Advertisement

ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ

05:01 PM Mar 29, 2018 | |

ಬಳ್ಳಾರಿ: ಕಡ್ಡಾಯ ಮತ್ತು ನೈತಿಕ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್‌ ಸಮಿತಿ ಮತ್ತು ಸರಳಾದೇವಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಗರದಲ್ಲಿ ಬುಧವಾರ ಮತದಾರರ ಜಾಗೃತಿ ಜಾಥಾ ನಡೆಸಲಾಯಿತು.

Advertisement

ನಗರದ ಸರಳಾದೇವಿ ಕಾಲೇಜಿನ ಆವರಣದಲ್ಲಿ ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಜಾಥಾಗೆ ಚಾಲನೆ ನೀಡಿದರು. ಕೈಯಲ್ಲಿ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದಿದ್ದ ವಿದ್ಯಾರ್ಥಿಗಳು ಕಡ್ಡಾಯ ಮತದಾನ ಮತ್ತು ಮತದಾನದ ಮಹತ್ವ ಕುರಿತು ಘೋಷಣೆಗಳನ್ನು ಕೂಗುತ್ತಾ ಗಮನ ಸೆಳೆದರು. 

ಕಾಲೇಜಿ ನಿಂದ ಚಾಲನೆ ಪಡೆದುಕೊಂಡ ಜಾಥಾವು ಗಡಗಿ ಚನ್ನಪ್ಪ ವೃತ್ತಕ್ಕೆ ತಲುಪಿತು. ವೃತ್ತದಲ್ಲಿ ಕೆಲಹೊತ್ತು ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಕಲಾವಿದರು ಮತದಾನದ ಮಹತ್ವ ಸಾರಿದರು. ಕಡ್ಡಾಯ ಮತದಾನ, ನೈತಿಕ ಮತದಾನ, ವಿವೇಚನಯುತ ಮತದಾನದ ಕುರಿತು ಕಲಾವಿದರು ಜಾನಪದ ಹಾಡುಗಳು ಮತ್ತು ಸಂಭಾಷಣೆಯ ಮೂಲಕ ಜಾಗೃತಿ ಮೂಡಿಸಿದರು.

ಬಲಿಷ್ಠ ಭಾರತಕ್ಕೆ ಮತದಾನ ಮಾಡಿ, ನಿಮ್ಮ ಅಮೂಲ್ಯ ಮತ ಚಲಾಯಿಸಿ, ಮತ ಚಲಾಯಿಸೋಣ ರಾಷ್ಟ್ರ ನಿರ್ಮಾಣ
ಮಾಡೋಣ, ಮತ ಚಲಾಯಿಸಿ ಜಾಣರೆನಿಸಿ, ನಿಮ್ಮ ಮತ ಸುಭದ್ರ ಸರ್ಕಾರದ ಆಯ್ಕೆಗೆ, ಮತ ಮಾರಾಟಕ್ಕಿಲ್ಲ, ಕಡ್ಡಾಯ ಮತ ಚಲಾಯಿಸಿ, ಸಮರ್ಥ ಅಭ್ಯರ್ಥಿ ಆರಿಸಿ ದೇಶದ ಘನತೆಯನ್ನು ಹೆಚ್ಚಿಸಿ ಎಂಬ ಫಲಕಗಳಲ್ಲಿನ ಘೋಷವಾಕ್ಯಗಳನ್ನು ವಿದ್ಯಾರ್ಥಿಗಳು ಕೂಗಿ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌, ಎಸ್‌ಪಿ ಅರುಣ್‌ ರಂಗರಾಜನ್‌, ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ಕಾಲೇಜು ಪ್ರಾಂಶುಪಾಲ ಡಾ| ಅಬ್ದುಲ್‌ ಮುತಾಲಿಬ್‌,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಸೇರಿದಂತೆ ಐದು ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಚುನಾವಣಾ ದೂರು ನಿವಾರಣಾ ಕೇಂದ್ರ 
ಬಳ್ಳಾರಿ: ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2018ರ ವಿಧಾನಸಭೆ ಚುನಾವಣೆಗೆ ಸಂಬಂಧಪಟ್ಟ ದೂರುಗಳನ್ನು
ನಿವಾರಿಸಲು ಮಹಾನಗರ ಪಾಲಿಕೆಯಲ್ಲಿ 24×7 ದೂರು ನಿವಾರಣಾ ಕೇಂದ್ರ ತೆರೆಯಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರು ವಿಧಾನಸಭೆ ಚುನಾವಣೆ ಸಂಬಂಧಿತ ಯಾವುದೇ ದೂರುಗಳನ್ನು ಈ ಕೇಂದ್ರದ (08392-273479) ದೂರವಾಣಿಗೆ ಕರೆ ಮಾಡಿ ದೂರು ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ನೀತಿ ಸಂಹಿತೆ: ಪಡಿತರ ಚೀಟಿ ಸ್ಥಗಿತ 
ಬಳ್ಳಾರಿ: 2018ರ ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿಗಳ ವಿತರಣೆ ಹಾಗೂ ಎಂಎಂಎಬಿವೈ (ಮುಖ್ಯ ಮಂತ್ರಿಗಳ ಅನಿಲ ಭಾಗ್ಯ ಯೋಜನೆ) ಕಾರ್ಯವನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಪುನಃ ಈ ಪಡಿತರ ಚೀಟಿ ವಿತರಣಾ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next