ಚನ್ನಗಿರಿ: ದೇಶದ ಆಧಾರಸ್ತಂಭವಾಗಿರುವ ಮಕ್ಕಳಲ್ಲಿ ಸಾಮಾಜಿಕ ಮೌಲ್ಯದ ಪರಿಪಾಲನೆ, ಅನ್ನದಾಸೋಹದ ಮೌಲ್ಯವನ್ನು ಸ್ವಾಮೀಜಿ ಜೀವಂತಗೊಳಿಸಿದ್ದಾರೆ. ಕಾಯಕದ ಜೊತೆಯಲ್ಲಿ ದಾಸೋಹದ ಮನೋಭಾವ ಅವರ ಶಿಷ್ಯವೃಂದಲ್ಲಿ ಮನೆಮಾಡಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಬಣ್ಣಿಸಿದ್ದಾರೆ.
ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಸಿದ್ಧಗಂಗಾಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಪುಣ್ಯತಿಥಿ ಹಾಗೂ ಅನ್ನದಾಸೋಹ ಕಾರ್ಯಕ್ರದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಿದ್ಧಗಂಗಾ ಶ್ರೀಗಳು ಜೀವಂತವಾಗಿದ್ದಾರೆ. ಅವರು ಬಿಟ್ಟುಹೋಗಿರುವ ಶಿಷ್ಯವೃಂದಲ್ಲಿ ಶ್ರೀಗಳನ್ನು ಕಾಣಬಹುದಾಗಿದೆ ಎಂದರು. ಶಿವಕುಮಾರ ಸ್ವಾಮೀಜಿ ಪುಣ್ಯತಿಥಿ ಅಂಗವಾಗಿ ಗ್ರಾಮಸ್ಥರ ಸಹಯೋಗದಲ್ಲಿ ಹಳೆಯ ವಿದ್ಯಾರ್ಥಿಗಳು ಅನ್ನದಾಸೋಹ ಆಯೋಜಿಸಿದ್ದರು.
ತಾವರಕೆರೆ ಗ್ರಾಮ: ಶತಾಯುಷಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾಮಠದ ಶಿವೈಕ್ಯ ಡಾ| ಶಿವಕುಮಾರ ಸ್ವಾಮೀಜಿಯವರಿಗೆ, ತಾವರಕೆರೆ ಶಿಲಾಮಠದ ಶ್ರೀ ಅಭಿನಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು.
ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, 12ನೇಶತಮಾನದಲ್ಲಿ ಕಾಯಕಕ್ಕೆ ಮಹತ್ವ ನೀಡಿದ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಜೀವನದುದ್ದಕ್ಕೂ ಸ್ವಾಮೀಜಿ ಮೈಗೂಡಿಸಿಕೊಂಡಿದ್ದರು. ಯಾವುದೇ ಜಾತಿ ತಾರತಮ್ಯವಿಲ್ಲದೆ ಪ್ರತಿನಿತ್ಯ ಸಾವಿರಾರು ಬಡಮಕ್ಕಳಿಗೆ ಅನ್ನ, ಅಕ್ಷರ ದಾಸೋಹ ನೀಡುತ್ತ 111 ವರ್ಷಗಳ ಕಾಲ ಸಾರ್ಥಕವಾಗಿ ಬಾಳಿದರು ಎಂದರು. ಶಾಲಾ ಮಕ್ಕಳಿಗೆ ಪ್ರಸಾದ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕೆ. ಗಾಣದಕಟ್ಟೆ ಗ್ರಾಮ: ಗ್ರಾಮದಲ್ಲಿ ಸಿದ್ಧಗಂಗಾಮಠದ ಡಾ| ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು. ಹಿರೇಮಠದ ಶ್ರೀ ಕೇದಾರ ಶಿವಶಾಂತವೀರ ಶಿವವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಲಿಂಗೆ„ಕ್ಯ ಶ್ರೀಗಳು ಮಾಡಿರುವ ಸಾಮಾಜಿಕ ಸೇಶ್ರೀಗಳು ತಮ್ಮ ಸೇವೆ, ಕಳಕಳಿ, ತ್ರಿವಿಧ ದಾಸೋಹದಿಂದಲೇ ಲಕ್ಷಾಂತರ ಭಕ್ತರ ಮನದಲ್ಲಿ ಉಳಿದಿದ್ದಾರೆ. ಶ್ರೀ ಮಠದಲ್ಲಿ ಶಿಕ್ಷಣ ಪಡೆದ ಅನೇಕರು ದೇಶ, ವಿದೇಶಗಳಲ್ಲಿ ನೆಲೆಸಿ ಶ್ರೀಗಳ ತತ್ವ ಪಾಲನೆ ಮಾಡುತ್ತಿರುವುದಕ್ಕೆ ಶ್ರೀಗಳು ಅವರಿಗೆ ನೀಡಿರುವ ಸಂಸ್ಕಾರ ಕಾರಣವಾಗಿದೆ ಎಂದರು. ಶಾಲಾ ಮಕ್ಕಳಿಗೆ ಗ್ರಾಮಸ್ಥರು ಅನ್ನದಾಸೋಹ ಆಯೋಜಿಸಿದ್ದರು.