Advertisement

ಎಲ್ಲವೂ ಸರ್ವಸ್ವಮಯ!

10:11 AM Sep 17, 2017 | |

ಸಿನಿಮಾ ಮೇಲಿನ ಪ್ರೀತಿಯೇ ಹಾಗೆ, ಯಾವುದೇ ಕ್ಷೇತ್ರ ಇರಲಿ, ಸಿನಿಮಾರಂಗ ಅವರನ್ನು ಕೈ ಬೀಸಿ ಕರೆಯದೇ ಇರದು. ಹಾಗೆ ಬಂದವರಲ್ಲಿ ಗಾಂಧಿನಗರದ ಗಲ್ಲಿಯಲ್ಲಿ ಹೆಚ್ಚು ಕಾಣಸಿಗೋದು ಸಾಫ್ಟ್ವೇರ್‌ ಮಂದಿ. ಈಗ ಇಂಜಿನಿಯರ್‌ವೊಬ್ಬರು ಸಿನಿಮಾ ಮೇಲೆ ಪ್ರೀತಿ ಇಟ್ಟುಕೊಂಡು, ನಿರ್ದೇಶಕರಾಗಿ ಎಂಟ್ರಿಕೊಟ್ಟಿದ್ದಾರೆ. ಆ ಸಿನಿಮಾ ಹೆಸರು “ಸರ್ವಸ್ವ’. ಈ ಚಿತ್ರದ ಮೂಲಕ ಶ್ರೇಯಸ್‌ ಕಬಾಡಿ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ತಿಲಕ್‌ ಹೀರೋ.

Advertisement

ಅವರೊಂದಿಗೆ ಚೇತನ್‌ ವರ್ಧನ್‌ ಕೂಡ ಹೀರೋ ಆಗಿದ್ದಾರೆ. ಉಳಿದಂತೆ ಇವರಿಗೆ ಇಬ್ಬರು ನಾಯಕಿಯರಿದ್ದಾರೆ. ಮೇಘನಾ ಹಾಗೂ ರನೂಷ ಇಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಶ್ರೇಯಸ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಹೀರೋ ಆಗಬೇಕು ಅಂತ. ಆ ನಿಟ್ಟಿನಲ್ಲಿ “ತಪಸ್ವಿ’ ಎಂಬ ಚಿತ್ರದಲ್ಲಿ ಹೀರೋ ಕೂಡ ಆಗಿದ್ದಾರೆ. ಆ ಬಳಿಕ ಒಂದೊಳ್ಳೆಯ ಕಥೆ ಹೆಣೆದು ತಾನೇ ಯಾಕೆ ನಿರ್ದೇಶನ ಮಾಡಬಾರದು ಅಂತಂದುಕೊಂಡು ಒಂದು ಕಥೆ ಬರೆದು, ಆ ಕಥೆಗೆ ಪೂರಕ ಎಂಬಂತಹ ನಟರನ್ನು ಆಯ್ಕೆ ಮಾಡಿಕೊಂಡು “ಸರ್ವಸ್ವ’ ಚಿತ್ರ ಮಾಡಿದ್ದಾರೆ.

“ಸರ್ವಸ್ವ’ದಲ್ಲಿ ಸಿನಿಮಾದೊಳಗಿನ ಸಿನಿಮಾ ಕಥೆ ಇದೆ. ಇಲ್ಲಿ ತಿಲಕ್‌, ಚೇತನ್‌ ವರ್ಧನ್‌, ಮೇಘನಾ ಮತ್ತು ರನೂಷ ಅವರೇ ಹೈಲೈಟ್‌. ಇವರು ಒಂದು ಗುರಿಯ ಹಿಂದೆ ಬೀಳುತ್ತಾರೆ. ಕೊನೆಗೆ ಅವರು ಆ ಗುರಿ ತಲುಪುತ್ತಾರೋ ಇಲ್ಲವೋ ಎಂಬುದನ್ನೇ ರೋಚಕವಾಗಿ ತೋರಿಸಿದ್ದೇನೆ. ಚಿತ್ರದಲ್ಲಿ ತಿಲಕ್‌ ಅವರು ನಿರ್ದೇಶಕರಾಗಬೇಕೆಂಬ ಕನಸು ಕಾಣುತ್ತಾರೆ. ಚೇತನ್‌ ವರ್ಧನ್‌ ಹೀರೋ ಆಗಬೇಕು ಎಂಬ ಕನಸು ಕಾಣುತ್ತಾರೆ. ಇನ್ನು, ರನೂಷ ಅವರಿಲ್ಲಿ ಅಂಧೆಯಾಗಿ ನಟಿಸಿದ್ದಾರೆ.

ಮೇಘನಾ ಅವರ ಪಾತ್ರ ಮೊದ ಮೊದಲು ಜಾಲಿಯಾಗಿದ್ದರೂ, ಆ ಬಳಿಕ ಒಂದು ಜವಾಬ್ದಾರಿಯುತ ಹುಡುಗಿಯಾಗಿ ತನ್ನ ಕೆಲಸ ನಿರ್ವಹಿಸುತ್ತಾಳೆ. ಇಲ್ಲಿ ಎಲ್ಲರೂ ಒಂದೊಂದು ಕನಸು ಕಾಣುತ್ತಾರೆ. ಒಂದು ಗುರಿ ಹೊಂದಿರುತ್ತಾರೆ. ಆ ಗುರಿ ತಲುಪಲು ಸಾಕಷ್ಟು ಹೋರಾಡುತ್ತಾರೆ. ಅದರ ಮಧ್ಯೆ ಒಂದಷ್ಟು ಸಮಸ್ಯೆಗಳೂ ಎದುರಾಗುತ್ತವೆ. ಕೊನೆಗೆ ಅವರು ಗುರಿಯನ್ನು ತಲುಪುತ್ತಾರೋ? ಅದು ಸಸ್ಪೆನ್ಸ್‌’ ಎನ್ನುತ್ತಾರೆ ನಿರ್ದೇಶಕ ಶ್ರೇಯಸ್‌ ಕಬಾಡಿ.

“ಇಲ್ಲಿ ನಾಲ್ಕು ಪಾತ್ರಗಳಿದ್ದರೂ, ಅವರ ನಡುವೆಯೇ ಒಂದಷ್ಟು ಗೊಂದಲ, ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಹೀರೋ ತಿಲಕ್‌ ತಾನು ನಿರ್ದೇಶಕನಾಗಬೇಕು ಅಂತ ಸಾಕಷ್ಟು ಪ್ಲಾನ್‌ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ಮೊದಲರ್ಧದಲ್ಲಿ ಅವರು ತುಮಬಾ ರೊಮ್ಯಾಂಟಿಕ್‌ ಆಗಿದ್ದರೂ, ದ್ವಿತಿಯಾರ್ಧ ಅವರು ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಾರೆ. ತಾನು ನಿರ್ದೇಶಕ ಆಗಬೇಕು ಅಂತ ಹೊರಟಾಗ, ಅಡ್ಡಿ ಆತಂಕ ಹೆಚ್ಚಾಗುತ್ತವೆ.

Advertisement

ಅವೆಲ್ಲವನ್ನು ಮೀರಿ ತನ್ನ ಗುರಿ ಸಾಧಿಸಲು ಯಾವ ಹಾದಿ ಹಿಡಿಯುತ್ತಾರೆ ಎಂಬುದನ್ನಿಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ, ನಾನು ಸಹ ಇಂಜಿನಿಯರ್‌ ಆಗಿ, ಸಿನಿಮಾ ಕ್ಷೇತ್ರಕ್ಕೆ ಬಂದಾಗ, ಹೀರೋ ಆಗಬೇಕು ಅಂತ ಸಾಕಷ್ಟು ಕನಸು ಕಂಡಿದ್ದೆ. ಅದರಂತೆ ಒಂದಷ್ಟು ಅಲೆದಾಡಿದೆ, ನೋವು ಅನುಭವಿಸಿದೆ, ಸಮಸ್ಯೆ ಎದುರಿಸಿದೆ. ಅದನ್ನೂ ಸಹ ಇಲ್ಲೊಂದಷ್ಟು ಅಳವಡಿಸಿದ್ದೇನೆ. ನಾನು ಏನು ಅಂದುಕೊಂಡಿದ್ದೆನೋ ಅದೆಲ್ಲವೂ ಇಲ್ಲಿ ಮೂಡಿಬಂದಿದೆ.

ಅದೇ ಈ ಸಿನಿಮಾದ ವಿಶೇಷ ಎನ್ನುತ್ತಾರೆ ನಿರ್ದೇಶಕ ಶ್ರೇಯಸ್‌ ಕಬಾಡಿ. ಇನ್ನು, “ಸರ್ವಸ್ವ’ ಒಂದು ಲವ್‌ ಥ್ರಿಲ್ಲರ್‌ ಸಿನಿಮಾ. ಸಿನಿಮಾದೊಳಗಿನ ಸಿನಿಮಾಗಳು ಬಂದಿದ್ದರೂ, ಇಲ್ಲಿ ಹೊಸ ವಿಷಯ ಹೇಳುವ ಪ್ರಯತ್ನವಾಗಿದೆಯಂತೆ. ಇಡೀ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಸಂಭಾಷಣೆ ಕಡಿಮೆ ಇದ್ದರೂ, ಸಂಗೀತವೇ ಇಲ್ಲಿ ಪ್ರಧಾನವಾಗಿದೆ. ಶ್ರೀಧರ್‌ ವಿ.ಸಂಭ್ರಮ್‌ ಅವರು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಜಯಂತ್‌ ಕಾಯ್ಕಿಣಿ, ಕವಿರಾಜ್‌ ಗೀತೆಗಳನ್ನು ಬರೆದಿದ್ದಾರೆ.

ಗಾಯಕ ಅರ್ಮನ್‌ ಮಲ್ಲಿಕ್‌ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ. ಚಿತ್ರಕ್ಕೆ ಕೇರಳ ಸೇರಿದಂತೆ ಕರ್ನಾಟಕದ ಸಕಲೇಶಪುರ, ಕೂರ್ಗ್‌, ಮಣಿಪಾಲ್‌ ಸೇರಿದಂತೆ ಕೋಸ್ಟಲ್‌ ಏರಿಯಾಗಳಲ್ಲಿ ಚಿತ್ರೀಕರಿಸಲಾಗಿದೆ. ಬುಪೇಂದರ್‌ ಪಾಲ್‌ಸಿಂಗ್‌ ರೈನಾ ಅವರು ಛಾಯಾಗ್ರಹಣ ಮಾಡಿದ್ದು, ಇಡೀ ಚಿತ್ರವನ್ನು ಸುಂದರವಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವಿಮಲ್‌ ವಾಮದೇವ್‌ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಮೂಲತಃ ಗುಜರಾತ್‌ನವರಾದ ವಿಮಲ್‌ ವಾಮದೇವ್‌, ದಂತ ವೈದ್ಯರು. ಅವರಿಗೆ ಸಿನಿಮಾ ಮಾಡುವ ಬಗ್ಗೆ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಈ ಕಥೆಯಲ್ಲಿ ಬರುವ ಪಾತ್ರಗಳು ಯಾವ ರೀತಿ ಇರಬೇಕು, ಯಾರಿದ್ದರೆ ಚೆನ್ನಾಗಿರುತ್ತೆ ಅಂತ ಸ್ವತಃ ಅವರೇ ಇಂತಿಂಥವರು ಇದ್ದರೆ ಚೆನ್ನಾಗಿರುತ್ತೆ ಅಂತ ಕಲಾವಿದರನ್ನು ಆಯ್ಕೆ ಮಾಡಿದರಂತೆ. ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next