Advertisement

ಹಣ ಇಲ್ಲದ ಮೇಲೆ ಎಲ್ಲವೂ ಮಟಾಶ್‌

06:00 AM Aug 17, 2018 | Team Udayavani |

“ಜುಗಾರಿ’, “ಲಾಸ್ಟ್‌ಬಸ್‌’ ಚಿತ್ರಗಳನ್ನು ನಿರ್ದೇಶಿಸಿರುವ ಎಸ್‌.ಡಿ.ಅರವಿಂದ್‌ ಈಗ “ಮಟಾಶ್‌’ ಎಂಬ ಸಿನಿಮಾ ಮಾಡಿಮುಗಿಸಿದ್ದಾರೆ. ಈ ಬಾರಿ ಥ್ರಿಲ್ಲರ್‌ ಜಾನರ್‌ ಅನ್ನು ಕೈಗೆತ್ತಿಕೊಂಡಿರುವ ಅರವಿಂದ್‌, ಇತ್ತೀಚೆಗೆ ಚಿತ್ರದ ಟೀಸರ್‌ ಹಾಗೂ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ತಮ್ಮ  “ಗೋಲ್ಡ್‌ ಅಂಡ್‌ ಡ್ರೀಮ್ಸ್‌’ ಪ್ರೊಡಕ್ಷನ್‌ ಹೌಸ್‌ನಡಿ ಈ ಸಿನಿಮಾ ನಿರ್ಮಾಣವಾಗಿದೆ. “ಮಟಾಶ್‌’ ಒಂದು ಕಾಮಿಕಲ್‌ ಥ್ರಿಲ್ಲರ್‌. ಅಪನಗಧೀಕರಣ ನಂತರ ಆದಂತಹ ಸತ್ಯ ಘಟನೆಗಳ ಆಧಾರಿತ ಕಾಲ್ಪನಿಕ ಸಿನಿಮಾವಿದು. ಆ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅನುಕೂಲಕ್ಕೆ ಏನೆಲ್ಲಾ ಮಾಡಿದರು. ಯಾವುದನ್ನೆಲ್ಲಾ ಬಳಸಿಕೊಂಡರು ಎಂಬುದನ್ನು ಒಂದು ಯೂಥ್‌ಫ‌ುಲ್‌ ಸ್ಟೋರಿ ಮೂಲಕ ಹೇಳಹೊರಟಿದ್ದಾರೆ ಅರವಿಂದ್‌.ಅಪನನಗಧೀಕರಣ ವೇಳೆ ಜನರು ಹೇಗೆಲ್ಲಾ ಪ್ರತಿಕ್ರಿಯಿಸಿದರು ಎಂಬ ಅಂಶವನ್ನು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರಂತೆ. 

Advertisement

ಚಿತ್ರದ ಬಗ್ಗೆ ಮಾತನಾಡುವ ಅರವಿಂದ್‌, “ಅಪನಗಧೀಕರಣದ ಸಮಯದಲ್ಲಿ ನಡೆದ ಕಾಲ್ಪನಿಕ ಕಥೆ ಇದು. ಮೈಸೂರು, ಬಿಜಾಪುರ, ಬೆಂಗಳೂರು ಹುಡುಗರು ಹಾಗೂ ಇಬ್ಬರು ಹುಡುಗಿಯರು ಸಕಲೇಶಪುರದ ರೆಸಾರ್ಟ್‌ಗೆ ಹೋಗಿದ್ದಾಗ ಒಂದು ಘಟನೆ ನಡೆಯುತ್ತದೆ. ಆ ನಂತರ ಅವರು ಅಂದುಕೊಂಡದ್ದು ಎಲ್ಲವೂ ಉಲ್ಟಾ ಆಗುತ್ತದೆ. ಅಲ್ಲಿವರೆಗೆ ಖುಷಿ ಖುಷಿಯಾಗಿದ್ದ ಅವರೇ ಕಚ್ಚಾಡಿಕೊಳ್ಳಲು ಆರಂಭಿಸುತ್ತಾರೆ. ಅಷ್ಟಕ್ಕೂ ಆ ಘಟನೆ ಏನು ಎಂಬುದೇ ಈ ಸಿನಿಮಾದ ಹೈಲೈಟ್‌’ ಎಂದು ಚಿತ್ರದ ಬಗ್ಗೆ ವಿವರ ಕೊಟ್ಟರು ಅರವಿಂದ್‌. ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರವಾದ “ಮಟಾಶ್‌’ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅರವಿಂದ್‌ ಅವರದು. ಚಿತ್ರದಲ್ಲಿ ಸಮರ್ಥ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರದ್ವಜ್‌, ರಾಘು ರಾಮನಕೊಪ್ಪ, ವಿ.ಮನೋಹರ್‌, ನಂದಗೋಪಾಲ್‌, ಸದಾನಂದ ಕಲಿ, ರವಿಕಿರಣ್‌ ರಾಜೇಂದ್ರನ್‌, ಸಿದ್ಧಾಂತ್‌ ಸುಂದರ್‌, ರಂಗಸ್ವಾಮಿ, ಅಮೋಘ…, ಗಣೇಶ್‌ ರಾಜ್‌, ಬಾಲಾಜಿ ಶೆಟ್ಟಿ, ಗೌತಮ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಅರವಿಂದ್‌ ನಿರ್ದೇಶನದ ಜೊತೆಗೆ ಆರು ಹಾಡುಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಸತೀಶ್‌ ಪಾಟಕ್‌ ಹಾಗು ಗಿರೀಶ್‌ ಪಾಟೀಲ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವಿನಾಶ್‌ ಇಲ್ಲಿ ಕಲಾನಿರ್ದೇಶನ ಮಾಡಿದ್ದಾರೆ. ಚಿತ್ರತಂಡದ ಸದಸ್ಯರೆಲ್ಲ ಅವಕಾಶ ಸಿಕ್ಕ ಬಗ್ಗೆ ಖುಷಿ ಹಂಚಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next