ದಾವಣಗೆರೆ: ರೈತರು, ಬಡವರು ಶ್ರಮಿಕ ವರ್ಗದವರು ಸರ್ಕಾರ ರೂಪಿಸಿ ಯೋಜನೆಗಳ ಸೌಲಭ್ಯ ಪಡೆಯುವ ಮೂಲಕ ಉತ್ತಮ ಆರೋಗ್ಯವಂತರಾಗಬೇಕು ಎಂದು ಡಾ| ಪ್ರಭಾ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಬೇತೂರು ಗ್ರಾಮ ಪಂಚಾಯತಿ ಮತ್ತು ಬಾಪೂಜಿ ವಿದ್ಯಾಸಂಸ್ಥೆಯ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಸಹಯೋಗದಲ್ಲಿ ಬೇತೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ಅನಿವಾರ್ಯ ಮತ್ತು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದ ಜನತೆಗೆ ಆರೋಗ್ಯದ ಬಗ್ಗೆ ಅರಿವು ಮತ್ತು ಸೌಲಭ್ಯ ನೀಡುವ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಿಬಿರದ ಮೂಲಕ ತಮ್ಮ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ತೆಗೆದುಕೊಂಡು ಬಂದಿದ್ದು, ಶಿಬಿರದಲ್ಲಿ ಕೇವಲ ಆರೋಗ್ಯ ತಪಾಸಣೆ ಮಾತ್ರ ಮಾಡಲಾಗುವುದು. ಹೆಚ್ಚಿನ ಚಿಕಿತ್ಸೆ ಅನಿವಾರ್ಯವಾದಲ್ಲಿ ಸರ್ಕಾರದ ಸೌಲಭ್ಯದೊಂದಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ರಕ್ತದಾನ ಮಹಾದಾನ. 18-60 ವರುಷದ ಪುರುಷ- ಮಹಿಳೆಯರು ಎಂಬ ಬೇಧವಿಲ್ಲದೇ ರಕ್ತದಾನ ಮಾಡಬಹುದು. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವುದರ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳಾಡಿದ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ| ಬಿ.ಎಸ್. ಪ್ರಸಾದ್, ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಪ್ರಾಂಶುಪಾಲ ಡಾ| ವಸುಂಧರಾ ಶಿವಣ್ಣ, ಆರೋಗ್ಯವಂತರಾದರೆ ಮಾತ್ರ ನಾವು ಜೀವನದಲ್ಲಿ ಏನನ್ನಾದರೂ ಸಾ ಧಿಸಲು ಸಾಧ್ಯ. ಪ್ರತಿಯೊಬ್ಬರು ಅರಿತು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಶಿಬಿರ ಸಂಘಟಕ ವೀರೇಶ್ ಪಟೇಲ್ ಮಾತನಾಡಿ, ಕಳೆದ 4 ಭಾನುವಾರಗಳಿಂದ ದಾವಣಗೆರೆ ತಾಲ್ಲೂಕಿನ ಪ್ರಮುಖ ಪಂಚಾಯಿತಿ ವ್ಯಾಪ್ತಿಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗಿದೆ. ಮುಂದಿನ ಭಾನುವಾರ ಕುಕ್ಕವಾಡ ತದ ನಂತರ ಕಡ್ಲೆಬಾಳು ಗ್ರಾಮದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನಮ್ಮ ಪರಸಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಾ ಕರಿಬಸಪ್ಪ, ಮಾಜಿ ಸದಸ್ಯ ಪಿ. ಕರಿಬಸಪ್ಪ, ಕಾಡಾ ಸಮಿತಿ ಸದಸ್ಯ ಎಚ್. ಬಸವರಾಜಪ್ಪ, ಎಪಿಎಂಸಿ ನಿರ್ದೇಶಕರಾದ ಎಂ.ಕೆ. ರೇವಣಸಿದ್ದಪ್ಪ, ರಾಜಣ್ಣ ತೋಟದ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ ಬಸವರಾಜಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಂಬಾ, ಡಾ| ಆರ್.ಜಿ. ಗೀತಾಲಕ್ಷ್ಮಿಇತರರು ಇದ್ದರು.