Advertisement

ಕಿರಿಕ್‌ ಪಾರ್ಟಿಯಿಂದ ಬಂದ ದುಡ್ಡೆಲ್ಲವೂ ಚಿತ್ರಗಳಿಗೆ ಮೀಸಲು

06:30 PM Nov 13, 2017 | Team Udayavani |

“ಕಿರಿಕ್‌ ಪಾರ್ಟಿ’ ರೀಮೇಕ್‌ ಹಕ್ಕುಗಳಿಂದ ಬಂದ ಹಣವನ್ನು ಒಂದು ಅಕೌಂಟ್‌ಗೆ ಹಾಕಿ, ಆ ದುಡ್ಡಿನಿಂದ ರಕ್ಷಿತ್‌ ಶೆಟ್ಟಿ ತಮ್ಮ ಹೊಸ ಚಿತ್ರಗಳ ಬರಹಗಾರರಿಗೆ ಸಂಬಳ ಕೊಡುತ್ತಿರುವುದು ಗೊತ್ತಿರಬಹುದು. ಒಂದು ಚಿತ್ರಕ್ಕೆ ಬರಹಗಾರರು ಮುಖ್ಯವಾಗಿರುವುದರಿಂದ, ಅವರು ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಇಂಥದ್ದೊಂದು ವ್ಯವಸ್ಥೆ ಮಾಡಿದ್ದಾಗಿ, ಖುದ್ದು ರಕ್ಷಿತ್‌ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.

Advertisement

ಈಗ ಅವರು “ಕಿರಿಕ್‌ ಪಾರ್ಟಿ’ಯಿಂದ ಬಂದ ಹಣವನ್ನೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಚಿತ್ರರಂಗಕ್ಕೆ ವಿನಿಯೋಗಿಸುವುದಕ್ಕೆ ಯೋಚಿಸುತ್ತಿದ್ದಾರೆ. ಅದ್ಹೇಗೆ ಎಂಬ ಪ್ರಶ್ನೆ ಬರಬಹುದು. ಈಗಾಗಲೇ ಅವರು ಒಂದು ಪೋಸ್ಟ್‌ ಪ್ರೊಡಕ್ಷನ್‌ ಸ್ಟುಡಿಯೋವೊಂದನ್ನು ರಾಜರಾಜೇಶ್ವರಿ ಸ್ಟುಡಿಯೋದಲ್ಲಿ ಶುರು ಮಾಡಿದ್ದಾರೆ. ಜೊತೆಗೆ ಆ್ಯರಿ ಕ್ಯಾಮೆರಾ ಸೆಟಪ್‌ ಖರೀದಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಂದೇ ಸೂರಿನಡಿ ಎಲ್ಲಾ ಕೆಲಸಗಳು ಆಗುವಂತಹ ಒಂದು ಸ್ಟುಡಿಯೋ ಕಟ್ಟಬೇಕು ಎಂಬುದು ಅವರ ಆಸೆ. 

“ಈಗಿರುವ ಸ್ಟುಡಿಯೋದಲ್ಲಿ ಒಂದು ಫ್ಲೋರ್‌ ಬರಹಗಾರರಿಗಿದೆ. ಇನ್ನೊಂದು ಪೋಸ್ಟ್‌ ಪ್ರೊಡಕ್ಷನ್‌ ಸ್ಟುಡಿಯೋಗೆ ಮೀಸಲಿಟ್ಟಿದ್ದೇವೆ. ಸದ್ಯದಲ್ಲೇ ರಾಜರಾಜೇಶ್ವರಿ ನಗರದಲ್ಲಿ ಒಂದು ಸ್ವಂತ ಜಾಗ ಖರೀದಿಸಿ, ಅಲ್ಲಿ ಒಂದು ಸ್ವಂತ ಸ್ಟುಡಿಯೋ ಮಾಡುವಾಸೆ ಇದೆ. ಆ ಸ್ಟುಡಿಯೋದಲ್ಲಿ ಎಲ್ಲಾ ವ್ಯವಸ್ಥೆಗಳೂ ಇರಬೇಕು. ಒಂದು ಚಿತ್ರತಂಡ ಚಿತ್ರೀಕರಣ ಮುಗಿಸಿಕೊಂಡು, ಫೈನಲ್‌ ಕಾಪಿ ತೆಗೆದುಕೊಂಡು ಹೋಗುವಂತೆ ಎಲ್ಲಾ ವ್ಯವಸ್ಥೆಗಳು ಸಹ ಅಲ್ಲಿರಬೇಕು ಅಂತಾಸೆ.

ಅಲ್ಲೇ ಹತ್ತಿರದಲ್ಲಿ ಮನೆ ಮಾಡುವ ಯೋಚನೆಯೂ ಇದೆ. ಒಟ್ಟಿನಲ್ಲಿ “ಕಿರಿಕ್‌ ಪಾರ್ಟಿ’ಯಿಂದ ಬಂದ ಹಣವನ್ನೆಲ್ಲಾ ಚಿತ್ರಗಳಿಗೇ ಮೀಸಲಿಡಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ರಕ್ಷಿತ್‌. ಸರಿ, ಈ ಕಟ್ಟಡದಲ್ಲಿ ಎಷ್ಟು ಮಹಡಿಗಳಿರುತ್ತವೆ ಎಂದರೆ, “ಐದಾರು ಮಹಡಿಗಳಿರಬಹುದು. ಹಣ ಬರುತ್ತಿದ್ದಂತೆ, ಮಹಡಿಗಳೂ ಜಾಸ್ತಿಯಾಗಬಹುದು’ ಎಂದು ನಗುತ್ತಾರೆ ರಕ್ಷಿತ್‌ ಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next