Advertisement

ಗೋವಾದಲ್ಲಿ ಮತ್ತೆ ಕನ್ನಡಿಗರಿಗೆ ನೋವು

07:47 AM Sep 27, 2017 | |

ಪಣಜಿ(ವಾಸ್ಕೊ): ಕಡಲ ಕಿನಾರೆ ಬೈನಾದಲ್ಲಿನ ಕನ್ನಡಿಗರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಂಗಳವಾರ ಬೆಳಗ್ಗೆ ಗೋವಾ ಸರ್ಕಾರ ಬಿಗಿ ಬಂದೋಬಸ್ತ್ನಲ್ಲಿ ಜೆಸಿಬಿ ಮೂಲಕ ಬಸವಣ್ಣನ ದೇಗುಲ ಸೇರಿ 55 ಕನ್ನಡಿಗರ ಮನೆಗಳನ್ನು ತೆರವುಗೊಳಿಸಿದ್ದು, ಪುಟ್ಟ ಮಕ್ಕಳನ್ನು ಕರೆದುಕೊಂಡು ಬೀದಿಗೆ ಬಂದಿರುವ ಕನ್ನಡಿಗರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಮಡಗಾಂವ ನಗರ ಪಾಲಿಕೆ, ಹಿರಿಯ ಪೊಲೀಸ್‌ ಅಧಿ ಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಯಿತು. 6 ಜೆಸಿಬಿ ಹಾಗೂ 10ಕ್ಕೂ ಹೆಚ್ಚು ಟಿಪ್ಪರ್‌ಗಳನ್ನು ಬಳಸಲಾಗಿತ್ತು. ಬೆಳಗ್ಗೆ 7.30ಕ್ಕೇ ಈ ಕಾರ್ಯಾಚರಣೆ ಆರಂಭವಾಯಿತು. ತಾವು ಬಾಳಿ ಬದುಕಿದ ಮನೆ ತಮ್ಮ ಕಣ್ಣೆದುರೇ ನುಚ್ಚುನೂರಾ ಗುತ್ತಿದ್ದುದನ್ನು ಕಂಡು ಕನ್ನಡಿಗರು ಕಣ್ಣೀರಿಟ್ಟರು. ಆದರೆ ಗೋವಾ ಸರ್ಕಾರ ಮಾತ್ರ ಈ ಹಿಂದಿನಂತೆಯೇ ತನ್ನ ಕಠೊರ ನೀತಿಯೊಂದಿಗೆ ಕೆಲವೇ ತಾಸುಗಳಲ್ಲಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿ ಕನ್ನಡಿಗರ ಕುಟುಂಬಗಳನ್ನು ಅಕ್ಷರಶಃ ಬೀದಿ ಪಾಲು ಮಾಡಿತು.

Advertisement

ತೆರವು ಏಕೆ?: ಬೈನಾದ ಈ ಖಾಸಗಿ ಜಮೀನಿನಲ್ಲಿ 40 ವರ್ಷಗಳಿಂದ 55 ಕನ್ನಡಿಗರ ಕುಟುಂಬಗಳು ವಾಸಿಸುತ್ತಿದ್ದವು. ಇದು ಚರ್ಚ್‌ ವೊಂದರ ಜಾಗವಾಗಿತ್ತು. ಹಲವು ವರ್ಷಗಳ ನಂತರ ಚರ್ಚ್‌ ಈ ಜಾಗವನ್ನು ಆನಂದ ಬೋಸ್‌ ಕಂಪನಿಗೆ ಮಾರಾಟ ಮಾಡಿತ್ತು. ಆಗ ಈ ಜಾಗದಲ್ಲಿ ವಾಸಿಸುವ ಕನ್ನಡಿಗರ ಕುಟುಂಬಗಳ ಜವಾಬ್ದಾರಿ ತೆಗೆದುಕೊಳ್ಳುವ ಕುರಿತಂತೆಯೂ ಕಂಪನಿಗೆ ಸೂಚಿಸಿತ್ತು ಎನ್ನಲಾಗಿದೆ. ಆದರೆ ಆ ಕಂಪನಿಯು ಕನ್ನಡಿಗರಿಗೆ ಯಾವುದೇ ಪರಿಹಾರ ಅಥವಾ ಪುನರ್ವಸತಿಯನ್ನೂ ನೀಡದೆ ತೆರವುಗೊಳಿಸಿ 
ಅಟ್ಟಹಾಸ ಮೆರೆದಿದೆ.

ಬಸವಣ್ಣನ ಗುಡಿ ತೆರವು: ಸುಮಾರು 40ಕ್ಕೂ ಹೆಚ್ಚು ವರ್ಷಗಳಿಂದ ಬೈನಾ ಬೀಚ್‌ ನಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತಿದ್ದ ಬಸವಣ್ಣನ ಗುಡಿಯನ್ನು ತೆರವುಗೊಳಿಸುವ ಮೂಲಕ ಆಸ್ತಿಕರ ಭಾವನೆಗೆ ಗೋವಾ ಸರ್ಕಾರ ಧಕ್ಕೆಯುಂಟು ಮಾಡಿದೆ. ಗುಡಿಯನ್ನಾದರೂ ಉಳಿಸಿ ಎಂದು ಕನ್ನಡಿಗರು ಬೇಡಿಕೊಂಡರೂ ಕೇಳಲಿಲ್ಲ. ದೇವಾಲಯ ತೆರವುಗೊಳಿಸುತ್ತಿರುವ ದೃಶ್ಯ ನೋಡಲಾಗದೆ ಹಲವು ಕನ್ನಡಿಗರು ಕಣ್ಣೀರಿಡುತ್ತ ಬೇರೆಡೆ ತೆರಳುತ್ತಿದ್ದರು.

ಕೈ ಎತ್ತಿದ ರಾಜ್ಯ ಸರ್ಕಾರ: 2004ರಿಂದ ಬೈನಾದಲ್ಲಿರುವ ಕನ್ನಡಿಗರ ಮೇಲೆ ಗೋವಾ ಸರ್ಕಾರ ದಬ್ಟಾಳಿಕೆ ನಡೆಸುತ್ತಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಇವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕನ್ನಡಿಗರ ಮನೆ ಉಳಿಸಿಕೊಳ್ಳಲು ಹೋರಾಟ ನಡೆಸಲು ಯಾರೂ ಮುಂದೆ ಬಾರದಿರುವುದು ಖೇದಕರ ಸಂಗತಿ. ಬೈನಾದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಕನ್ನಡಿಗರ ಮಕ್ಕಳು ಅಲ್ಲಿಯೇ ಸಮೀಪವಿರುವ ಕನ್ನಡ ಶಾಲೆಗೆ ತೆರಳುತ್ತಿದ್ದರು. ಇದೀಗ ಮನೆಯನ್ನೇ ಕಳೆದುಕೊಂಡಿರುವ ಈ ಕುಟುಂಬಗಳಿಗೆ ವಾಸ್ತವ್ಯಕ್ಕೆ ಜಾಗವಿಲ್ಲದೆ ಮಕ್ಕಳ ವಿದ್ಯಾಭ್ಯಾಸವೂ ಕುಂಠಿತಗೊಳ್ಳುವಂತಾಗಿದೆ. ಅದೆಷ್ಟೊ ಕನ್ನಡಿಗರ ಮಕ್ಕಳ ಪಠ್ಯಪುಸ್ತಕಗಳೂ ಜೆಸಿಬಿ ಯಂತ್ರದ ಅಡಿಯಲ್ಲಿ ಸಿಕ್ಕು ನುಜ್ಜುಗುಜ್ಜಾಗಿ ಹೋಗಿದೆ. ತೆರವುಗೊಳಿಸಿದ ಜಾಗವನ್ನು ಬಿಲ್ಡರ್‌ರೊಬ್ಬರು ಖರೀದಿಸಿದ್ದು ಕೆಲವೇ ದಿನಗಳಲ್ಲಿ ಇಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಬಡ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿ ಇದೇ ಜಾಗದಲ್ಲಿ ಕೋಟ್ಯಂತರ ರೂ. ಗಳಿಸುವ ಪ್ಲಾನ್‌ ರೂಪಿಸಲಾಗಿದೆ.

ಬೈನಾ ಕನ್ನಡಿಗರ ಮನೆಗಳ ತೆರವು: ಕನ್ನಡ ಗೆಳೆಯರ ಬಳಗ ಖಂಡನೆ
ಬೆಂಗಳೂರು: ಶತಮಾನಗಳಿಂದ ಗೋವಾದ ಬೈನಾದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಕ್ಕಲೆಬ್ಬೆಸುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ನೇತೃತ್ವದ ಅಲ್ಲಿನ ಸರ್ಕಾರದ ಕ್ರಮ ಅಮಾನವೀಯ ಮತ್ತು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದಿರುವ ಕನ್ನಡ ಗೆಳೆಯರ ಬಳಗ, ಗೋವಾ ಸರ್ಕಾರದ ಕ್ರಮವನ್ನು ಖಂಡಿಸಿದೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಬಳಗದ ಗೌರವ ಸಲಹೆಗಾರ ಡಾ.ಎಂ.ಚಿದಾನಂದ ಮೂರ್ತಿ ಮತ್ತು ಸಂಚಾಲಕ ರಾ.ನಂ.ಚಂದ್ರಶೇಖರ್‌, ಮನೆ ತೆರವುಗೊಳಿಸುವ ವಾಸ್ಕೋ ನಗರ ಪಾಲಿಕೆಯ ಸೆ. 7ರ ಆದೇಶವನ್ನು ಬೈನಾ ಕನ್ನಡಿಗರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಕೋರ್ಟ್‌ ಈ ಆದೇಶ ರದ್ದುಪಡಿಸಿದ್ದರೂ ಗೋವಾ ಸರ್ಕಾರ ಮನೆಗಳನ್ನು ತೆರವುಗೊಳಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆಸಗಿದ ಅವಮಾನ. ಇದನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿ ಗೋವಾ ಸರ್ಕಾರದ ಕ್ರಮವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದು ಕಠಿಣ ಕ್ರಮಕ್ಕೆ ಒತ್ತಾಯಿಸಬೇಕು ಮತ್ತು ಸಂಕಷ್ಟಕ್ಕೊಳಗಾಗಿರುವ ಕನ್ನಡಿಗರಿಗೆ ನೆರವಾಗಬೇಕು. ಜತೆಗೆ ಪರಿಸ್ಥಿತಿ ಪರಿಶೀಲಿಸಲು ರಾಜ್ಯದ ಉನ್ನತ ಮಟ್ಟದ ಅಧಿಕಾರಗಳನ್ನು ಅಲ್ಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶದ ರಕ್ಷಣಾ ಸಚಿವರಾಗಿದ್ದ ಪರಿಕ್ಕರ್‌ ಅವರು 2004ರಲ್ಲಿ ಮುಖ್ಯಮಂತ್ರಿ ಯಾಗಿದ್ದಾಗಲೂ ಇದೇ ರೀತಿ ಕನ್ನಡಿಗರ ಮನೆ ಕೆಡವಿಸಿ ಅವರನ್ನು ನಿರಾಶ್ರಿತರನ್ನಾಗಿ ಮಾಡಿದ್ದರು. ಅವರ ಈ ದುರಭಿಮಾನ ದೇಶದ ಏಕತೆಗೆ ಅಪಾಯ ಎಂಬುದನ್ನು ಕೇಂದ್ರ ಸರ್ಕಾರ ಪರಿಗಣಿಸಿ ಗೋವಾ ಸರ್ಕಾರಕ್ಕೆ ಇಂತಹ ಕ್ರಮ ನಿಲ್ಲಿಸುವಂತೆ ಹಾಗೂ ಆಗಿರುವ ತಪ್ಪನ್ನು ತಿದ್ದಿಕೊಳ್ಳುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

ಗೋವಾದ ಬೈನಾ ಬೀಚ್‌ನಲ್ಲಿ ಕನ್ನಡಿಗರ ಮನೆ ನೆಲಸಮ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿಗಳಿಗೆ ಕಟು ಪತ್ರ ಬರೆಯಲಾಗುವುದು.
●ಸಿದ್ದರಾಮಯ್ಯ, ಮುಖ್ಯಮಂತ್ರಿ

ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕನ್ನಡಿಗರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ.
●ಎಚ್‌.ಎಂ.ರೇವಣ್ಣ, ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next