Advertisement

ಎಲ್ಲರ ಪ್ರೀತಿಯ ರವಿವಾರ

03:31 PM May 12, 2017 | Team Udayavani |

ಮನೆಯಿಂದ ದೂರ ಬಂದು ನೆಲೆ ನಿಂತು ಹಾಸ್ಟೆಲ್‌ನಲ್ಲಿ ಹೊಸದಾಗಿ ನಮ್ಮನ್ನು ನಾವು ರೂಪಿಸಿಕೊಂಡಿರುತ್ತೇವೆ. ಮನೆಯಲ್ಲಿರುವ ಯಾವುದೇ ಕಟ್ಟುಪಾಡುಗಳಿಲ್ಲ. ನಮ್ಮದೇ ಸಾಮ್ರಾಜ್ಯ, ನಾವು ಆಡಿದ್ದೇ ಅಟ. ನಮ್ಮನ್ನು ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮದೇ.

Advertisement

ಪುಟ್ಟ ಮಕ್ಕಳಿಂದ ಹಿಡಿದು  corporate ಪ್ರಪಂಚದ ಇಂಜಿನಿಯರ್‌ಗಳ ತನಕ ಪ್ರತಿಯೊಬ್ಬರೂ ಭಾನುವಾರ ಯಾವಾಗ ಬರುತ್ತೋ ಅಂತ ಹಂಬಲಿಸುತ್ತ ಇರುತ್ತಾರೆ. ಭಾನುವಾರ ಅಂದ್ರೆ ಅದು ನಮ್ಮ ದಿನ, ವಾರವಿಡೀ ಬಿಸಿಲಿನಲ್ಲಿ ದಣಿದು ಬಂದು ಬೀಳುವ ನದಿಯ ತಂಪಿನ ತೀರದ ಹಾಗೆ. ಯಾರ ಕಾಟವೂ ಇಲ್ಲದೆ ನಮ್ಮೊಂದಿಗೆ ನಾವು ಸಂಭಾಷಣೆಗಿಳಿವ ಏಕಾಂತದ ದಿವ್ಯತೆ. ಭಾನುವಾರವೇ ಹಾಗೆ ಒಂದು ನವೀಕರಣದ ಅನುಭವ, ಪುಟ್ಟ ಪುಟ್ಟ ಬಿಡುವು ಮತ್ತು ಸೋಮಾರಿತನ. ಬೇಸಿಗೆಯ ಬೆಳ್ಳಂಬೆಳಿಗ್ಗೆ ಮೋಡ ಕವಿದಾಗ ಬಂದುಬಿಡುತ್ತಲ್ಲ ಆ ತರಹದ ಸೋಮಾರಿತನ.

ಹಾಸ್ಟೆಲ್‌ ಅಂತೂ ಅನುಭವಗಳ ಆಗರ. ಶುದ್ಧ ಸಂಪ್ರದಾಯಸ್ಥ ಮನೆತನದ ಹುಡುಗನಿಗೂ ಕದ್ದು ಮುಚ್ಚಿ ಚಿಕನ್‌ ತಿನ್ನುವ ಖುಷಿ. ತೀರಾ ಶಿಸ್ತುಬದ್ಧ ಮನೆತನದಿಂದ ಬಂದ ಹುಡುಗಿಯರೂ ಸ್ನಾನ ಮಾತ್ರ ರಾತ್ರಿ ಹತ್ತು ಗಂಟೆಗೆ ಶುರು ಮಾಡ್ತಾರೆ. ಹಾಸ್ಟೆಲ್‌-ಇದು ಎರಡನೆಯ ಮನೆ ಇದ್ದ ಹಾಗೆ. ಹೊಸ ಹೊಸ ಮುಖಗಳನ್ನು ಪರಿಚಯ ಮಾಡಿಸುತ್ತದೆ. ಗೆಳೆತನ, ಜಗಳ, ಅನುಭವ, ಒಟ್ಟಿಗೆ ಕೂತು ತಿನ್ನುವ ಬಾಂಧವ್ಯ ಮತ್ತು ಕೊನೆಗೆ ಸಾವಿರ ನೆನಪುಗಳನ್ನ ಕಟ್ಟಿಕೊಡುವ ಗೂಡು.

ಮನೆಯಿಂದ ದೂರ ಬಂದು ನೆಲೆ ನಿಂತು ಹಾಸ್ಟೆಲ್‌ನಲ್ಲಿ ಹೊಸದಾಗಿ ನಮ್ಮನ್ನು ನಾವು ರೂಪಿಸಿಕೊಂಡಿರುತ್ತೇವೆ. ಮನೆಯಲ್ಲಿರುವ ಯಾವುದೇ ಕಟ್ಟುಪಾಡುಗಳಿಲ್ಲ. ನಮ್ಮದೇ ಸಾಮ್ರಾಜ್ಯ, ನಾವು ಆಡಿದ್ದೇ ಆಟ. ನಮ್ಮನ್ನು ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮದೇ. ಪ್ರತಿದಿನ ಕಾಲೇಜು, ಬಂಕ್‌ಗಳು, ಎಸೈನ್‌ಮೆಂಟ್‌ಗಳು, ಫೀಲ್ಡ್‌ ವಿಸಿಟ್‌ಗಳು ಈ ಎಲ್ಲ ಸಂಗತಿಗಳಿಂದ ಸುಸ್ತಾಗಿ ಯಾವಾಗ ಭಾನುವಾರ ಬರುತ್ತೋ ಅಂತ ಕಾಯ್ತಾ ಇರಿ¤àವಿ.

ಶನಿವಾರ ರಾತ್ರಿ ಒಂದು ಒಳ್ಳೇ ಫಿಲ್ಮ್ ನೋಡಿ, “ನಂಗ್‌ ಜಾಗ ಬಿಡಿ’ ಅಂತ ಗಲಾಟೆ ಮಾಡಿ, ಹನ್ನೊಂದು ಗಂಟೆ ರಾತ್ರಿಯಲ್ಲಿ ಹಸಿವಾಗಿ “ತಿಂಡಿ ಕೊಡ್ರೋ’ ಅಂತ ಬಾಗಿಲು ಬಡೀತಿವಿ. ಇನ್ನು ಬೆಳಗ್ಗೆ ಏಳುವುದೇ ಒಂಬತ್ತು ಗಂಟೆಗೆ, ಎದ್ದು ವಾರ್ಡನ್‌ ಬಳಿಯಲ್ಲಿ  ಮಂಗಳಾರತಿ ಮುಗಿಸಿಕೊಂಡು ತಿಂಡಿ ಮುಗಿಸಿ ಬಂದ್ರೆ ವಾರವಿಡೀ ಬಕೆಟ್‌ನಲ್ಲಿರೋ ಬಟ್ಟೆಗಳು ಕಾಯ್ತಾ ಇರುತ್ತವೆ, ಇವತ್ತಾದರೂ ಒಗಿತಿಯೇನಮ್ಮಾ ಅಂತ. ಅದನ್ನ ಹಾಗೇ ಬಿಟ್ಟು ಒಂದು ಒಳ್ಳೆ ಭಾವಗೀತೆ ಹಾಕ್ಕೊಂಡು ಎಣ್ಣೆನೇ ಮುಟ್ಟಿಸದೇ ಇರೋ ಕೂದಲಿಗೆ ತಪ ತಪ ಎಣ್ಣೆ ಬಡಿಕೊಂಡು, ಹೊರಗಡೆ ಯಾರಾದರೂ ನೋಡಿದ್ರೆ ಇವಳೇನಾ ಕಾಲೇಜಿಗೆ ಬರೋಳು ಅನ್ನಿಸುತ್ತಿರಬೇಕು. ಹಾಗೋ ಹೀಗೋ ಬಟ್ಟೆ ಒಗೆಯೋದು ಮುಗಿಸಿ ಒಂದು ಊಟ ಸಿಕ್ಕರೆ ಸಾಕಪ್ಪ ಅಂತ ಗಬಗಬ ತಿಂದು ಹಾಯಾಗಿ ಒಂದು ನಿದ್ದೆ ಮುಗಿಸಿದ್ರೆ ಸಂಜೆ ಐದಕ್ಕೆ ಎಚ್ಚರ. ತುಂಬು ನಿದ್ರೆ, ಹುಚ್ಚು ಕನಸುಗಳು ಮಧ್ಯಾಹ್ನದ ಪಾಲಿಗೆ. ಇನ್ನು ನಾಳೆ ಸೋಮವಾರ ಬಂದೇ ಬಿಟ್ಟಿತು ಅನ್ನೋ ಬೇಸರದಲ್ಲೇ ಅಳಿದುಳಿದ ಕೆಲಸಗಳನ್ನು ಮುಗಿಸೋದಕ್ಕೆ ಕಷ್ಟದಲ್ಲೇ ಅಣಿಯಾಗ್ತಿàವಿ.

Advertisement

ನನ್ನ ಹಲವು ಭಾನುವಾರದ ಕತೆಗಳು ಇವೆ. ಇನ್ನು ಕೆಲವು ನನಗೆ ತುಂಬ ಇಷ್ಟದ ಭಾನುವಾರಗಳು. ನನ್ನ ಪ್ರಪಂಚದಲ್ಲಿ ನಾನೊಬ್ಬಳೇ ಬೆಳಗ್ಗೆ ಕೆಮರಾ ಹಿಡಿದುಕೊಂಡು ಊರು ಸುತ್ತೋದು, ಅಪರಿಚಿತರನ್ನು ಅದರಲ್ಲಿ ಸೆರೆಹಿಡಿದು ಹೊಸ ನಗೆಯನ್ನು ಹುಡುಕೋದು ಅಥವಾ ಅನಂತಮೂರ್ತಿಯೋ, ಕಾರಂತರದೋ ಕಾದಂಬರಿಗಳಲ್ಲಿ ಕಥೆಯಾಗಿಬಿಡೋದು… ಹೊರಗಿನ ಪ್ರಪಂಚದ ಅರಿವೇ ಇಲ್ಲದ ಹಾಗೆ, ದಿನವಿಡೀ ಗಡಿಯಾರದ ಪರಿವೇ ಇಲ್ಲದೆ ನನಗೆ ಬೇಕಾದ ರೀತಿಯಲ್ಲಿ ಇದ್ದುಬಿಡೋದು!

ಪ್ರತಿಯೊಬ್ಬರಿಗೂ ತಮ್ಮ ಇಷ್ಟದ ಕೆಲಸಗಳನ್ನ ಮಾಡಬೇಕು ಅಂತ ಆಸೆಯಿರುತ್ತದೆ. ಆದರೆ, ಕೆಲಸದ ಒತ್ತಡವೋ, ಬಿಡುವಿಲ್ಲದೆಯೋ ಅಥವಾ ಸಮಯದ ಅಭಾವವೋ ತಮ್ಮ ಇಷ್ಟಗಳನ್ನೇ ಮರೆತು ವರ್ತಮಾನದ ಕೈಗೇ ಸಿಗದೆ ಓಡುತ್ತಿರುತ್ತಾರೆ. ನಿಮ್ಮ ಜೊತೆ ಸಂಭಾಷಣೆ ಮಾಡ್ಕೊಳ್ಳುವುದಕ್ಕೆ, ನಿಮಗೆ ಬೇಕಾದ ಹಾಗೆ, ನಿಮ್ಮ ಮನಸಿಗೆ ಬಂದ ಹಾಗೆ ಇರೋದಕ್ಕೆ, ನಿಮಗೆ ಅಂತ ಸಮಯ ಎತ್ತಿಟ್ಟುಕೊಳ್ಳಿ. ಮರೆತು ಹೋದ ಹಾಡು ಕೇಳ್ಳೋದಕ್ಕೆ, ಕಾಡಿದ ಕಥೆ ಓದೋದಕ್ಕೆ, ಯಾವುದೋ ಚೆಂದದ ಸಿನೆಮಾ ನೋಡೋದಕ್ಕೆ, ನಿಮ್ಮವರ ಜೊತೆ ಮನಸ್ಸು ಬಿಚ್ಚಿ ಮಾತಾಡಕ್ಕೆ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲೋ ಕಳೆದು ಹೋದ ನಿಮ್ಮನ್ನ ಕರೊRಂಡು ಬಂದು ನಿಮ್ಮನ್ನ ನೀವು ಚೆಂದಮಾಡಿ ಮಾತಾಡಿಕ್ಕೆ… ನಮ್ಮೊಂದಿಗೆ ನಾವು ಎಂಜಾಯ್‌ ಮಾಡಕ್ಕೆ ಭಾನುವಾರಕ್ಕಿಂತ ಬೇರೆ ದಿನ ಬೇಕಾಗಿಲ್ಲ ಅಲ್ವಾ?  
                                                
ಲಾವಣ್ಯಾ ಎನ್‌. ಕೆ.,
ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next