Advertisement

ಜೀವ ಜಲ ಉಳಿಸುವುದು ಎಲ್ಲರ ಕರ್ತವ್ಯ

11:18 AM May 20, 2019 | Suhan S |

ಅರಸೀಕೆರೆ: ಪ್ರಕೃತಿ ವಿಕೋಪದ ಕಾರಣ ಬರಗಾಲದ ಬವಣೆ ಅನುಭವಿಸುತ್ತಿರುವ ನಾವು ಜೀವಜಲವನ್ನು ಉಳಿಸಿ, ಮಿತವಾಗಿ ಬಳಸಬೇಕು ಎಂದು ಡಿ.ಎಂ.ಕುರ್ಕೆ ಬೂದಿಹಾಳ್‌ ವಿರಕ್ತ ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಕಣಕಟ್ಟೆ ಹೋಬಳಿಯ ಶಶಿವಾಳ ಗ್ರಾಮದ ಶನೇಶ್ವರಸ್ವಾಮಿ ದೇವಾಲಯದಲ್ಲಿನ ಅಶ್ವಾರೋಹಣ ಸೂರ್ಯದೇವರ ವಿಗ್ರಹ  ಧಾರ್ಮಿಕ ಪ್ರತಿಷ್ಠಾಪನೆಯ ಸಮಾರಂಭದಲ್ಲಿ ಮಾತನಾಡಿದರು.

ಮರೆಯಾದ ಧಾರ್ಮಿಕ ಪ್ರಜ್ಞೆ: ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಧಾರ್ಮಿಕ ಪ್ರಜ್ಞೆ ದೂರವಾಗಿ, ದುರಾಸೆ, ದುಶ್ಚಟಗಳು ಜಾಸ್ತಿಯಾಗಿರುವ ಪರಿಣಾಮ ಸಮಾಜ ಇಂದು ದಾರಿ ತಪ್ಪುತ್ತಿದೆ. ಆದ ಕಾರಣ ಪ್ರಕೃತಿಯಲ್ಲಿ ಸಮತೋಲನ ಉಂಟಾಗಿ ಕಾಲಕಾಲಕ್ಕೆ ಮಳೆ ಬೆಳೆಯಾಗದೇ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ ಎಂದರು.

ಬರಗಾಲದಲ್ಲಿಯೂ ನಮ್ಮ ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಹಾಗೂ ಧಾರ್ಮಿಕ ಸಭೆ ಸಮಾರಂಭ ಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಿ ಭಗವಂತನನ್ನು ನಮ್ಮೆಲ್ಲರ ಸಂಕಷ್ಟಗಳನ್ನು ದೂರ ಮಾಡುವಂತೆ ಸರ್ವೇ ಜನ ಸುಖೀನೋ ಭವಂತು ಎಂದು ಪ್ರಾರ್ಥಿಸುವ ಮೂಲಕ ಮನುಷ್ಯನಲ್ಲಿ ಮನೆ ಮಾಡಿರುವ ಕೊಳಕು ಭಾವನೆಗಳನ್ನು ತೊಳೆದು ಆತನಲ್ಲಿ ಸಾತ್ವಿಕ ಮನೋಭಾವ ಬೆಳೆಸಲು ಇಂತಹ ಧಾರ್ಮಿಕ ಸಭೆ ಸಮಾರಂಭಗಳು ಪ್ರೇರಕ ಶಕ್ತಿಯನ್ನು ನೀಡುತ್ತದೆ ಎಂದರು.

ಜೀವಜಲಕ್ಕೂ ಅಭಾವ: ಕಳೆದ ಅನೇಕ ವರ್ಷಗಳಿಂದ ಉತ್ತಮ ಮಳೆ ಬಾರದ ಕಾರಣ ಬರ ಪರಿಸ್ಥಿತಿಯನ್ನು ಎದುರಿಸ ಬೇಕಾಗಿದೆ ಆದ ಕಾರಣ ಅಗತ್ಯಕ್ಕಿಂತ ಹೆಚ್ಚು ನೀರು ಬಳಸದೇ ಮಿತವಾಗಿ ಎಲ್ಲರೂ ನೀರನ್ನು ಬಳಸಬೇಕಾಗಿದೆ. ಇತಿಹಾಸದಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಕಂಡಿರಲಿಲ್ಲ ಈ ಬಾರಿ ಬರ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದರು.

Advertisement

ಸ್ವಾಮೀಜಿಗೆ ಗೌರವ ಸಮರ್ಪಣೆ: ಕಾರ್ಯಕ್ರಮದಲ್ಲಿ ಇತ್ತೀಚೆಗೆ ಡಾಕ್ಟರೆಟ್ ಪದವಿ ಪಡೆದ ತಿಪಟೂರಿನ ಷಡಕ್ಷರಿ ಮಠದ ಡಾ.ರುದ್ರಮುನಿ ಸ್ವಾಮೀಜಿಗೆ ಅವರ ಭಕ್ತವೃಂದ ಹಾಗೂ ಗ್ರಾಮಸ್ಥರಿಂದ ಗೌರವ ಸಮರ್ಪಣೆ ಮಾಡಲಾಯಿತು.

ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತನೇ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ಮಳೆಯಾಶ್ರಿತ ಕೃಷಿ ಮಾಡುವ ಯಾವ ರೈತರು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮನ್ನಾಳುವ ಸರ್ಕಾರಗಳು ನಾಡಿನ ರೈತರ ಹಿತಚಿಂತನೆಗೆ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ ವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೃಷಿಗೆ ಬೇಕಾದ ನೀರಾವರಿ ವ್ಯವಸ್ಥೆ ಹಾಗೂ ಹೈನುಗಾರಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದಾಗ ಮಾತ್ರ, ಎಲ್ಲರೂ ಸುಖ, ಶಾಂತಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತವೆ ಎಂದು ಸ್ವಾಮೀಜಿ ಹೇಳಿದರು.

ವೇದಿಕೆಯಲ್ಲಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಗಂಗಾಧರಪ್ಪ ಹಾಗೂ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ರವಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next