ಯಾದಗಿರಿ: ಅಲೆಮಾರಿ ಜನಾಂಗದವರು ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಮೂಢನಂಬಿಕೆಯಿಂದ ಹೊರಬಂದು ಸಮುದಾಯದ ಸರ್ವತೋಮುಖ
ಅಭಿವೃದ್ಧಿಗೆ ಎಲ್ಲರೂ ಸಹಕರಿಸುವಂತೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಂಡಳಿ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಭೀಮರಾಯ್ ಒಂಟೆತ್ತು ಕರೆ ನೀಡಿದರು.
ಚಿಕ್ಕನಳ್ಳಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ಮೂಡನಂಬಿಕೆ, ಕಂದಾಚಾರ ಪದ್ಧತಿ ಕೊನೆಗಾಣಿಸುವುದು ಹಾಗೂ ಸರ್ಕಾರಿ ಸೌಲಭ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ವಿಶೇಷ ಪ್ರೋತ್ಸಾಹ ಧನ, ಶಿಷ್ಯ ವೇತನ, ವಿದ್ಯಾಸಿರಿ, ಶಿಕ್ಷಣ ಸಾಲ ಯೋಜನೆ ಸೇರಿ ಹತ್ತಾರು ಸೌಲಭ್ಯ ನೀಡುತ್ತಿದ್ದು, ಸರಿಯಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಲು ಅಲೆಮಾರಿ ಸಮುದಾಯದವರಿಗೆ ಸಲಹೆ ನೀಡಿದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿ ಕಾರಿ ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ, ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ವಿವಿಧ ಸೌಲಭ್ಯ ನೀಡಲಾಗಿದೆ ಎಂದರು. ಶರಣಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ನಿಂಗಪ್ಪ ಯಾದವ, ಕೃಷ್ಣ ಯಾದವ, ಭೀಮಪ್ಪ ಯಾದವ, ಶೇಖಪ್ಪ ಯಾದವ ಇದ್ದರು.