ರಾಜ್ಯ ಗೃಹ ಇಲಾಖೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ನಡುವಿನ ಪತ್ರ ಸಮರ ಇಲಾಖೆಯ ಜತೆಗೆ ಸರಕಾರದ ಮತ್ತು ಪ್ರಮುಖವಾಗಿ ಗೃಹ ಇಲಾಖೆಯ ಆಡಳಿತ ವೈಖರಿಯ ಬಗ್ಗೆಯೂ ಸಾರ್ವಜನಿಕರು ಚರ್ಚಿಸುವಂತೆ ಮಾಡಿದೆ. ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಶಿಸ್ತಿಗೆ ತನ್ನದೇ ಆದ ಮಹತ್ವ ಹೊಂದಿದೆ. ಸರಕಾರಿ ವ್ಯವಸ್ಥೆಯಲ್ಲಿ ಯಾವುದೇ ಇಲಾಖೆಯಲ್ಲಿ
ಸಿಬಂದಿ ಹಾಗೂ ಅಧಿಕಾರಿಗಳ ನಡುವಿನ ಆಂತರಿಕ ಸಂಘರ್ಷ ಬಹಿರಂಗ ಗೊಂಡರೂ ಅದು ಅಷ್ಟೊಂದು ಮಹತ್ವ ಪಡೆದುಕೊಳ್ಳುವುದಿಲ್ಲ. ಆದರೆ ಗೃಹ ಇಲಾಖೆಯಲ್ಲಿ ಕೆಳ ಹಂತದ ಪೊಲೀಸ್ ಸಿಬಂದಿ ನಡುವೆ ಸಣ್ಣ ಗೊಂದಲ ಸೃಷ್ಟಿಯಾದರೂ ಗೃಹ ಇಲಾಖೆಯ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತವೆ.
ನಿರ್ಭಯ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿರುವ ಸೇಫ್ ಸಿಟಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯ ಬಗ್ಗೆ ಗೃಹ ಕಾರ್ಯದರ್ಶಿ ಹೆಸರಿನಲ್ಲಿ ಮಾಹಿತಿ ಪಡೆಯಲು ಪ್ರಯತ್ನಿಸಿದವರ ವಿರುದ್ಧ ತನಿಖೆ ನಡೆಸುವಂತೆ ನಿರ್ಭಯ ಯೋಜನೆಯ ಇ ಟೆಂಡರ್ ಆಹ್ವಾನ ಸಮಿತಿ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ ನಿಂಬಾಳ್ಕರ್ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಯಾಗಿ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ಗೆ ಪತ್ರ ಬರೆದು, ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧ ಐಎಂಎ ಪ್ರಕರಣದಲ್ಲಿ ಚಾರ್ಜ್‌ಶೀಟ್ ಹಾಕಲು ಅನುಮತಿ ನೀಡಿರುವುದಕ್ಕೆ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿ ಆರೋಪ ಮಾಡಿರುವುದು ಇಬ್ಬರು ಅಧಿಕಾರಿಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಬಹಿರಂಗಗೊಳ್ಳಲು ಕಾರಣವಾಯಿತು.
ಈಗ ಗೃಹ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳ ನಡುವೆ ಬಹಿರಂಗ ಆರೋಪ ಪ್ರತ್ಯಾರೋಪ ನಡೆಯುತ್ತಿರುವುದು ಶಿಸ್ತಿನ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅನುಮಾನ ಮೂಡಿಸಿದೆ. ಅಧಿಕಾರಿಗಳ ಈ ನಡವಳಿಕೆ ಆಳುವವರ ಹಿಡಿತದಲ್ಲಿ ಅಧಿಕಾರಿಗಳು ಇಲ್ಲ ಎಂಬ ಭಾವನೆಗೆ ಪುಷ್ಟಿ ನೀಡುವಂತೆ ಮಾಡಿದೆ. ಗೃಹ ಇಲಾಖೆಗೆ ಪ್ರತ್ಯೇಕ ಸಚಿವರಿದ್ದರೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಹುದ್ದೆಗಳ ನಿಯೋಜನೆಗೆ ಸಂಬಂಧಿಸಿದ ವಿಷಯ ಮುಖ್ಯ ಮಂತ್ರಿಗಳ ವ್ಯಾಪ್ತಿಗೆ ಒಳಪಡುತ್ತದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಮಾಜದಲ್ಲಿ ಶಾಂತಿ ನೆಮ್ಮದಿ ಉಂಟು ಮಾಡುವ ಸ್ಥಾನದಲ್ಲಿರುವ ಒಂದೇ ಇಲಾಖೆಯ ಇಬ್ಬರು ಅಧಿಕಾರಿಗಳು ಬಹಿರಂಗವಾಗಿ ಆರೋಪ ಪ್ರತ್ಯಾರೋಪಕ್ಕೆ ಇಳಿದಿರುವುದು ಇಲಾಖೆಯ ಅಶಿಸ್ತನ್ನು ಅನಾವರಣ ಮಾಡುತ್ತಿದೆ. ಶಿಸ್ತಿನ ಇಲಾಖೆಯಲ್ಲಿ ಈ ರೀತಿಯ ಬೆಳವಣಿಗೆ ನಡೆಯುತ್ತಿದ್ದರೂ, ಸರಕಾರ ನಡೆಸುವವರು ನಿರ್ಲಕ್ಷ್ಯ ವಹಿಸುವುದು ಆಡಳಿತದಲ್ಲಿ ಬಿಗಿ ಇಲ್ಲ ಎನ್ನುವುದನ್ನು ಎತ್ತಿ ತೋರಿಸಿದಂತಾಗುತ್ತದೆ.
ಗೃಹ ಸಚಿವ ಎಸ್.ಆರ್. ಬೊಮ್ಮಾಯಿ ಅವರೂ ಈ ಬಗ್ಗೆ ಮೌನ ತಾಳಿದ್ದರು. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಆ ಅಧಿಕಾರಿಗಳಿಗೆ ಆದೇಶ ಮತ್ತು ಉಪದೇಶ ಮಾಡುವಂತೆ ಹೇಳಿದ್ದಾರಷ್ಟೇ. ಆದರೆ ಈ ಘಟನಾವಳಿ ಬಗ್ಗೆ ಅವರು ಕಠಿನವಾಗಿ ವರ್ತಿಸಬೇಕಿದೆ. ಗೃಹ ಇಲಾಖೆಯಲ್ಲಿ ಆಗಾಗ ಈ ರೀತಿಯ ಘಟನೆಗಳು ಹೆಚ್ಚುತ್ತಿರುವುದು ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ಇರುವ ಗೌರವ ಕಡಿಮೆಯಾಗುವಂತೆ ಮಾಡುತ್ತದೆ. ಅಧಿಕಾರಿಗಳ ಈ ರೀತಿಯ ನಡವಳಿಕೆಗಳಿಗೆ ನಿಯಂತ್ರಣ ಹೇರುವುದು ಅಧಿಕಾರ ನಡೆಸುವವರ ಜವಾಬ್ದಾರಿಯಾಗಿದೆ.