Advertisement

ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ

09:43 PM Apr 09, 2019 | Team Udayavani |

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರೈತ ಪ್ರತಿನಿಧಿಗಳು ಕೃಷಿ ಇಲಾಖೆ ಅಧಿಕಾರಿ ಸಿಬ್ಬಂದಿ ನಗರದಲ್ಲಿ ಮಂಗಳವಾರ ನಡೆಸಿದ ಜಾಥಾ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

Advertisement

ನಗರದ ಪ್ರವಾಸಿ ಮಂದಿರ ಆವರಣದಿಂದ ಜಿಲ್ಲಾ ಆಡಳಿತ ಭವನದ ಆವರಣದವರೆಗೆ ಕೃಷಿ ಇಲಾಖೆ, ಸ್ವೀಪ್‌ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಮತದಾನದ ಜಾಗೃತಿ ಕುರಿತು ಮೆರವಣೆಗೆ ನಡೆಸಲಾಯಿತು. ಜಾಥಾ ಕಾರ್ಯಕ್ರಮಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್‌ ಚಾಲನೆ ನೀಡಿದರು.

ಪ್ರತಿಜ್ಞಾವಿಧಿ ಸ್ವೀಕಾರ: ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ನಿಮ್ಮಿಂದ, ನಮ್ಮ ನಡೆ ಸದೃಢ ಪ್ರಜಾಪ್ರಭುತ್ವವನ್ನು ಕಟ್ಟುವ ಕಡೆಗೆ, ನಿಮ್ಮ ಮತ ನಿಮ್ಮ ಭವಿಷ್ಯ ಎಂಬ ಭಿತ್ತಿಫ‌ಲಕಗಳನ್ನು ಹಿಡಿದು ಭುವನೇಶ್ವರಿ ವೃತ್ತಕ್ಕೆ ಆಗಮಿಸಿದರು. ಅಲ್ಲಿ ಮಾನವ ಸರಪಳಿ ರಚಿಸಿ ಮತದಾನದ ಹಿರಿಮೆಯನ್ನು ಎತ್ತಿ ಹಿಡಿಯುವಂತೆ ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆದರು. ಬಳಿಕ ಬಿ. ರಾಜಚಯ್ಯ ಜೋಡಿ ರಸ್ತೆಯಲ್ಲಿ ಸಾಗಿ ಬಂದರು. ಜಿಲ್ಲಾಡಳಿತ ಭವನದಲ್ಲಿ ಸಮಾವೇಶಗೊಂಡು ಮತದಾನ ಮಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ರೈತರ ಕೆಲಸ ಶ್ಲಾಘನೀಯ: ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಿದ ಸ್ವೀಪ್‌ ಸಮಿತಿಯ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌ ಲತಾಕುಮಾರಿ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದಾರೆ ದೇಶದ ಸಮಸ್ತ ಜನತೆಗೆ ಅನ್ನದಾತರಾಗಿದ್ದು ರೈತರ ಶ್ರಮ ಮತ್ತು ಕಾಯಕ ಶ್ಲಾಘನೀಯ ಎಂದರು.

ಪ್ರತಿಯೊಬ್ಬರು ಮತದಾನ ಮಾಡಿ: ರೈತರು ಮಂಗಳವಾರ ಜನತೆಯಲ್ಲಿ ವಿಶೇಷವಾದ ಮತದಾನ ಜಾಗೃತಿ ಮೂಡಿಸಲು ಜಾಥಾ ಏರ್ಪಡಿಸಿರುವುದು ಸಂತೋಷದ ವಿಷಯವಾಗಿದೆ. ಸದೃಢ ದೇಶ ನಿರ್ಮಾಣ ಮಾಡಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಮತದಾನದ ಪ್ರಮಾಣ ಹೆಚ್ಚಳ ಮಾಡಿ: ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್‌ ಮಾತನಾಡಿ, ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಅನೇಕ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳ ಮಾಡಬೇಕು.

ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು. ಮತದಾನ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು ಎಂಬ ನಿಟ್ಟಿನಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮಗಳ ಉದ್ದೇಶ ಮತ್ತು ಗುರಿಯಾಗಿದೆ ಎಂದು ತಿಳಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಬ್ಬವಿದ್ದಂತೆ. ಮತದಾನ ನಮ್ಮೆಲ್ಲರ ಹಕ್ಕು. ಮತದಾನದಿಂದ ಯಾರೂ ವಂಚಿತರಾಗ ಬಾರದು. ಪ್ರತಿಯೊಬ್ಬ ಮತದಾರರು ಮತದಾನ ಮಾಡಬೇಕು.

ಯುವಕರು ದೇಶದ ಶಕ್ತಿ. ಇತರರಿಗೂ ಮತದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ರೈತ ಮುಖಂಡರಾದ ಸಿದ್ದರಾಜು, ಶಾಂತಮಲ್ಲಪ್ಪ, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next