Advertisement

ಗೌರವದ ಬದುಕು ಪ್ರತಿಯೊಬ್ಬರ ಹಕ್ಕು: ಸತೀಶ್‌ಸಿಂಗ್‌

03:41 PM Feb 12, 2021 | Team Udayavani |

ಕಲಬುರಗಿ: ಪ್ರತಿಯೊಬ್ಬ ಮನುಷ್ಯನಿಗೆ ಗೌರವದಿಂದ ಬದುಕುವ ಹಕ್ಕಿದೆ. ಆ ಹಕ್ಕು ಒದಗಿಸುವ ಕಾರ್ಯ ಎಲ್ಲರಿಂದಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾ ಧೀಶ ಆರ್‌.ಜೆ. ಸತೀಶ್‌ಸಿಂಗ್‌ ಹೇಳಿದರು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಸಂಯುಕ್ತಾಶಯದಲ್ಲಿ ಆಯೋಜಿಸಿದ್ದ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಹಾಗೂ ತಿದ್ದುಪಡಿ-2016ರ ಕುರಿತು ಬೀದಿ ನಾಟಕ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ
ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಬಾಲಕಾರ್ಮಿಕರ ನಿಷೇಧ ದಿನದಂದು ಮಾತ್ರ ಮಕ್ಕಳ ಬಗ್ಗೆ ಚಿಂತಿಸುವುದಲ್ಲ. ಪ್ರತಿ ದಿನ ನಾವು ನಮ್ಮ ಸುತ್ತಮುತ್ತಲಿನ ಪ್ರದೇಶ, ರಸ್ತೆ, ಬಡಾವಣೆ, ಹೋಟೆಲ್‌ಗ‌ಳಲ್ಲಿ, ಕಂಡುಬರುವ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಬೇಕು. 14 ವರ್ಷದೊಳಗಿನ ಬಾಲಕಾರ್ಮಿಕರಾಗಿದ್ದಲ್ಲಿ ಕರೆದು ವಿಚಾರಿಸಬೇಕು. ಅಂತಹ ಮಕ್ಕಳನ್ನು ಬಾಲ ಮಂದಿರಕ್ಕೆ ಕಳುಹಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

“14 ವರ್ಷದ ಮಕ್ಕಳ ನಡೆ ಶಾಲೆಯ ಕಡೆ’ ಎಂಬ ಘೋಷ್ಯವಾಕ್ಯದಂತೆ ನಾವೆಲ್ಲರು ಕಾರ್ಯಪ್ರವೃತ್ತರಾಗಿ ಮಕ್ಕಳಿಗೆ ಶಾಲೆಗೆ ಸೇರಿಸುವ ಮತ್ತು ಜಿಲ್ಲೆಯನ್ನು
ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದೂ ಕರೆ ನೀಡಿದರು. ಹಿರಿಯ ಸಿವಿಲ್‌ ನ್ಯಾಯಾಧಿಧೀಶ ಜಿ.ಆರ್‌. ಶೆಟ್ಟರ್‌ ಮಾತನಾಡಿ, ಪ್ರತಿಯೊಬ್ಬರು ದೈನಂದಿನ ಬದುಕಿನಲ್ಲಿ ಒಂದು ದಿನವಾದರು ತಮ್ಮ ಹತ್ತಿರದ ಬಾಲ ಕಾರ್ಮಿಕರನ್ನು ಗುರುತಿಸಿ ಅವರನ್ನು ಬಾಲಮಂದಿರಕ್ಕೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೀನಾ ಡಿಸೋಜಾ, ಸಹಾಯಕ ಕಾರ್ಮಿಕ ಆಯುಕ್ತೆ ಆರತಿ ಪೂಜಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪ್ರೊಬೇಷನರ್‌ ಕಾರ್ಮಿಕ ಅಧಿಕಾರಿ ಡಾ| ದತ್ತಾತ್ರೇಯ ಗಾದಾ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರ ಕುಮಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಹಾಜರಿದ್ದರು. ಕಲಾವಿದರು ಸಾಂಕೇತಿಕವಾಗಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆಯ ಕುರಿತು ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next