ಕಡೂರು: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದ ಮಾನವ ಹಕ್ಕುಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಶಶಿಕಲಾ ಮಾತನಾಡಿದರು.
ಕಡೂರು: ಮಾನವ ಹಕ್ಕುಗಳ ಬಗ್ಗೆ ನಮ್ಮ ಸಂವಿಧಾನದಲ್ಲಿ ಕಾಯ್ದೆಗಳನ್ನು ರೂಪಿಸಿ ಎಲ್ಲವೂ ಸಹ ಕಾನೂನಿನ ಚೌಕಟ್ಟಿನಲ್ಲಿ ಬರುವಂತೆ ಮಾಡಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಕಾನೂನಿಗೆ ಗೌರವ ನೀಡಬೇಕೆಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ರಾಜು ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆಯ ಸಂಯುಕ್ತಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ನಗರದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಹಕ್ಕು ಮತ್ತು ಸೌಲಭ್ಯ, ಮಾನವ ಹಕ್ಕುಗಳ ವಿಷಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಹಿರಿಯ ನಾಗರೀಕರು, ಮಕ್ಕಳ ಹಕ್ಕುಗಳನ್ನು ಕಾಯ್ದೆ ಮಾಡುವ ಮೂಲಕ ನೀಡಲಾಗಿದೆ. ಈ ಹಕ್ಕುಗಳ ಬಗ್ಗೆ ಮಾಹಿತಿ ಪಡೆಯುವುದು ನಾಗರಿಕರ ಕರ್ತವ್ಯವಾಗಿದೆ. ಕಾಯ್ದೆಗಳ ಬಗ್ಗೆ ತಿಳಿದುಕೊಂಡರೆ ಯಾರೆ ಕಾಯ್ದೆಗಳನ್ನು ಉಲ್ಲಂಘಿಸಿದರೆ ಪರಿಹಾರ ಕಂಡುಕೊಳ್ಳಲು ನ್ಯಾಯಾಲಯಗಳು ಸಹಕಾರ ಮಾಡುತ್ತವೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಕಾನೂನು ಸೇವೆಗಳ ಸಮಿತಿ ನೀಡುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿ ಎಂದರು.
ಹಿರಿಯ ವಕೀಲ ಕೆ.ಎನ್.ಬೊಮ್ಮಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು, ಪ್ರಾಣಿಗಳ ರೀತಿ ವರ್ತಿಸುತ್ತಿರುವುದು ವಿಷಾದಕರವಾಗಿದೆ. ಇದರ ಪರಿಣಾಮ ನಮ್ಮ ಜೀವನ ಮೌಲ್ಯಗಳಿಗೆ ಯಾವುದೇ ಅರ್ಥವಿಲ್ಲದಂತಾಗಿದೆ. ಆದ್ದರಿಂದ ಎಲ್ಲರೂ ಸಹ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾರ್ಮಿಕ ಅಧಿಕಾರಿ ವೈ. ಎಲ್. ಶಶಿಕಲಾ ವಹಿಸಿದ್ದರು.
ಸರಕಾರಿ ಅಭಿಯೋಜಕರಾದ ಬಿ.ಎಸ್. ಮಮತಾ, ಮೊಹಮ್ಮದ್ ಹ್ಯಾರೀಸ್, ಸಮಾಜ ಕಲ್ಯಾಣ ಇಲಾಖೆಯ ಎ.ಕೆ. ಪಾಟೀಲ್, ಕೊಳಚೆ ನಿರ್ಮೂಲನಾ ಮಂಡಳಿಯ ಯಶವಂತ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎನ್. ಪ್ರಕಾಶ್, ವಕೀಲರಾದ ಶೇಷಪ್ಪ, ಕಾರ್ಯದರ್ಶಿ ಉಮಾಶಂಕರ್ ಮಾತನಾಡಿದರು. ನಂಜುಡಪ್ಪ, ಲತಾ, ಅಂಬೇಡ್ಕರ್ ನಗರದ ಗೋವಿಂದಪ್ಪ, ಜೈ ಭೀಮ್ ಅಂಬೇಡ್ಕರ್ ಕಟ್ಟಡ ಕಾರ್ಮಿಕರು, ಒ.ಆರ್. ಮಂಜುನಾಥ್, ಶೋಭಾ ಮತ್ತಿತರರು ಇದ್ದರು.