ಮಹಾನಗರ: ಎಷ್ಟೇ ವಿದ್ಯಾ ವಂತರಾಗಿದ್ದರೂ ಉನ್ನತ ಉದ್ಯೋಗ ಪಡೆದಿದ್ದರೂ ಉತ್ತಮ ಸಂಸ್ಕಾರವಿಲ್ಲದೆ ಹೋದರೆ ಎಲ್ಲವೂ ವ್ಯರ್ಥ.ಆದ್ದರಿಂದ ಹೆತ್ತವರು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ,ಗುಣ-ನಡತೆಗಳನ್ನು ಹಾಗೂ ಭಾರತೀಯ ಜೀವನ ಮೌಲ್ಯಗಳ ವಿಚಾರವನ್ನು ಸ್ವತಃ ಜೀವನದಲ್ಲಿ ಆಳವಡಿಸಿ ಕೊಳ್ಳುವು ದರೊಂದಿಗೆ, ಕಲಿಸಿಕೊಡುವುದಕ್ಕೆ ಆದ್ಯತೆ ನೀಡಬೇಕು ಎಂದು ಭಾಗವತ, ಪಟ್ಲ ಪೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾಗಿರುವ ವಿದ್ಯಾರ್ಥಿಗಳ ಬೇಸಗೆ ರಜಾ ದಿನಗಳ ಶಿಬಿರದ ಉದ್ಘಾಟನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅವರು ಮಾತನಾಡಿ, ಮಕ್ಕಳಿಗೆ ತಮ್ಮ ಮಾತೃ ಭಾಷೆ, ತಾಯ್ನಾಡಿನ ಸಂಸ್ಕೃತಿ ಆಚಾರ-ವಿಚಾರ, ಮಾತ್ರವಲ್ಲದೆ ಆಹಾರ-ವಿಹಾರದ ಬಗ್ಗೆ ಹೆತ್ತವರು ಅರಿವು ಮೂಡಿಸುವುದರ ಜತೆಗೆ ವೈಜ್ಞಾನಿಕ ಚಿಂತನೆ, ಕ್ರೀಯಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು. ಶಾರದಾ ವಿದ್ಯಾ ಸಂಸ್ಥೆಗಳ ಧ್ಯೇಯೋದ್ದೇಶಗಳ ಬಗ್ಗೆ ಅವರು ವಿವರಿಸಿದರು.
ಮತದಾನ ಜಾಗೃತಿ
ಲೋಕ ಸಭಾ ಚುನಾವಣ ಜಾಗೃತಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಪರವಾಗಿ ಮಂಗಳೂರು ತಾಲೂಕು ಪಂಚಾಯತ್‌ನ ಸಂಪನ್ಮೂಲ ವ್ಯಕ್ತಿ ಚೆಲುವಮ್ಮ ಅವರ ಈ ಸಂದರ್ಭ ಶಿಬಿರಾರ್ಥಿಗಳ ಹೆತ್ತವರಿಗೆ ಮತ್ತು ಭಾಗವಹಿಸಿದವರಿಗೆ ಮತದಾನ ಮಾಹಿತಿಯನ್ನು ನೀಡಿ ಪ್ರತಿಜ್ಞೆಯನ್ನು ಬೋಧಿಸಿದರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ, ವಿಶ್ವಸ್ಥ ಪ್ರದೀಪ ಕುಮಾರ ಕಲ್ಕೂರ, ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಎಸ್.ಕೆ.ಡಿ.ಬಿ. ಅಸೋಶಿ ಯೇಶನ್‌ನ ಪದಾಧಿಕಾರಿಗಳಾದ ಪ್ರಭಾಕರ ಪೇಜಾವರ, ಸುಧಾಕರ ಪೇಜಾವರ, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಬಲೇಶ್ವರ ಭಟ್, ವಿದ್ಯಾಲಯ ಪ್ರಾಂಶುಪಾಲೆ ಸುನೀತಾ ಮಡಿ ಉಪಸ್ಥಿತರಿದ್ದರು.
ಎಡ್ನಾ ವೇಗಸ್ ನಿರೂಪಿಸಿದರು. ಉಪಪ್ರಾಂಶುಪಾಲ ದಯಾನಂದ ಕಟೀಲು ಶಿಬಿರದ ನಿಯಮ-ನಿಬಂಧನೆಗಳನ್ನು ವಿವರಿಸಿದರು. ಶಿಕ್ಷಕಿ ವನಿತಾ ವಂದಿಸಿದರು.