Advertisement

“ಎಲ್ಲರೂ ಮತದಾನ ಮಾಡಿ ಪ್ರಜಾತಂತ್ರ ಗೆಲ್ಲಿಸಿ’

12:26 PM Apr 06, 2019 | sudhir |

ಮಂಗಳೂರು: ಲೋಕಸಭೆಗೆ ಎ. 18ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನ ಮಾಡಬೇಕು ಹಾಗೂ ಇತರರನ್ನೂ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಹಾಗೂ ಸ್ವೀಪ್‌ ಸಮಿತಿಯ ಅಧ್ಯಕ್ಷ ಡಾ| ಆರ್‌. ಸೆಲ್ವಮಣಿ ಅವರು ಮನವಿ ಮಾಡಿದ್ದಾರೆ.
ಮತದಾನದ ಬಗ್ಗೆ ಜನ ಜಾಗೃತಿ ಮೂಡಿಸಲು “ಉದಯವಾಣಿ’ಯು ದ.ಕ. ಜಿಲ್ಲಾ ಸ್ವೀಪ್‌ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಚುನಾ ವಣೆ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಗುರುವಾರ ಉರ್ವಸ್ಟೋರ್‌ನ‌ ಜಿ.ಪಂ. ಸಭಾಂಗಣದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

Advertisement

ಅರ್ಹರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಚಿಸಿದ್ದೆ. ಉದಯ ವಾಣಿ ಪೂರ್ಣ ಸಹಕಾರ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಿದೆ. ಓದುಗರ ಪ್ರತಿಕ್ರಿಯೆ ಹಾಗೂ ಜನರ ಉತ್ಸಾಹದ ಭಾಗವಹಿಸುವಿಕೆ ಬಹಳ ಖುಷಿ ತಂದಿದೆ ಎಂದರು.

ಮಾದರಿಯಾಗೋಣ
ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ (ಎಂಎಂಎನ್‌ಎಲ್‌)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ವಿನೋದ್‌ ಕುಮಾರ್‌ ಮಾತನಾಡಿ, ಜನಾಡಳಿತದಲ್ಲಿ ಜನ ಸಾಮಾನ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದೇ ಮತದಾನ ಪ್ರಕ್ರಿಯೆ. ಅರ್ಹ ಮತದಾರರೆಲ್ಲರಿಗೆ ಮತದಾನದ ಹಕ್ಕಿದ್ದು, ಎಲ್ಲರೂ ಚಲಾಯಿಸ ಬೇಕು. ನನ್ನ ಒಂದು ಮತದಿಂದ ಏನಾಗುತ್ತದೆ ಎಂಬ ಮನೋಭಾವ ಸರಿಯಲ್ಲ; ಒಂದು ಮತವೂ ದೇಶದ ಭವಿಷ್ಯವನ್ನು ನಿರ್ಧರಿಸಲು ಕಾರಣವಾದೀತು. ಹೀಗಾಗಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಯುವ ಮತ್ತು ಹೊಸ ಮತದಾರರು ತಾವು ಮತದಾನ ಮಾಡುವುದಲ್ಲದೆ ಇತರನ್ನೂ ಪ್ರೇರೇಪಿಸುವ ಮೂಲಕ ದಕ್ಷಿಣ ಕನ್ನಡದಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ರಸ ಪ್ರಶ್ನೆ ಸ್ಪರ್ಧೆಗೆ ಓದುಗರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬಹುಮಾನ ವಿಜೇತ ರೆಲ್ಲರೂ ಜಿಲ್ಲೆಯ ಮೂಲೆ- ಮೂಲೆಯಿಂದ ಬಂದು ಪಾಲ್ಗೊಂಡಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಭಾಗವಹಿಸಿದ, ಬಹುಮಾನ ವಿಜೇತರೆಲ್ಲರಿಗೂ ಅಭಿನಂದನೆ ಸಲ್ಲಬೇಕು ಎಂದರು.

ಸ್ವೀಪ್‌ ಸಮಿತಿಯ ಕಾರ್ಯದರ್ಶಿ, ಮಂಗಳೂರು ತಾ.ಪಂ. ಇಒ ರಘು ಅವರು ಮಾತನಾಡಿ, ರಸ ಪ್ರಶ್ನೆಯಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುವುದು ಜನರ ಆಸಕ್ತಿಯ ಸಂಕೇತ ಎಂದರು. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಎ. 7ರಂದು ತಲಪಾಡಿ ಯಿಂದ ಸಸಿಹಿತ್ಲು ತನಕ ಕರಾವಳಿ ತೀರದಲ್ಲಿ 45 ಕಿ.ಮೀ. ಗಳಷ್ಟು ದೂರ ಸಂಜೆ 4 ರಿಂದ 6 ಗಂಟೆ ತನಕ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಎಲ್ಲರೂ ಭಾಗವಹಿಸ ಬೇಕು ಎಂದು ರಘು ಅವರು ಮನವಿ ಮಾಡಿದರು.

Advertisement

“ಬಹುಮಾನ ಗೆಲ್ಲಿರಿ, ಮತದಾನ ಮಾಡಿರಿ’ ಎಂಬ ಧ್ಯೇಯದೊಂದಿಗೆ ಮಾ.15ರಿಂದ ಮಾ.29ರ ತನಕ ಉದಯವಾಣಿ ಪತ್ರಿಕೆಯು ಓದುಗರಿಗಾಗಿ ಏರ್ಪಡಿಸಿದ್ದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ದಿನಕ್ಕೆ 5 ಜನರಂತೆ ಒಟ್ಟು 75 ಮಂದಿ ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ವಿಜೇತರಿಗೆ ಬಹುಮಾನವಾಗಿ ಮತದಾನ ಜಾಗೃತಿ ಮೂಡಿಸುವ ಟಿ- ಶರ್ಟ್‌, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಸ್ವಾಗತಿಸಿ, ಮಂಗಳೂರು ನ್ಯೂಸ್‌ ಬ್ಯೂರೋ ಚೀಫ್‌ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿ ದರು. ಡೆಪ್ಯುಟಿ ನ್ಯೂಸ್‌ ಬ್ಯೂರೊ ಚೀಫ್‌ ಸುರೇಶ್‌ ಪುದುವೆಟ್ಟು ಪ್ರಸ್ತಾವನೆಗೈದರು. ಮ್ಯಾಗಸಿನ್‌ ಮತ್ತು ಸ್ಪೆಷಲ್‌ ಇನೀಶಿಯೇಟಿವ್ಸ್‌ ನ್ಯಾಶನಲ್‌ ಹೆಡ್‌ ಆನಂದ್‌ ಕೆ. ವಂದಿಸಿದರು.

ಮತದಾನ ಪ್ರತಿಜ್ಞೆ ಸ್ವೀಕಾರ
ಬಹುಮಾನ ವಿಜೇತರು, ಮುಖ್ಯ ಅತಿಥಿಗಳು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಎ. 18ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು. ತಾಲೂಕು ಪಂಚಾಯತ್‌ ಇಒ ರಘು ಅವರು ಪ್ರಮಾಣ ವಚನ ಬೋಧಿಸಿದರು.

ಪ್ರಶ್ನೆಗಳು ಜೀವನಕ್ಕೆ ಸಹಕಾರಿ
ರಸ ಪ್ರಶ್ನೆಯಲ್ಲಿ ಕೇಳಲಾದ ಪ್ರಶ್ನೆಗಳು ನಮ್ಮ ಜೀವನಕ್ಕೆ ಸಹಕಾರಿಯಾಗಿವೆ. ಬಹಳಷ್ಟು ಖುಶಿಯಿಂದ ದಿನಂಪ್ರತಿ ಭಾಗವಹಿಸಿದ್ದೇನೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಇಂತಹ ರಸ ಪ್ರಶ್ನೆ ಸ್ಪರ್ಧೆ ನಡೆಯಲಿ. ಈ ಕಾರ್ಯಕ್ರಮ ಅಭಿನಂದನೀಯ.
– ಚೇತನ್‌ ಸುಳ್ಯ, (ವಿಜೇತರು)

Advertisement

Udayavani is now on Telegram. Click here to join our channel and stay updated with the latest news.

Next