ಕೊಪ್ಪಳ: ನಮ್ಮ ನಾಡು, ನೆಲ, ಜಲ ಹಾಗೂ ಭಾಷೆಯನ್ನು ನಾವು ಗೌರವಿಸಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿದರು. ತಾಲೂಕಿನ ಬಸಾಪುರದಲ್ಲಿ ಕರುನಾಡು ಯುವ ಪ್ರಜಾ ವೇದಿಕೆ ತಾಲೂಕಾ ಘಟಕ, ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನೆಲ, ಜಲ, ಭಾಷೆಯನ್ನು ಗೌರವಿಸಬೇಕು ಅಂದಾಗ ಮಾತ್ರ ನಾವು ಸ್ವಾಭಿಮಾನಿಗಳಾಗಲು ಸಾಧ್ಯ. ಪ್ರತಿಯೊಂದು ರಂಗದಲ್ಲಿ ಭಾಷೆ ಉಳಿಸುವ ಕೆಲಸ ಮಾಡಬೇಕು. ನಮ್ಮ ರಾಜ್ಯ ನಮ್ಮ ಹೆಮ್ಮೆ ಎನ್ನುವ ಅಭಿಮಾನ ತೋರಬೇಕು.
ಕರುನಾಡು ಪ್ರಜಾ ವೇದಿಕೆ ಜಾತಿ, ಧರ್ಮ, ಭಾಷೆಗೆ ಸಿಮಿತವಾಗದೇ ಇಡೀ ಭಾರತದ ಪ್ರಜೆಗಳಿಗೆ ಸೂ #ರ್ತಿಯಾಗಬೇಕು. ಭಾರತವನ್ನು ಒಗ್ಗೂಡಿಸುವ ಕೆಲಸ ಯುವಕರಿಂದ ಆಗಲಿ. ಒಳ್ಳೆಯ ವಿಚಾರಗಳಿಂದ ಯುವಕರು ಸಮಸ್ಯೆಗಳನ್ನು ಬಗೆಹರಿಸಬೇಕು. ನೈಜತೆ ಇರುವ ಕಾರ್ಯಗಳನ್ನು ಮಾಡಬೇಕು ಎಂದರು.
ವೇದಿಕೆಯ ರಾಜ್ಯಾಧ್ಯಕ್ಷ ರಾಜಭಕ್ಷಿ ಹೊಂಬಳ್ ಮಾತನಾಡಿ, ಕನ್ನಡ ಭಾಷೆ ವಿಶಿಷ್ಟವಾಗಿದ್ದು, ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದೆ. ಇಲ್ಲಿನ ಕಲೆ, ಸಂಸ್ಕೃತಿ ಜನಮನ್ನಣೆ ಗಳಿಸಿದೆ. ಪಾಶ್ಚಾತ್ಯರ ಅನುಕರಣೆಯಿಂದ ನಮ್ಮತನಕ್ಕೆ ಧಕ್ಕೆಯಾಗುತ್ತಿದೆ. ಯುವಕರು ನಾಡಿನ ಪರಂಪರೆ ರಕ್ಷಿಸಲು ಮುಂದಾಗಬೇಕು ಎಂದರು.
ಗ್ರಾಮದ ಪ್ರಗತಿಪರ ರೈತರಿಗೆ ವಿಶೇಷವಾಗಿ ಸನ್ಮಾನ ಮಾಡಲಾಯಿತು. ಜಿಪಂ ಮಾಜಿ ಅಧ್ಯಕ್ಷ ಜನಾರ್ದನ, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಪಂ ಸದಸ್ಯರಾದ ಯಮನೂರಪ್ಪ ವಡ್ಡರ್, ಚನ್ನಕೃಷ್ಣ ಗೊಲ್ಲರ, ದಸ್ತಗಿರಿ, ನಜೀರಸಾಬ್, ರೂಪ್ಲಾ ನಾಯ್ಕ, ಮಾನ್ವಿ ನರಸಿಂಹಲು, ಲಕ್ಷ್ಮಣ, ಅಕ್ಷಯ್ ವಡ್ಡರ್, ಅಬ್ದುಲ್ ವಾಹಿದ್, ಅಶೋಕ ಹೊಸಳ್ಳಿ, ಮಹಿಳಾ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಬಿಬಿಜಾನ್, ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ರೆಹಮಾನಸಾಬ್, ಉಪಾಧ್ಯಕ್ಷ ಖಾಜವಲಿ, ಮಂಜುನಾಥ ಕಾಟ್ರಳ್ಳಿ, ಸುಲೇಮಾನ್ ಸೇರಿದಂತೆ ಇತರರಿದ್ದರು.