Advertisement
ಒಂದಾನೊಂದು ಕಾಲದಲ್ಲಿ ಅಂದರೆ ನಮ್ಮ ತಂದೆ, ಅಜ್ಜ, ಮುತ್ತಜ್ಜರ ಕಾಲದಲ್ಲಿ ಮನೆಯಲ್ಲಿ ಎಲ್ಲಾ ಮಕ್ಕಳಿಗೂ ದೇವರ ಹೆಸರನ್ನು ಇಡುವುದು ಪದ್ಧತಿಯಾಗಿತ್ತು. ಎಲ್ಲರ ಮನೆಯಲ್ಲಿ ಕಡಿಮೆ ಎಂದರೆ ಹತ್ತು-ಹನ್ನೆರಡು ಮಕ್ಕಳು ಇರುತ್ತಿದ್ದುದರಿಂದ ಹೆಚ್ಚು ತಲೆಬಿಸಿ ಮಾಡಿಕೊಳ್ಳದೆ ನಾರಾಯಣ, ಶ್ರೀನಿವಾಸ, ಗಣಪತಿ, ಮಹಾಬಲ, ವಾಸುದೇವ- ಎಂದೆಲ್ಲಾ ಹುಡುಗರಿಗೆ ಮತ್ತು ಸೀತಾ, ಪಾರ್ವತಿ, ಲಕ್ಷ್ಮಿ, ಸರಸ್ವತಿ, ಭಾಗೀರಥಿ ಎನ್ನುವಂತಹ ಹೆಸರುಗಳನ್ನು ಹುಡುಗಿಯರಿಗೆ ಇಡುತ್ತಿದ್ದರು. ಮನೆಯಲ್ಲಿ ಮಕ್ಕಳ ಹೆಸರು ದೇವರ ಹೆಸರಾದರೆ ಅವರನ್ನು ಕರೆಯುವ ನೆಪದಲ್ಲಿ ಭಗವಂತನ ನಾಮಸ್ಮರಣೆ ಆಗುತ್ತದೆ ಎನ್ನುವುದು ಅವರ ವಿಚಾರಧಾರೆಯಾಗಿತ್ತು. ಆದರೆ, ಎಲ್ಲರ ಮನೆಯಲ್ಲಿ ಈ ಹೆಸರುಗಳು ನಾಣಿ, ಚೀನಿ, ಮಾಬ್ಲು, ಗಂಪು, ಪಾರು, ಸರೂ, ಭಾಗೀ ಎಂದೆಲ್ಲಾ ಹ್ರಸ್ವವಾಗುತ್ತಿತ್ತು. ನಾಲ್ಕು ಅಕ್ಷರಗಳ ಹೆಸರನ್ನು ಕರೆಯುವುದು ಕಷ್ಟ ಎನ್ನುವ ದೃಷ್ಟಿಯಿಂದ ಮುಂದಿನ ಪೀಳಿಗೆಗಳಲ್ಲಿ ಮೂರು ಅಥವಾ ಎರಡು ಅಕ್ಷರಗಳ ಹೆಸರುಗಳು ಹೆಚ್ಚು ಜನಜನಿತವಾಗತೊಡಗಿದವು. ಹಾಗಾಗಿ, ಎಲ್ಲರ ಮನೆಯಲ್ಲಿ ಒಂದು ಪೀಳಿಗೆಯಲ್ಲಿ ರಮೇಶ, ಸುರೇಶ, ಸತೀಶ, ನಾಗೇಶ, ಗಿರೀಶ, ದಿನೇಶ, ಪ್ರಕಾಶ ಇಂತಹ ಹೆಸರುಗಳು ಸರ್ವೇಸಾಮಾನ್ಯವಾಗಿದೆ.
Related Articles
Advertisement
ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ನನಗೆ ಹೊಸ ತರಗತಿ ಪ್ರವೇಶಿಸಿದಾಗ ಮೊದಲು ಮಕ್ಕಳ ಪರಿಚಯ ಮಾಡಿಕೊಳ್ಳಲು ಅವರ ಹೆಸರು ಕೇಳುವುದು ರೂಢಿಯಾಗಿತ್ತು. ಹೆಸರನ್ನು ಕೇಳಿದ ನಂತರ “ನಿಮ್ಮ ಹೆಸರಿನ ಅರ್ಥವೇನು?’ ಎಂದೂ ಕೇಳುತ್ತಿದ್ದೆ. ಕೆಲವು ಮಕ್ಕಳಿಗೆ ಅರ್ಥ ತಿಳಿದಿರುತ್ತಿತ್ತು. ಹೆಚ್ಚಿನವರು “ಮನೆಯಲ್ಲಿ ಕೇಳಿಕೊಂಡು ಬರುತ್ತೇನೆ’ ಎನ್ನುತ್ತಿದ್ದರು. ನಾನು ಕೆಲಸ ಮಾಡುತ್ತಿದ್ದ ಯಹೂದಿಗಳ ಶಾಲೆಯಲ್ಲಿ ಎಲ್ಲಾ ಮಕ್ಕಳ ಹೆಸರೂ ನನಗೆ ಹೊಸದೇ ಆಗಿತ್ತು. ಹಾಗಾಗಿ, ನೆನಪಿನಲ್ಲೂ ಉಳಿಯುತ್ತಿರಲಿಲ್ಲ. ನನ್ನ ತಪ್ಪು ಉಚ್ಚಾರದಿಂದಾಗಿ ಹಲವು ಬಾರಿ ನಗೆಪಾಟಲಿಗೀಡಾಗಿದ್ದೂ ಉಂಟು. ಕೆಲವು ಮಕ್ಕಳ ವಿಚಿತ್ರ ಹೆಸರುಗಳನ್ನು ಕರೆಯಲು ನನಗೇ ಮುಜುಗರವಾಗುತ್ತಿತ್ತು. ರೀನಲ್, ಪೀನಲ್, ಪ್ರಾರಬ್ಧ, ಹೇತಾ, ಹೇತ್ವಿ… ಇಂತಹ ಹೆಸರನ್ನು ತಂದೆತಾಯಂದಿರು ಏಕೆ ಆರಿಸಿದ್ದಾರೆ ಎಂದು ಅನ್ನಿಸಿದ್ದುಂಟು. ಆದರೆ, ನಾನು ಎಂದಿಗೂ ಮರೆಯಲಾಗದ ಒಂದು ಹುಡುಗಿಯ ಹೆಸರು “ಜೋನ್‌ಆಫ್ಆರ್’. ಶಾಲೆಯಲ್ಲಿ ಕೆಲವು ತಾಯಂದಿರು ಮನೆಯಲ್ಲಿ ಹೊಸ ಮಗುವಿನ ಆಗಮನವಾದಾಗ ಹೆಸರನ್ನು ಹುಡುಕಲೋಸುಗ ಶಾಲೆಯ ಆಫೀಸಿನಲ್ಲಿ ಜಿ.ಆರ್. ಪುಸ್ತಕದಿಂದ ಮಕ್ಕಳ ಹೆಸರನ್ನು ಹುಡುಕುತ್ತಿದ್ದುದೂ ಉಂಟು.
ಕೆಲವು ಭಾವವಾಚಕ ಶಬ್ದಗಳು ಹುಡುಗರಿಗೆ ಮತ್ತು ಹುಡುಗಿಯರಿಗೆ ಇಬ್ಬರಿಗೂ ಒಪ್ಪುತ್ತದೆ. ಕೆಲವೊಮ್ಮೆ ಅಂತಹ ಹೆಸರುಗಳು ಗೊಂದಲಕ್ಕೀಡು ಮಾಡುವುದೂ ಉಂಟು. ನನ್ನ ಮಗಳ ಗೆಳತಿ ಅಂಕುರ್ ತನ್ನ ಹೆಸರು ಹುಡುಗರ ಹೆಸರಿನಂತೆ ಇದೆ ಎಂದು ತುಂಬಾ ಸಂಕೋಚಪಡುತ್ತಿದ್ದಳು. ಒಮ್ಮೆ ಆಕೆ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಯ ಸಹ ಪ್ರಯಾಣಿಕ ಆಕೆಯ ಹೆಸರನ್ನು ಕೇಳಿ ನಸುನಕ್ಕು “ನನ್ನ ಹೆಸರು ಶಶಿ’ ಎಂದು ಹೇಳಿದ್ದನಂತೆ. ಅದನ್ನು ಕೇಳಿ ಇಬ್ಬರೂ ಹೊಟ್ಟೆತುಂಬಾ ನಕ್ಕಿದ್ದರಂತೆ.
ಗಂಡುಮಗು ಬೇಕೆಂಬ ಆಸೆಯಲ್ಲಿದ್ದ ತಂದೆತಾಯಿ ಮಗುವಿಗೆ ಅಂಕುರ್‌ಎಂದೂ, ಹುಡುಗಿಯ ನಿರೀಕ್ಷೆಯಲ್ಲಿದ್ದ ಪಾಲಕರು ಶಶಿ ಎಂದು ಹೆಸರಿಟ್ಟಿದ್ದರೂ ಮಕ್ಕಳಿಗೆ ಅದು ಮುಜುಗರದ ವಿಷಯವಾಗಿತ್ತು. ತಂದೆತಾಯಂದಿರು ಪ್ರೀತಿಯಿಂದ ಇಟ್ಟ ಕೆಲವು ಹೆಸರುಗಳು ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ಒಪ್ಪದೇ ಹೋಗುವುದೂ ಉಂಟು. ಉದ್ದ ತೋರ ಭರ್ತಿ ಇರುವ ಟೈನಿ, ಮಿನಿ…, ದಪ್ಪ ಸ್ವರದ ಕೋಕಿಲಾ, ಅಚ್ಚ ಬಿಳಿ ಬಣ್ಣದ ನಿಶಾ, ರಜನಿ, ಶ್ಯಾಮಲಾ… ಹೀಗೆ ಹುಡುಕುತ್ತಾ ಹೋದರೆ ಪ್ರತಿ ಹೆಸರಿನ ಹಿಂದೆಯೂ ಒಂದು ಸ್ವಾರಸ್ಯಕರ ಸಂಗತಿ ಇದ್ದೇ ಇರುತ್ತದೆ.
ಹೆಸರಿನಲ್ಲೇನಿದೆ? ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಸುಂದರವೇ ಎಂದು ಹೇಳಿದರೂ, ಕೆಲವು ಹೆಸರುಗಳು ಆ ವ್ಯಕ್ತಿಯ ವ್ಯಕ್ತಿತ್ವದಿಂದಾಗಿ ನಮಗೆ ಅತ್ಯಂತ ಪ್ರಿಯವಾಗುವುದಂತೂ ನಿಜ.
ರಮಾ ಉಡುಪ