Advertisement

ತೀರ್ಪಿಗೆ ಮುನ್ನವೇ ಎಲ್ಲೆಡೆ ಕಟ್ಟೆಚ್ಚರ

09:42 AM Nov 06, 2019 | Team Udayavani |

ಲಕ್ನೋ/ಹೊಸದಿಲ್ಲಿ: ಇನ್ನು ಕೆಲವೇ ದಿನಗಳಲ್ಲಿ ದೇಶದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಪ್ರಕರಣವೆಂದೇ ಭಾವಿಸಲಾಗಿರುವ ಅಯೋಧ್ಯೆಯ ಭೂ ವಿವಾದದ ತೀರ್ಪು ಹೊರಬೀಳಲಿದೆ. ಧಾರ್ಮಿಕ ಮತ್ತು ಭಾವನಾತ್ಮಕ ಹಿನ್ನೆಲೆಯುಳ್ಳ ಈ ವಿಷಯ ಸಂಬಂಧ ತೀವ್ರ ಕಟ್ಟೆಚ್ಚರ ವಹಿಸಿರುವ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳು ಈಗಿ ನಿಂದಲೇ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಯಾವುದೇ ಕಾರಣಕ್ಕೂ ತೀರ್ಪು ಹೊರಬಿದ್ದ ಮೇಲೆ ಕೋಮು ಗಲಭೆಗಳಾಗದಂತೆ ಭದ್ರತೆ ಏರ್ಪಡಿಸಲಾಗುತ್ತಿದೆ. ನ.17ರಂದು ಸುಪ್ರೀಂ ಕೋರ್ಟ್‌ ಸಿಜೆಐ ನಿವೃತ್ತರಾಗಲಿದ್ದು, ಅದಕ್ಕಿಂತ ಮೊದಲು ತೀರ್ಪು ಹೊರಬೀಳುವ ನಿರೀಕ್ಷೆ ಹೊಂದಲಾಗಿದೆ.

Advertisement

ಅಯೋಧ್ಯೆಯಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು, ಮಾಧ್ಯಮಗಳ ಚರ್ಚೆಗೆ ನಿರ್ಬಂಧ ಹೇರಲಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಯಾರಿಗೂ ನೋವಾಗದ ರೀತಿಯಲ್ಲಿ ವರ್ತಿಸಿ, ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂಥ ಪೋಸ್ಟ್‌ ಗಳನ್ನು ಶೇರ್‌ ಮಾಡುವುದು, ಲೈಕ್‌, ಫಾರ್ವರ್ಡ್‌ ಮಾಡಬೇಡಿ ಎಂದು ಸ್ಥಳೀಯ ಜಿಲ್ಲಾಧಿಕಾರಿ ಕೆಲವು ನಿರ್ದೇಶನ ನೀಡಿದ್ದಾರೆ.

ಅಗತ್ಯಬಿದ್ದರೆ ಎನ್‌ಎಸ್‌ಎ ಎಲ್ಲವನ್ನೂ ಎದುರಿಸಲು ರಾಜ್ಯ ಪೊಲೀಸರು ಸಿದ್ಧವಾಗಿದ್ದಾರೆ ಹಾಗೂ ಯಾರಾದರೂ ಕಾನೂನು ಸುವ್ಯವಸ್ಥೆಗೆ ಅಡ್ಡಿ ಮಾಡಿದಲ್ಲಿ ಅಂಥವರ ವಿರುದ್ಧ ಅಗತ್ಯಬಿದ್ದರೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ಉತ್ತರ ಪ್ರದೇಶ ಪೊಲೀಸ್‌ ಮುಖ್ಯಸ್ಥ ಒ.ಪಿ. ಸಿಂಗ್‌ ತಿಳಿಸಿದ್ದಾರೆ.

ಇನ್ನೊಂದೆಡೆ, ದೇಶದ ಶಾಂತಿಯುತ ವಾತಾವರಣಕ್ಕೆ ಧಕ್ಕೆಯಾಗು ವಂಥ ಯಾವುದೇ ಹೇಳಿಕೆ ನೀಡದಿರಿ ಎಂದು ಅಲಿಗಢ ಮುಸ್ಲಿಂ ವಿವಿ ಕುಲಪತಿ ತಾರಿಖ್‌ ಮನ್ಸೂರ್‌ ಅವರು ಸಲಹೆ ನೀಡಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವಂಥ ವದಂತಿಗಳಿಗೆ ಕಿವಿಗೊಡದಿರಿ ಎಂದೂ ಅವರು ತಿಳಿಸಿದ್ದಾರೆ.

ಬೇಕಾಬಿಟ್ಟಿ ಹೇಳಿಕೆ ಬೇಡ
ಯಾವುದೇ ಕಾರಣಕ್ಕೂ ಇನ್ನೊಬ್ಬರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ವರ್ತಿಸಬೇಡಿ, ಹೇಳಿಕೆ ಕೊಡಬೇಡಿ ಎಂದು ಇತ್ತೀಚೆಗಷ್ಟೇ ಆರ್‌ಎಸ್‌ಎಸ್‌ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿತ್ತು. ಈಗ ಬಿಜೆಪಿ ಕೂಡ ಇದೇ ಮಾದರಿಯಲ್ಲಿ ತನ್ನ ವಕ್ತಾರರು, ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದೆ. ಈ ಸಂಬಂಧ ಪಕ್ಷದ ವಕ್ತಾರರು, ಮಾಧ್ಯಮ ಮತ್ತು ಸೋಶಿಯಲ್‌ ಮೀಡಿಯಾ ಸೆಲ್‌ಗ‌ಳ ಮುಖ್ಯಸ್ಥರ ಸಭೆ ನಡೆಸಲಾಗಿದ್ದು, ಇದರಲ್ಲಿ ಇಂಥ ಸೂಚನೆ ನೀಡಲಾಗಿದೆ.

Advertisement

ಅಯೋಧ್ಯೆ ಜಿಲ್ಲಾಧಿಕಾರಿ ನಿರ್ದೇಶನಗಳೇನು?
– ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮ, ಸಮುದಾಯ, ಭಕ್ತರು, ಗಣ್ಯ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದಕ್ಕೆ, ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡುವುದಕ್ಕೆ ನಿಷೇಧ

– ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ

– ಅಯೋಧ್ಯೆಯಲ್ಲಿ ಈ ವಿಚಾರ ಕುರಿತು ಮಾಧ್ಯಮ ಸಂವಾದಗಳಿಗೆ ತಡೆ

– ನಿಷೇಧಾಜ್ಞೆ ಜಾರಿ, ಜನರು ಗುಂಪುಗೂಡುವಂತಿಲ್ಲ.

– ಸಾರ್ವಜನಿಕ ಪ್ರದೇಶಗಳಲ್ಲಿ ಭದ್ರತೆಗೆ ನಿಯೋಜಿಸಿದ ಸಿಬಂದಿ ಹೊರತುಪಡಿಸಿ ಬೇರಾರೂ ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ಒಯ್ಯುವಂತಿಲ್ಲ

– ಪರವಾನಿಗೆ ಇದ್ದರೂ ಅಂಥ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವಂತಿಲ್ಲ

– ಜಿಲ್ಲೆಯ ಎಲ್ಲೂ ಅನುಮತಿಯಿಲ್ಲದೆ ಪೋಸ್ಟರ್‌, ಹೋರ್ಡಿಂಗ್‌, ಬ್ಯಾನರ್‌ ಹಾಕುವಂತಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next