ ತನಿಖೆಯಾಗುತ್ತಿದೆ. ಆಸ್ತಿ ಮುಟ್ಟುಗೋಲಿಗೆ ಗೃಹ ಇಲಾಖೆ ಸೂಚನೆ ನೀಡಿದ್ದು, ದೇಶಾದ್ಯಂತ ಜಿಲ್ಲಾಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ನಾವಿಕನಿಲ್ಲದ ಪಕ್ಷ
ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿರುವ ಕಾಂಗ್ರೆಸ್‌ ಪಕ್ಷ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ದೋಣಿಗೆ ನಾವಿಕನಿಲ್ಲದಂತಾಗಿದೆ. ಆರ್‌ಎಸ್‌ಎಸ್‌ ನಿಷೇಧ ಮಾಡಿದಾಗ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿತಲ್ಲದೇ ನಿಷೇಧ ಮಾಡಿದ ಇಂದಿರಾಗಾಂಧಿಯನ್ನು ಜನ ಸೋಲಿಸಿದ್ದರು. ಆರ್‌ಎಸ್‌ಎಸ್‌ ಯಾವ ದೇಶದ್ರೋಹಿ ಚಟುವಟಿಕೆ ಮಾಡಿದೆ? ಒಂದು ಬಾರಿ ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ಕೊಡಿ, ಮುಸಲ್ಮಾನರನ್ನು ಓಲೈಸಲು ಈ ರೀತಿ ಹೇಳಿಕೆ ಕೊಡಬೇಡಿ. ಕರ್ನಾಟಕವನ್ನು ಪಿಎಫ್ಐ ಫೈನಾನ್ಸಿಯಲ್‌ ಹಬ್‌ ಮಾಡಿದ್ದು ಸಿದ್ದರಾಮಯ್ಯ. ಅವರು ಪಿಎಫ್ಐ ಕಾರ್ಯಕರ್ತರ ಕೇಸು ವಾಪಸ್‌ ತೆಗೆದುಕೊಂಡಿದ್ದೇ ಇದಕ್ಕೆಲ್ಲ ಕಾರಣ. ಆರ್‌ಎಸ್‌ಎಸ್‌ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ, ಅರ್ಹತೆ ಕಾಂಗ್ರೆಸ್‌ಗೆ ಇಲ್ಲ ಎಂದರು.

ಹೆಸರು ಬದಲಾವಣೆ ಇಲ್ಲ
ಶೋಭಾ ಕರಂದ್ಲಾಜೆ ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ? ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. ರಾಜಕಾರಣಿಗಳನ್ನು ಕೆಲವರು ಜೋಕರ್‌ ಅಂದುಕೊಂಡಿದ್ದಾರೆ. ಮಾಧ್ಯಮ, ಸಾಮಾಜಿಕ, ರಾಜಕೀಯ ವಲಯ ಅಥವಾ ವಿಪಕ್ಷದವರು ಅಪಪ್ರಚಾರ ನಿಲ್ಲಿಸಿ ಎಂದರು.

Advertisement

ಜೆಟ್ಟಿ ಕಾಮಗಾರಿ: ಸೂಕ್ತ ತನಿಖೆಯಾಗಲಿ
ಮೀನುಗಾರಿಕಾ ಜೆಟ್ಟಿ ಕಳಪೆ ಕಾಮಗಾರಿಯಾಗಿದ್ದರೆ ತತ್‌ಕ್ಷಣ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರ್ಮಾಣ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಹಾಕಿ, ಆ ನಿರ್ಮಾಣ ಸಂಸ್ಥೆ ಮುಂದೆ ಯಾವುದೇ ಕೆಲಸ ಮಾಡಲು ಅವಕಾಶ ಕೊಡಬಾರದು. ಈ ಕಾಮಗಾರಿಯ ಬಗ್ಗೆ ತನಿಖೆ ಮಾಡಿ, ಠೇವಣಿ ಇಟ್ಟಿದ್ದರೆ ಮುಟ್ಟುಗೋಲು ಹಾಕಿ, ಮೊಟಕುಗೊಂಡ ಕಾಮಗಾರಿಯನ್ನು ತತ್‌ಕ್ಷಣ ಆರಂಭಿಸಬೇಕು ಎಂದು ಶೋಭಾ ಕರಂದ್ಲಾಜೆ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next