Advertisement

ನೀರಿನ ವಿಚಾರದಲ್ಲಿ ಎಲ್ಲರೂ ಒಂದಾಗಬೇಕಿದೆ 

06:00 AM Mar 11, 2018 | |

ಬೆಂಗಳೂರು: ಕಾವೇರಿ ಹಾಗೂ ಮಹದಾಯಿ ನೀರಿನ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಅಭಿಪ್ರಾಯಪಟ್ಟರು. ಪ್ರಸ್‌ಕ್ಲಬ್‌ನಲ್ಲಿ ಶನಿವಾರ “ಉದಯವಾಣಿ’ಯ ಉಪಮುಖ್ಯ ವರದಿಗಾರ ಎಸ್‌.ಲಕ್ಷ್ಮೀ ನಾರಾಯಣ ಅವರ “ಕರ್ನಾಟಕ ರಾಜಕೀಯ ಪ್ರಯೋಗಶಾಲೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾವೇರಿ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ಪಕ್ಷಗಳು ಒಂದಾಗುತ್ತವೆ. ಅದೇ ರೀತಿ ರಾಜ್ಯದಲ್ಲಿಯೂ ಕಾವೇರಿ ಹಾಗೂ ಮಹದಾಯಿ ವಿಚಾರದಲ್ಲಿ ಎಲ್ಲ ಪಕ್ಷಗಳು ಒಂದಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದರು.

Advertisement

ಸುಪ್ರೀಂಕೋರ್ಟ್‌ ಇತ್ತೀಚೆಗೆ ನೀಡಿರುವ ಆದೇಶ ದಿಂದಾಗಿ ಮುಂದಿನ 15 ವರ್ಷಗಳ ಕಾಲ ರಾಜ್ಯದ ಜನತೆ ನೋವು ಅನುಭವಿಸುವಂತಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೋರ್ಟ್‌ ಹೇಳಿದ್ದು, ಇದರಿಂದ ರಾಜ್ಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪರಿಣಾಮ ರಾಜ್ಯದಲ್ಲಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ಅಣೆಕಟ್ಟುಗಳು ನಮ್ಮದಾಗಿ ಉಳಿಯವು. ಹೀಗಾಗಿ, ಎಲ್ಲ
ರಾಜಕೀಯ ಪಕ್ಷಗಳು ಒಂದಾಗಿ ಹೋರಾಡಬೇಕಿದೆ ಎಂದರು. ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ 2007ರಲ್ಲಿ ಮೇಲ್ಮನವಿ ಅರ್ಜಿ ಹಾಕಿದ್ದರಿಂದ ರಾಜ್ಯಕ್ಕೆ ಸದ್ಯ 14.7 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ಕಾವೇರಿ ವಿಚಾರದಲ್ಲಿ ರಾಜ್ಯ ಹಲವು ಬಾರಿ ಎಡವಿದ್ದು, ಅದನ್ನು ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖೀಸಿದೆ. ಆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನಿಂದ ರಾಜ್ಯಕ್ಕೆ ಎದುರಾಗುವ ಸಂಕಷ್ಟಗಳನ್ನು ನಿವಾರಿಸುವಂತೆ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೋರಲಾಗಿದೆ ಎಂದು ಹೇಳಿದರು.

“ರಾಜ್ಯದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳ ಹೊರತಾಗಿಯೂ ಕಾವೇರಿ ವಿಚಾರದಲ್ಲಿ ದನಿ ಎತ್ತುವುದು ಪ್ರಾದೇಶಿಕ ಪಕ್ಷದ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ನನಗೆ 85 ವರ್ಷವಾದರೂ ಕಾವೇರಿ ವಿಚಾರದಲ್ಲಿ ಹೋರಾಟದ ಹಾದಿ ತುಳಿದಿರುವುದರಲ್ಲಿ ಯಾವುದೇ
ಸ್ವಾರ್ಥವಿಲ್ಲ. ರಾಜ್ಯದ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ ಚರ್ಚಿಸೋಣ ಎಂದರೆ, ಕೇವಲ 3 ನಿಮಿಷ ಅವಕಾಶ ನೀಡುತ್ತಾರೆ. ಜತೆಗೆ ಸಭೆಯಲ್ಲಿ ನಾನು ಮಾತನಾಡುವುದು ಮಾಧ್ಯಮಗಳಲ್ಲಿ ಬರದಂತೆ ನೋಡಿಕೊಳ್ಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಕೆಲವೊಮ್ಮೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ವಾಗಿದೆ. ಪ್ರಾದೇಶಿಕ ಪಕ್ಷಗಳು ಬಲವಾಗಿರುವ ಕಾರಣದಿಂದ ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ಬಂದರೂ ಅವು ತಮಿಳುನಾಡಿನ ಪಕ್ಷಗಳ ಬಾಗಿಲ
ಮುಂದೆ ಹೋಗಿ ನಿಲ್ಲುತ್ತವೆ. ಹೀಗಾಗಿ, ಕಾವೇರಿ ವಿಚಾರದಲ್ಲಿ ದೊಡ್ಡ ಪಕ್ಷ, ಸಣ್ಣ ಪಕ್ಷ ಎಂಬ ಸಂಕುಚಿತ ಮನೋಭಾವನೆ ಬಿಟ್ಟು ಹೋರಾಡಬೇಕಿದೆ ಎಂದು ಕರೆ ನೀಡಿದರು.

ಲಕ್ಷ್ಮಿನಾರಾಯಣ ಅವರು ಉತ್ತಮ ಅಂಕಣಕಾರ ರಾಗಿದ್ದು, “ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ’ ಕೃತಿಯಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವ, ಅವು ಎದುರಿಸುತ್ತಿರುವ ಸವಾಲು ಸೇರಿ ಹಲವಾರು ವಾಸ್ತವಾಂಶಗಳನ್ನು ಉಲ್ಲೇಖೀಸಿದ್ದಾರೆ. ಅವರಿಂದ
ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್‌.ವಿಜಯ ಕುಮಾರ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಬೆಂಗಳೂರು ಪ್ರಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ, ಅನು ಪ್ರಕಾಶನದ ಬಿ.ಎನ್‌.ರಮೇಶ್‌ ಇದ್ದರು.

Advertisement

ದೇವರಾಜ ಅರಸು ಶ್ರೇಷ್ಠ ವ್ಯಕ್ತಿ ರಾಜ್ಯ ರಾಜಕಾರಣದಲ್ಲಿ ನಾನು ಕಂಡ ಶ್ರೇಷ್ಠ ವ್ಯಕ್ತಿ ಎಂದರೆ ಅದು ದಿ.ದೇವರಾಜ ಅರಸು. ನಾನು,
ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿದ್ದ ವೇಳೆ ಯಾವುದೇ ಪ್ರಶ್ನೆ ಕೇಳಿದರೂ, ಉತ್ತರ ನೀಡದೆ ಅವರು ಸದನದಿಂದ ಹೊರ ಹೋಗುತ್ತಿರಲಿಲ್ಲ. ಜತೆಗೆ, ಅವರ ತಪ್ಪು ನಿರ್ಣಯಗಳ ಕುರಿತು ಗಮನ ಸೆಳೆದಾಗ, ಪ್ರಾಮಾಣಿಕವಾಗಿ ತಪ್ಪು ಒಪ್ಪಿಕೊಂಡು
ಕ್ಷಮೆಯಾಚಿಸುವಂತಹ ದೊಡ್ಡಗುಣ ಹೊಂದಿದ್ದರು. ಅವರ ನಂತರ ಅಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯನ್ನು ನಾನು ನೋಡಿಲ್ಲ. ಮುಂದೆ ನೋಡುವೆನೋ, ಇಲ್ಲವೋ ಗೊತ್ತಿಲ್ಲ ಎಂದು ದೇವೇಗೌಡರು ಸ್ಮರಿಸಿದರು.

ಕರ್ನಾಟಕದ ಪರಂಪರೆ ಹಾಗೂ ಇತಿಹಾಸ ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರುವುದರೊಂದಿಗೆ, ಹಲವಾರು ಬದಲಾವಣೆಗಳಿಗೂ ಕಾರಣವಾಗಿದೆ. ಪ್ರಜಾಪ್ರಭುತ್ವದ ನಿಜವಾದ  ಗುರಿಯನ್ನು ತಲುಪಲು ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ.
ರಾಜಕಾರಣದಲ್ಲಿಂದು ಎಲ್ಲ ವರ್ಗದ ಜನರಿದ್ದು, ಮೊದಲು ಇತಿಹಾಸ ಹಾಗೂ ಪರಂಪರೆಯನ್ನು ತಿಳಿಯಬೇಕಿದೆ.

● ವಿ.ಆರ್‌.ಸುದರ್ಶನ್‌, ಮಾಜಿ ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next