ದಾವಣಗೆರೆ: ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾನೂನುಗಿಂತಲೂ ಸಾಮಾಜಿಕ ಬದಲಾವಣೆ ಪ್ರಮುಖ ಪಾತ್ರ ಮುಖ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇಧ, ಫೋಕೊ, ಅಂಗವಿಕಲರ, ಆರ್‌ಟಿಇ ಕಾಯ್ದೆ ವಿಷಯಗಳ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಾಲ್ಯವಿವಾಹ, ಬಾಲಕಾರ್ಮಿಕತೆಯ ಮೂಲೋತ್ಪಾಟನೆ ನಿಟ್ಟಿನಲ್ಲಿ ಸರ್ಕಾರ, ಇಲಾಖೆಯ ಮೂಗುದಾರ ಹಿಡಿಯಲಿಕ್ಕೆ ಆಗುವುದಿಲ್ಲ. ಕಾಯ್ದೆ, ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ, ತಡೆಗಟ್ಟುವಂತೆ ಮಾಡಬಹುದು. ಸಂಪೂರ್ಣ ಪ್ರಮಾಣದ ನಿರ್ಮೂಲನೆಗೆ ಸಮಾಜದಲ್ಲಿನ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಎಂದರು.
ಪ್ರತಿಯೊಬ್ಬರಿಗೂ ಆತ್ಮ ಮತ್ತು ಸಾಮಾಜಿಕ ಭಯ ಇರಲಿದೆ. ಆ ಎರಡನ್ನೂ ಮೀರಿದಾಗ ಕಾನೂನು ಭಯ ಕಾಡಲಾರಂಭಿಸುತ್ತದೆ. ಎಲ್ಲದರಲ್ಲಿಯೂ ಕಾನೂನಿನ ಭಯ ಹುಟ್ಟಿಸಲು ಸಾಧ್ಯವಿಲ್ಲ. ಅದಕ್ಕೆ ಸಾಮಾಜಿಕ ಬದಲಾವಣೆ ಆಗಬೇಕು ಎಂಬುದು ಅತೀ ಮುಖ್ಯ ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯಲ್ಲಿ ಇರುವಂತೆ ಬಾಲ್ಯವಿವಾಹ ಪದ್ಧತಿ ದಾವಣಗೆರೆ ಜಿಲ್ಲೆಯಲ್ಲೂ ಇದೆ.
ಅದನ್ನು ತಡೆಗಟ್ಟುವುದು ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. ಎಲ್ಲರೂ ಕೈ ಜೋಡಿಸಿದಾಗ ನಿರ್ಮೂಲನೆ ಸಾಧ್ಯ ಎಂದು ತಿಳಿಸಿದರು. ಕುಟುಂಬದಲ್ಲಿ ಮಗುವನ್ನು ಯಾವ ರೀತಿಯ ಸಂಸ್ಕಾರ, ಸಂಸ್ಕೃತಿಯಲ್ಲಿ ಬೆಳೆಸುತ್ತೇವೆಯೋ ಆ ಮಗು ಸಮಾಜದಲ್ಲಿ ಅದೇ ರೀತಿ ನಡೆದುಕೊಳ್ಳುತ್ತದೆ. ಹಾಗೆಯೇ ಸಮಾಜದ ಸ್ವತ್ಛತೆಗೆ ಸಂಸ್ಕಾರವೂ ಅಗತ್ಯ.
ಸಾಮಾಜಿಕ ಅನಿಷ್ಠ ಪದ್ಧತಿಗಳಿವೆ ಎಂದ ಮಾತ್ರಕ್ಕೆ ಇಡೀ ಸಮಾಜಕ್ಕೆ ಬೇಲಿ ಕಟ್ಟಲ್ಲಿಕ್ಕೆ ಆಗುವುದೇ ಇಲ್ಲ. ಸಮಾಜ, ಮನೋಭಾವ ಬದಲಾಗಬೇಕು ಎಂದು ಅವರು ಪ್ರತಿಪಾದಿಸಿದರು. ಒಬ್ಬ ಮಹಿಳೆ ಯಾವುದೇ ರೀತಿಯ ಭಯ ಇಲ್ಲದೆ ಮುಕ್ತವಾಗಿ ಓಡಾಡುವಂಥಹ ವಾತಾವರಣ ನಿರ್ಮಿಸಿದಾಗ ಅದು ನಾಗರಿಕ ಸಮಾಜ ಆಗುತ್ತದೆ. ಅಂತಹ ವಾತಾವರಣ ನಿರ್ಮಾಣವಾಗದೇ ಹೋದಾಗ ಅದು ನಾಗರಿಕ ಸಮಾಜ ಆಗಲಿಕ್ಕೆ ಸಾಧ್ಯವೇ ಇಲ್ಲ.
ಅಂಥಹ ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಬೇಕಾದಂತಹ ಆಲೋಚನೆಗಳು ಶಕ್ತಿಯುತವಾಗಬೇಕು ಎಂದು ತಿಳಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಯಶೋಧಾ ಎಸ್. ವಂಟಿಗೋಡಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಹೇಗೆ ನಡೆದುಕೊಳ್ಳಬೇಕು ಎಂಬ ಸಂಸ್ಕಾರವನ್ನು ಕುಟುಂಬ ಕಲಿಸಬೇಕು. ಈಗಿನ ವಾತಾವರಣದಲ್ಲಿ ಯಾವುದೇ ರೀತಿಯ ಘಟನೆ ನಡೆದ ತಕ್ಷಣವೇ ಅಲ್ಲಿ ಪೊಲೀಸರು ಪ್ರತ್ಯಕ್ಷವಾಗಬೇಕು ಎಂಬ ನಿರೀಕ್ಷೆಯೇ ಹೆಚ್ಚಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಭ ಮಾತನಾಡಿದರು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಬಿ. ರೂಪಾನಾಯ್ಕ, ವೈ. ಮರಿಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕುಮಾರ್ ಹನುಮಂತಪ್ಪ, ಹಿಂದುಳಿದ ವರ್ಗಗಳ ಇಲಾಖೆ ಉಪ ನಿರ್ದೇಶಕ ನೂರ್ ಮನ್ಸೂರ್ ಇತರರು ಇದ್ದರು. ಎಚ್.ಸಿ. ಕೆಂಚಪ್ಪ, ಮೊರಾರ್ಜಿ ಜಾಗೃತಿ ಗೀತೆಗಳಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್ ಸ್ವಾಗತಿಸಿದರು. ಶೃತಿ ನಿರೂಪಿಸಿದರು. ಪ್ರತಿಭಾ ವಂದಿಸಿದರು.