“ಚೌಕುರ್ ಗೇಟ್…
– ಈ ಶೀರ್ಷಿಕೆ ನೋಡಿದರೆ, ಇದೊಂದು ಹಾರರ್ ಚಿತ್ರ ಇರಬೇಕು ಅಂತ ಅನಿಸುವುದು ನಿಜ. ಹಾಗಂದುಕೊಂಡರೆ ಇದು ಹಾರರ್ ಚಿತ್ರವಲ್ಲ. ಒಂದು ಸಸ್ಪೆನ್ಸ್ -ಥ್ರಿಲ್ಲರ್ ಚಿತ್ರ ಎಂಬುದು ನಿರ್ದೇಶಕ ದಿನೇಶ್ ಮಾತು. ಈ ವಾರ ಚಿತ್ರ ತೆರೆಗೆ ಬರುತ್ತಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಇದು ಪ್ಯಾಕೇಜ್ ಸಿನಿಮಾ ಎನ್ನುತ್ತಾರೆ ದಿನೇಶ್. ಏನದು ಪ್ಯಾಕೇಜ್ ಸಿನಿಮಾ ಎಂಬ ಪ್ರಶ್ನೆಗೆ, “ಇಲ್ಲಿ ಸಸ್ಪೆನ್ಸ್ ಇದೆ, ಥ್ರಿಲ್ಲರ್ ಇದೆ, ಬೆಚ್ಚಿಬೀಳಿಸುವ ಘಟನೆಗಳೂ ಇವೆ. ಜೊತೆಗೊಂದಷ್ಟು ಹಾಸ್ಯವೂ ಇದೆ. ಹಾಗಾಗಿ ಇದೊಂದು ಎಲ್ಲಾ ಪ್ಯಾಕೇಜ್ ಇರುವಂತಹ ಚಿತ್ರ’ ಎಂದು ಉತ್ತರ ಕೊಡುತ್ತಾರೆ ನಿರ್ದೇಶಕರು.
ಎಲ್ಲಾ ಸರಿ, “ಚೌಕುರ್ ಗೇಟ್’ ಅನ್ನುವುದು ಏನು? “ಒಂದು ಕಾಡಿನ ಮಧ್ಯೆ ಸಿಗುವಂತಹ ಸ್ಥಳವೇ ಚೌಕುರ್ ಗೇಟ್. ಅಲ್ಲೊಂದು ತಂಡ ಯಾವುದೋ ವಿಷಯಕ್ಕೆ ಹೋಗುತ್ತೆ. ಇನ್ನೂ ಮೂರು ಕಿಲೋಮೀಟರ್ ದೂರದಲ್ಲಿ ಚೌಕುರ್ ಗೇಟ್ ಇರುತ್ತೆ. ಅಲ್ಲಿಗೆ ತಲುಪುವ ಮಧ್ಯೆ ಸಾಕಷ್ಟು ಘಟನೆಗಳು ಸಂಭವಿಸುತ್ತವೆ. ಆ ಘಟನೆ ಬೆನ್ನತ್ತಿ ಒಬ್ಬ ಪೊಲೀಸ್ ಅಧಿಕಾರಿ ತನಿಖೆ ಶುರುಮಾಡುತ್ತಾರೆ. ಆಮೇಲೆ ಏನಾಗಲಿದೆ ಎಂಬುದು ಕಥೆ. ಹಾಗಂತ, ಇದು ಎಲ್ಲೂ ನಡೆದ ನೈಜ ಘಟನೆಯಂತೂ ಅಲ್ಲ. ಇದೊಂದು ಕಾಲ್ಪನಿಕ ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ದಿನೇಶ್.
ಈ ಚಿತ್ರಕ್ಕೆ ಶರಣು ಕಾಳೆ ನಿರ್ಮಾಪಕರು. ಅವರಿಗೆ ಇದು ಮೊದಲ ಸಿನಿಮಾ. ಅವರಿಲ್ಲಿ ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ನಿರ್ದೇಶಕರ ಕಥೆಯಲ್ಲಿ ಡಾಬಾ ಹೋಟೆಲ್ ಇದೆ. ಆ ಡಾಬಾ ಹೋಟೆಲ್ ಮಾಲೀಕರಾಗಿ ನಟಿಸಿದ್ದಾರಂತೆ ನಿರ್ಮಾಪಕರು. ಅಷ್ಟೇ ಅಲ್ಲ, ಅವರು ಒಂದು ಫೈಟನ್ನೂ ಮಾಡಿದ್ದಾರೆ. ಅದು ಯಾಕೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಶರಣು ಕಾಳೆ ಮಾತು. ಅಂದಹಾಗೆ, ಸುಮಾರು 80 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗಿದೆ.
ಚಿತ್ರಕ್ಕೆ ರಕ್ಷಿತ್ ಅರಸ್ ಗೋಪಾಲ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ತರಬೇತಿ ಪಡೆದಿರುವ ರಕ್ಷಿತ್, ಹಂಪಿ ಯುನಿರ್ವಸಿಟಿಯಲ್ಲಿ ಡಿಪ್ಲೊಮೋ ಇನ್ ಥಿಯೇಟರ್ ಕೋರ್ಸ್ ಮಾಡಿದ್ದಾರೆ. ಧಾರಾವಾಹಿಯೊಂದರಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಅವರಿಗೆ “ಚೌಕುರ್ ಗೇಟ್’ ಮೊದಲ ಚಿತ್ರ. ಇಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸಿದವರು ಕೊನೆಗೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬ ಕಥೆ ಇದೆ. ನಾನಿಲ್ಲಿ ಫೋಟೋಗ್ರಾಫರ್ ಆಗಿ ನಟಿಸುತ್ತಿದ್ದೇನೆ ಎನ್ನುತ್ತಾರೆ ಅವರು.
ಸಂಗೀತ ನಿರ್ದೇಶಕ ನಿತಿನ್ ಬಕಾಲೆ ಚಿತ್ರಕ್ಕೆ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಹಂಸಲೇಖ ಅವರ ಬಳಿ ಕೆಲಸ ಮಾಡಿದ್ದ ನಿತಿನ್ ಬಕಾಲೆಗೆ ಇದು ಒಳ್ಳೆಯ ಅವಕಾಶವಂತೆ. ಇನ್ನು, ಬಸವರಾಜ್ ಎಂಬ ಹೊಸ ಪ್ರತಿಭೆಗೂ ಇದು ಮೊದಲ ಚಿತ್ರ. ನಾಲ್ವರ ಜೊತೆಗೆ ಕಾಣಿಸಿಕೊಳ್ಳುವ ಪಾತ್ರ ಅದಾಗಿದ್ದು, ನೋಡುಗರಿಗೆ ಹೊಸ ಅನುಭವ ಕಟ್ಟಿಕೊಡುವ ಚಿತ್ರವಿದು ಎನ್ನುತ್ತಾರೆ ಬಸವರಾಜ್.