ಜಗತ್ತಿಗೆ ಕೊರೊನಾ ಎಂಬ ಮಹಾಮಾರಿಯನ್ನು ಹಬ್ಬಿಸಿದ ಚೀನದಲ್ಲಿ ಮತ್ತೆ ಪರಿಸ್ಥಿತಿ ಕೈಮೀರಿ ಹೋಗಿದೆ. ಅಲ್ಲಿ ಸಾವಿನ ಸಂಖ್ಯೆ ಎಷ್ಟಾಗಿದೆ ಎನ್ನುವುದು ಕೇವಲ ಊಹೆಗಳ ಆಧಾರದಲ್ಲಿ ಹೊರಜಗತ್ತಿಗೆ ಗೊತ್ತಾ ಗುತ್ತಿದೆ. ಇದರ ಜತೆಗೆ ದಕ್ಷಿಣ ಕೊರಿಯಾ, ಜಪಾನ್, ಅಮೆರಿಕ, ಬ್ರೆಜಿಲ್‌ಗಳಲ್ಲಿ ಕೂಡ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಮತ್ತು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಹಿಂದಿನ ಸಂದರ್ಭಗಳಲ್ಲಿ ಅನುಸರಿಸಲಾಗಿದ್ದ ನಿಯಮಗಳಾದ ಮಾಸ್ಕ್ ಧಾರಣೆ ಸಹಿತ ಹಳೆಯ ನಿಯಮಗಳು ಮತ್ತೆ ಜಾರಿಯಾಗುವ ಸಾಧ್ಯತೆಗಳು ಇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಯಮ ಮಾಡಿದರಷ್ಟೇ ಸಾಲದು. ದೇಶವಾಸಿಗಳಾದ ನಮಗೆ ಕೂಡ ಕೆಲವು ಕರ್ತವ್ಯಗಳು ಇರುತ್ತವೆ. ಅದರಂತೆಯೇ ನಾವು ಹೊಸತಾಗಿ ಹೊರಡಿಸಲಾಗುವ ಕೊರೊನಾ ನಿಯಮಗಳನ್ನು ಪಾಲನೆ ಮಾಡೋಣ.
ಎಲ್ಲ ಪ್ರಜೆಗಳಿಗೂ ಸರಿಸುಮಾರು ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಿದ್ದರಿಂದ, ಸರಕಾರಗಳ ಜತೆಗೆ ಜನರೂ ಕೈಜೋಡಿಸಿದ್ದರಿಂದ ಹಿಂದಿನ ಸಂದರ್ಭಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುವುದು ತಪ್ಪಿತ್ತು. ಇದೀಗ ಚೀನದಲ್ಲಿ ಸಂಕಷ್ಟಕ್ಕೆ ಕಾರಣವಾಗಿರುವ ಬಿಎಫ್.7 ರೂಪಾಂತರಿ ಪ್ರಕರಣದ ನಾಲ್ಕು ಕೇಸುಗಳು ನಮ್ಮ ದೇಶದಲ್ಲಿ ಕಂಡು ಬಂದಿದ್ದರೂ ಅವರೆಲ್ಲರೂ ಈಗ ಗುಣಮುಖರಾಗಿದ್ದಾರೆ. ಹೀಗಾಗಿ ಆತಂಕಪಡುವ ಸ್ಥಿತಿ ನಿರ್ಮಾಣವಾಗಿಲ್ಲ. ಆದರೆ ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯವೇ ಆಗಿದೆ. ಇನ್ನು ಎಂಟು ದಿನಗಳಲ್ಲಿ 2023ನ್ನು ಸ್ವಾಗತಿಸಲು ದೇಶಾದ್ಯಂತ ಹೊಟೇಲ್, ಕ್ಲಬ್‌ಗಳಲ್ಲಿ ಪಾರ್ಟಿ ಸಹಿತ ಹಲವು ಸಂತೋಷದಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಹೊರಡಿಸಲಿರುವ ನಿಯಮಗಳಿಂದಾಗಿ ಅವುಗಳು ರದ್ದಾಗಲಿವೆಯೇ ಎಂಬ ಆತಂಕ ಪಾರ್ಟಿಪ್ರಿಯರನ್ನು ಕಾಡುತ್ತಿದೆ. ಹೊಸ ವರ್ಷದ ಪಾರ್ಟಿಯನ್ನು 2024ರಲ್ಲಿಯೂ ಆಚರಣೆ ಮಾಡಲು ಸಾಧ್ಯ ಉಂಟು. ಆದರೆ ಆರೋಗ್ಯ ಕೈತಪ್ಪಿದರೆ ಏನನ್ನು ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಕೂಡ ಸರಕಾರಗಳು ಹೊರಡಿಸಲಿರುವ ನಿಯಮಗಳನ್ನು ಅನುಸರಿಸಿ ಸಂಭಾವ್ಯ ವಿಪತ್ತು ತಡೆಗಟ್ಟಬೇಕು.
ಸಾಮಾನ್ಯವಾಗಿ ರಾಜಕಾರಣಿಗಳು ಸಾರ್ವಜನಿಕರಿಗೆ ಉಪದೇಶ ನೀಡಿ, ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಾರೆ ಎನ್ನುವುದು ಅಪವಾದ. ಆದರೆ ಹೊಸದಿಲ್ಲಿಯಲ್ಲಿ ಗುರುವಾರ ಸಂಸತ್ ಭವನದಲ್ಲಿ ಕಂಡುಬಂದದ್ದೇ ಬೇರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರು, ಅಲ್ಲಿನ ಸಿಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದು, ಈ ದೇಶದ ಪ್ರಜೆಗಳಿಗೆ ಪ್ರೋತ್ಸಾಹದಾ ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸರಕಾರಗಳಿಗೆ ರೋಗ ನಿಯಂತ್ರಣ ಮಾಡುವ ಕೆಲಸದಲ್ಲಿ ನೆರವಾಗೋಣ. ಶ್ರೀರಾಮನ ನೇತೃತ್ವದ ವಾನರ ಸೇನೆ ಸಮುದ್ರಕ್ಕೆ ಸೇತುವೆ ನಿರ್ಮಾಣ ಮಾಡುವ ವೇಳೆ ಅಳಿಲುಗಳು ಮಾಡಿರುವ ಸೇವೆಯಂತೆಯೇ ನಾವೆಲ್ಲರೂ ಕೊರೊನಾ ನಿಯಮ ಪಾಲನೆಯಲ್ಲಿ ಅಳಿಲ ಸೇವೆ ಮಾಡಿ, ನಮ್ಮಿಂದ ಪಿಡುಗನ್ನು ದೂರವಾಗಿಸಬೇಕಿದೆ. ಇದು ಎಲ್ಲರ ಕರ್ತವ್ಯ ಕೂಡ.