Advertisement

“ಉತ್ತಮ ಪರಿಸರಕ್ಕೆ ಪ್ರತಿಯೊಬ್ಬರೂ ಸಹಕರಿಸಿ’

08:57 PM Jun 14, 2019 | Sriram |

ಮಡಿಕೇರಿ: ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ನಿರ್ಮಾಣಕ್ಕಾಗಿ ವೈಜ್ಞಾನಿಕ ರೂಪದಲ್ಲಿ ಹಸಿ ಮತ್ತು ಒಣಕಸವನ್ನಾಗಿ ಬೇರ್ಪಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ‌ ಎಂ.ಪಿ.ಅಪ್ಪಚ್ಚುರಂಜನ್‌ ಕರೆ ನೀಡಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಗ್ರಾಮೀಣ ಸ್ವತ್ಛ ಭಾರತ ಅಭಿಯಾನ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಒಣ ಕಸವಾದ ತ್ಯಾಜ್ಯ ಕಾಗದ, ಗಾಜಿನ ಬಾಟಲು, ಪ್ಲಾಷ್ಟಿಕ್‌ ಚೀಲ, ಟೆಟ್ರಾ ಪ್ಯಾಕ್‌, ಲೋಹದ ಕ್ಯಾನುಗಳು, ಹಾಗೆಯೇ ಹಸಿ ಕಸವಾದ ಮನೆಯ ತ್ಯಾಜ್ಯ, ತೆಂಗಿನ ಚಿಪ್ಪು, ಹೂ ಗಳು, ಒಡೆದ ಮೊಟ್ಟೆ ಚಿಪ್ಪು, ಎಲೆಗಳು ಮತ್ತಿತರವನ್ನು ವಿಂಗಡಿಸಿ ಕಸವನ್ನು ಎರೆ ಹುಳು ಗೊಬ್ಬರವನ್ನಾಗಿ ಮಾಡಬೇಕು ಎಂದರು.

ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಬಳಿ ಗೃಹ ಮಂಡಳಿಗೆ ಜಾಗ ನೀಡಿದವರು ಯಾರು, ಹಾಗೆಯೇ 800 ಮರಗಳ ಹನನಕ್ಕೆ ಅನುಮತಿ ಕೊಟ್ಟವರಾರು ಎಂದು ಶಾಸಕರು ಪ್ರಶ್ನಿಸಿದರು. ಆದರೆ ಯಾರೋ ಮಾಡಿದ ತಪ್ಪಿನಿಂದ ಇನ್ನೊಬ್ಬರ ಮೇಲೆ ಕೆಸರು ಎರಚುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.

ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಅವರು ಮಾತನಾಡಿ ಪ್ರತಿಯೊಬ್ಬರ ಮನೆಯಲ್ಲಿಯೂ ಶೌಚಾಲಯ ಕಡ್ಡಾಯವಾಗಿ ಇರಬೇಕು ಮತ್ತು ಬಳಕೆ ಮಾಡಬೇಕು. ಛತ್ತೀಸ್‌ಘಢ ರಾಜ್ಯದಲ್ಲಿ ಪ್ರತಿಯೊಂದು ಪುಟ್ಟ ಮನೆಯಲ್ಲಿಯೂ ಶೌಚಾಲಯ ಇರುವುದನ್ನು ಕಾಣಬಹುದಾಗಿದೆ ಎಂದರು. ಸ್ವತ್ಛ ಮೇವ ಜಯತೆ ಹಾಗೂ ಜಲಾಮೃತ ಜನಜಾಗೃತಿ ಸಂಬಂಧಿಸಿದಂತೆ ಸ್ಲೆಡ್‌ ಶೋ ಮೂಲಕ ಮಾಹಿತಿ ನೀಡುವಂತೆ ಲೋಕೇಶ್ವರಿ ಗೋಪಾಲ್‌ ಅವರು ಸಲಹೆ ಮಾಡಿದರು. .

Advertisement

ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಸ್ವತ್ಛ ಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತಿ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಗಿರೀಶ್‌ ಕಾರ್ನಾಡ್‌ ಅವರ ನಿಧನ ಹಿನ್ನೆಲೆ ಸಂತಾಪ ಸೂಚಿಸಲಾಯಿತು. ಗ್ರೀನ್‌ ಸಿಟಿ ಫೊರಂ ಸ್ಥಾಪಕ ಅಧ್ಯಕ್ಷರಾದ ಚೆಯ್ಯಂಡ ಸತ್ಯ, ಮೊಂತಿ ಗಣೇಶ್‌, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರಿಕಂಠಮೂರ್ತಿ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪರಿಸರ ಗೀತೆ ಹಾಡಿದರು. ಮನೋಜ್‌ ಕಾರ್ಯಕ್ರಮ ನಿರೂಪಿಸಿದರು. ಗುಡೂರು ಭೀಮಸೇನ ವಂದಿಸಿದರು.

“104 ಗ್ರಾಮ ಪಂಚಾಯತ್‌ಗಳಲ್ಲಿ ಅಭಿಯಾನ’‌
ಜಿ.ಪಂ.ಸಿಇಒ ಕೆ.ಲಕ್ಷಿ¾àಪ್ರಿಯಾ ಅವರು ಮಾತನಾಡಿ ಸ್ವಚ್ಛ ಮೇವ ಜಯತೇ ಆಂದೋಲನವು ಜಿಲ್ಲೆಯ 104 ಗ್ರಾಮ ಪಂಚಾಯತ್‌ಗಳಲ್ಲಿ ಒಂದು ತಿಂಗಳ ಕಾಲ ಗ್ರಾಮಸ್ಥರ ಸಹಕಾರದಲ್ಲಿ ಜನ ಜಾಗೃತಿ ಹಾಗೂ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರ ಮೂಲಕ ನಡೆಯಲಿದೆ ಎಂದರು. ಗ್ರಾಮೀಣ ಸಮುದಾಯಕ್ಕೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ನೀಡುವುದು, ವೈಯಕ್ತಿಕ ಸಮುದಾಯ ಮತ್ತು ಸಾಂಸ್ಥಿಕ ಶೌಚಾಲಯಗಳ ನಿರ್ವಹಣೆ ಮಾಡುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ನೀಡುವುದು, ಜಲಾಮೃತ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಶಾಲೆ, ಅಂಗನವಾಡಿ, ಸರ್ಕಾರಿ ಜಾಗದಲ್ಲಿ ಹಾಗೂ ನರೇಗಾ ಯೋಜನೆಯಡಿಯಲ್ಲಿ ಗಿಡ ನಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಈ ಕಾರ್ಯಕ್ರಮಗಳಿಗೆ ಪೂರಕವಾಗಿ ಒಂದು ತಿಂಗಳು ಪೂರ್ತಿಯಾಗಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಜಾಗೃತಿ ನೀಡಲಾಗುತ್ತಿದೆ. ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಸ್ವಚ್ಛತಾ ರಥದ ಚಾಲನೆ ಮಾಡಿ ಜನ ಜಾಗೃತಿ ಮೂಡಿಸಲಿದೆ ಎಂದು ಜಿ.ಪಂ.ಸಿಇಒ ಅವರು ಹೇಳಿದರು.

ಸ್ವಚ್ಛತೆ ರಥಕ್ಕೆ ಚಾಲನೆ
ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತಿ ಕಾರ್ಯಕ್ರಮದ ಸ್ವಚ್ಛತೆ ರಥಕ್ಕೆ ಶಾಸಕ‌ ಎಂ.ಪಿ.ಅಪ್ಪಚ್ಚುರಂಜನ್‌ ಅವರು ‌ ಚಾಲನೆ ನೀಡಿದರು. ಸ್ವಚ್ಛತಾ ರಥ ವಾಹನವು ಜುಲೈ, 10 ರವರೆಗೆ ಸಂಚರಿಸಲಿದೆ. ಜಿಲ್ಲೆಯ ಮೂರು ತಾಲೂಕುಗಳ ‌ ಎಲ್ಲಾ ಗ್ರಾಮ ಪಂಚಾಯತ್‌ ಗಳಿಗೆ ಸ್ವಚ್ಛತಾ ರಥದ ಮೂಲಕ ‌ ಜಾಗೃತಿ ಮೂಡಿಸಲಾಗುತ್ತದೆ.

ಜಲಾಮೃತ ಪರಿಸರ ದಿನಾಚರಣೆ, ಪರಿಸರ ಸಂರಕ್ಷಣೆ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಂಗಡಣೆ ಬಗ್ಗೆ ಜಾಗೃತಿ ಹಾಗೂ 41 ಗ್ರಾಮ ಪಂಚಾಯಿತಇ ಗಳಲ್ಲಿ ತ್ಯಾಜ್ಯ ನಿರ್ವಹಣೆಯ ಅನುಷ್ಟಾನಗೊಳಿಸಲು ಚಾಲನೆ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಶುಚಿತ್ವ, ಕೈ ತೊಳೆಯುವ ಮಹತ್ವ, ಕಿಶೋರಿಯರಿಗೆ ಆರೋಗ್ಯ ಮಾಹಿತಿ ಹಾಗೂ ತ್ಯಾಜ್ಯದಿಂದ ವಿವಿಧ ಮಾದರಿಗಳನ್ನು ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿ ಗ್ರಾ.ಪಂ. ಆವರಣದಲ್ಲಿ ಮತ್ತು ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಗೋಡೆ ಬರಹ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next