ಹಸಿವು ಪ್ರತಿಯೊಂದು ಜೀವಿಯ ಅನಿವಾರ್ಯದ ಸವಾಲು. ಹಸಿದ ಹೊಟ್ಟೆಯನ್ನು ತಣಿಸಿಕೊಳ್ಳಲು ಒಂದಲ್ಲ ಒಂದು ಪ್ರಯತ್ನ ಸದಾ ಇರಬೇಕಾಗುತ್ತದೆ. ಮನುಷ್ಯನು ಇದಕ್ಕೆ ಹೊರತೇನಲ್ಲ. ತನ್ನ ಪ್ರತೀ ದುಡಿಮೆ ಬದುಕೆಂಬ ಬಂಡಿಯ ಹಸಿವು ಜಯಿಸುವುದಕ್ಕಾಗಿ ಎಂಬುದು ಕಟು ಸತ್ಯ. ಹುಟ್ಟಿದ ಮಗುವಿನ ಅಳುವೇ ತನ್ನ ಹಸಿವಿನ ಪರಿಹಾರಕ್ಕೆ ಪರಿತಪಿಸುವಿಕೆಯಾದರೆ, ಎದೆಯೆತ್ತರ ಬೆಳೆದ ಮಕ್ಕಳ ಬೆವರಿನ ಶ್ರಮವೇ ಹಸಿವು ಸವಿಯಲಿರುವ ಅಡಿಪಾಯ.
ಮನುಷ್ಯ ತನ್ನ ಹೊಟ್ಟೆಯ ಹುಣ್ಣನ್ನು ತಾನೇ ನೀಗಿಸಿಕೊಳ್ಳಬೇಕು. ಅವರವರ ಹೊಟ್ಟೆಗೆ ಅವರೇ ಸ್ವಂತ ಯತ್ನಗಳಿಂದ ಇಟ್ಟು ಗಿಟ್ಟಿಸಿಕೊಳ್ಳುವಂತವರಾಗಬೇಕು ಎಂಬ ಮಾತಿದ್ದರೂ ವಾಸ್ತವ ಮಾತ್ರ ತುಸುಭಿನ್ನ. ಒಂದು ಪಾಲು ಜನ ತಂದೆ-ತಾಯಿಯ ಆಸ್ತಿ ಅಂತಸ್ತಿನಲ್ಲಿ ಸಿಂಹ ಪಾಲು ಪಡೆದು ಹಸಿವೆಂಬ ವರ್ತಮಾನವನ್ನೇ ನುಂಗಿಬಿಟ್ಟರೆ, ಸಮಾಜದ ಮತ್ತೂಂದು ವರ್ಗ ತನ್ನ ನೆಲೆಗಾಗಿ ಒಂದರ ಮೇಲೊಂದು ಕಸುಬಿನಲ್ಲಿ ಚಡಪಡಿಸುತ್ತಲೇ ಇರುತ್ತಾರೆ. ಕೆಲವೊಂದಿಷ್ಟು ಜನ ದುಡಿಯಲು ವೇದಿಕೆಗಳನ್ನೇ ಕಂಡು ಕೊಳ್ಳದೆ ಮಠ- ಮಂದಿರ, ರಸ್ತೆ- ಬಸ್ ಸ್ಟಾಂಡ್ ಇತ್ಯಾದಿ ಸ್ಥಳಗಳಲ್ಲಿ ಭಿಕ್ಷಾಟನೆಯೇ ಹಸಿವಿಗೆ ಅಸ್ತ್ರವೆಂದು ಉಳಿದುಬಿಡುತ್ತಾರೆ.
ಇದೇ ರೀತಿ ತನ್ನ ಹಸಿವಿನ ಸವಾಲಿಗೆ ಬಿದ್ದ ಅಪರಿಚಿತರೊಬ್ಬರು ನಡು ಮಧ್ಯಾಹ್ನ ಪರಿಚಿತರಾಗಿ ಬಿಟ್ಟರು. ಅವರ ಕೈ ತುಂಬಾ ಮತ್ತು ಹೆಗಲು ತುಂಬೆಲ್ಲ ಊರಿನ ಕಡೆಯ ಓಣಿಯ ನಾಲ್ಕು ಒಕ್ಕಲು ಬೆಚ್ಚಗೆ ಮಲಗುವಷ್ಟು ಬೆಡ್ ಶೀಟ್‌ಗಳಿದ್ದವು. ನೋಡುಗರ ಕಣ್ಣಿಗೆ ಅರೆ.. ಎಷ್ಟು ಆರಾಮ ಅಲ್ವಾ.. ಮುಂಜಾನೆ ಚಳಿಗೆ ಆಗಾಗ ಸುರಿಯುವ ತಣ್ಣಗಿನ ಮಳೆಗೆ ಎಲ್ಲೆಂದರಲ್ಲಿ ಬೆಚ್ಚಗೆ ಲೋಕವ ಮರೆತು ಮಲಗಬಹುದಲ್ಲ ಅನಿಸುತ್ತದೆ. ಆದರೆ ವಾಸ್ತವದ ನಿಜಾಂಶವೇ ಬೇರೆ.
ಮೈತುಂಬ ಒದ್ದುಕೊಂಡು ಮಲಗುವಷ್ಟು ಬೆಡ್‌ಶೀಟ್‌ಗಳು ಕೈ ತುಂಬಾ ಇದ್ದರೂ ಎಲ್ಲಿ ಹೇಗೆ ಮಲಗಿದರೂ ನಿದ್ದೆ ಬರುವುದಿಲ್ಲ. ಕಾರಣ ಪೂರ್ವದಿಂದ ಧಾವಿಸಿ ಬಂದ ಸೂರ್ಯ ನೆತ್ತಿಯ ಬಡಿದು ಪಶ್ಚಿಮದತ್ತ ಸಾಗುತ್ತಿದ್ದರೂ ವ್ಯಾಪಾರದ ವೈವಾಟಿನ್ನೂ ಆರಂಭವಾಗಿರಲಿಲ್ಲ. ಅಮ್ಮ ಬೇಕಾ …ಅಣ್ಣ ನೋಡಿ… ಅಕ್ಕಾ ಕಮ್ಮಿ ಮಾಡ್ತೀನಿ ತಗೊಳ್ಳಿ… ಅಂತ ಹತ್ತಾರು ಮನೆಯ ಎದುರು ಗೋಗರೆದ ಶಬ್ದ ಇನ್ನೂ ಕಿವಿಯಿಂದ ದೂರ ಸರಿದಿರಲಿಲ್ಲ. ಕಿಲೋಮೀಟರ್‌ಗಟ್ಟಲೆ ನಡೆದ ಕಾಲುಗಳಿಗೆ ವಿಶ್ರಾಂತಿಗೆಂದು ಇನ್ನೂ ರಜೆ ಘೋಷಣೆಯಾಗಿರಲಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಮುಖದ ಮೇಲೆ ಸುರಿದ ಶ್ರಮದ ಬೆವರಿನ್ನೂ ಮಾಸಿರಲಿಲ್ಲ.
ಎಕ್ಸಾಮ್ ಎಂದು ಹಾಸ್ಟೆಲ್ ಟೆರೇಸ್‌ನ ಮೇಲೆ ಓದುತ್ತ ಕುಳಿತಿದ್ದ ನನಗೆ ಮಧ್ಯಾಹ್ನವಾಗುತ್ತಿದ್ದಂತೆ ಎಲ್ಲಿಂದಲೋ ಬಂದ ಮಾಂಸದ ಘಮ ಕೂಡಲೇ ಉಜಿರೆಯ ಹೋಟೆಲ್ ತಲುಪುವಂತೆ ಮಾಡಿತು. ಗಡದ್ದಾಗಿ ಊಟ ಮುಗಿಸಿಕೊಂಡು ಬೈಕೇರಿ ಅಮೀನನ ಹಿಂದೆ ಕುಳಿತುಕೊಂಡು ರಸ್ತೆಯಲ್ಲಿ ಬರುವಾಗ ಈ ಅಣ್ಣ ಕಂಡ. ದೂರದ ರಾಜಸ್ಥಾನದಿಂದ ಕರ್ನಾಟಕಕ್ಕೆ ಬಂದಿದ್ದಾರೆ. ಪುತ್ತೂರಿನಲ್ಲಿ ವಾಸ್ತವ್ಯ ಹೂಡಿ ಹೀಗೆ ನಡೆದುಕೊಂಡು ತಿರುಗುತ್ತಾರೆ. ಹೆಗಲ ತುಂಬೆಲ್ಲಾ ಬೆಡ್‌ಶೀಟ್‌ಗಳನ್ನು ಹೊತ್ತುಕೊಂಡು ಊರಿನ ಕಟ್ಟಕಡೆಯ ಬೀದಿಯನ್ನೆಲ್ಲಾ ಸುತ್ತುತ್ತಾ ಜೀವನೋಪಾಯಕ್ಕಾಗಿ ಬೆಡ್‌ಶೀಟ್ ಮಾರಾಟ ಮಾಡುತ್ತಾರೆ.
ಮಾರನೆ ದಿನ ಅನಿವಾರ್ಯವಾಗಿ ಮಂಗಳೂರಿಗೆ ತೆರಳುವಾಗ ಇದೇ ವ್ಯಕ್ತಿ ಬಿ.ಸಿ.ರೋಡ್ ಅಂಗಡಿಗಳ ಎದುರು ಬೆಡ್‌ಶೀಟ್ ಮಾರಾಟಕ್ಕಾಗಿ ಅಲೆದಾಡುತ್ತಿರುವುದು ಕಂಡೆ. ಬದುಕು ಎಷ್ಟು ವಿಪರ್ಯಾಸ ಅಲ್ವಾ, ಹೊಟ್ಟೆಪಾಡಿಗಾಗಿ ಊರೂರು ಸುತ್ತಿ ಬೆಡ್‌ಶೀಟ್ ಮಾರುವ ಇವರನ್ನು ಕಂಡಾಗ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಎಂದೆನಿಸಿತು.
ಅರವಿಂದ
ಎಸ್.ಡಿ.ಎಂ ಕಾಲೇಜು, ಉಜಿರೆ