Advertisement

ಪ್ರತಿಯೊಬ್ಬರಲ್ಲಿನ ಮಗುವಿನ ಮನಸ್ಸು

06:00 AM Jul 27, 2018 | |

“ರಾಮಾ ರಾಮಾ ರೇ’ ಚಿತ್ರವನ್ನು ನಿರ್ದೇಶಿಸಿದ್ದ ಸತ್ಯಪ್ರಕಾಶ್‌ ಸದ್ದಿಲ್ಲದೆ ಈಗ “ಒಂದಲ್ಲಾ ಎರಡಲ್ಲಾ’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಚಿತ್ರ ಶುರು ಮಾಡಿದ ಮತ್ತು ಮುಗಿಸಿದ ವಿಷಯವನ್ನು ಆಡಿಯೋ ಬಿಡುಗಡೆ ಮಾಡುವ ಮೂಲಕ ಇತ್ತೀಚೆಗೆ ಹೇಳಿಕೊಂಡರು ಸತ್ಯ.

Advertisement

ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದಿದ್ದು ಕಲಾವಿದರ ಸಂಘದ ಕಟ್ಟಡದಲ್ಲಿ.  ವಾಸುಕಿ ವೈಭವ್‌ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಶಾಸಕ ನರಸಿಂಹ ನಾಯಕ್‌ ಬಂದಿದ್ದರು. ಜೊತೆಗೆ ನಿರ್ಮಾಪಕರಾದ ಕೆ. ಮಂಜು, ಯೋಗಿ ದ್ವಾರಕೀಶ್‌, ಕರಿಸುಬ್ಬು, ನಟ ಜೆಕೆ ಸೇರಿದಂತೆ ಹಲವರು ಇದ್ದರು. ಇನ್ನು ಸತ್ಯ ತಮ್ಮ ಇಡೀ ತಂಡವನ್ನು ವೇದಿಕೆ ಮೇಲೆ ಕರೆದು ಪರಿಚಯಿಸಿದರು. ಇವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾದವು.

ಈ ಚಿತ್ರವು ಸತ್ಯ ಅವರನ್ನು ಬಾಲ್ಯಕ್ಕೆ ಕರೆದುಕೊಂಡು ಹೋಯಿತಂತೆ. “ಪ್ರತಿಯೊಬ್ಬರು ಸಹ ಅದೆಷ್ಟೇ ದೊಡ್ಡವರಾಗಿರಲಿ, ಅವರಲ್ಲಿ ಮಗುವಿನ ಮನಸ್ಸು ಇದ್ದೇ ಇರುತ್ತದೆ. ಈ ಮಗುವಿನ ಮನಸ್ಸಿನ ಕುರಿತಾಗಿ ಈ ಚಿತ್ರ ಮಾಡಿದ್ದೇನೆ. ಈ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿರುವ ಅನೇಕ ರಂಗಭೂಮಿಯ ಪ್ರತಿಭೆಗಳನ್ನು ಒಟ್ಟುಗೂಡಿಸಿ ಈ ಚಿತ್ರ ಮಾಡಿದ್ದೇನೆ. ಈ ಚಿತ್ರಕ್ಕೆ ಒಬ್ಬ ಹುಡುಗನ ಅವಶ್ಯಕತೆ ಇತ್ತು. ರಾಜ್ಯಾದ್ಯಂತ 1500ಕ್ಕೂ ಹೆಚ್ಚು ಮಕ್ಕಳ ಆಡಿಷನ್‌ ಮಾಡಿದ ನಂತರ ಸಮೀರ ಎಂಬ ಪಾಂಡವಪುರದ ಮೂರನೇ ಕ್ಲಾಸಿನ ವಿದ್ಯಾರ್ಥಿಯನ್ನು ಆಯ್ಕೆ ಮಾಡಿಕೊಂಡೆ. ಅವನಲ್ಲದೆ ಇನ್ನೂ ಹಲವು ಪ್ರತಿಭಾವಂತರು ಚಿತ್ರದಲ್ಲಿ ನಟಿಸಿದ್ದಾರೆ. ಅವರೆಲ್ಲರನ್ನೂ ಸೇರಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ನಿರ್ಮಾಪಕ ಉಮಾಪತಿ. “ಹೆಬ್ಬುಲಿ’ಯಂತಹ ಬಿಗ್‌ ಬಜೆಟ್‌ ಚಿತ್ರವನ್ನು ನಿರ್ಮಿಸಿದ್ದ ಅವರು, ಈ ಚಿತ್ರ ಮಾಡುವುದಕ್ಕೆ ಆಫ‌ರ್‌ ಕೊಟ್ಟರು. ಅವರು ನನಗೆ ಚಿತ್ರ ಮಾಡುವುದಕ್ಕೆ ಹೇಳಿದಾಗ, ನನ್ನ ಬಳಿ ಕಥೆ ಇರಲಿಲ್ಲ. ಒಂದೊಳ್ಳೆಯ ಕಥೆ ಮಾಡಿಕೊಂಡು ಬರುವುದಾಗಿ ಹೇಳಿದೆ. ಹಲವು ತಿಂಗಳುಗಳ ನಂತರ ಒಂದು ಕಥೆ ಮಾಡಿಕೊಂಡು ಹೋಗಿ, ಉಮಾಪತಿ ಅವರಿಗೆ ಹೇಳಿದೆ. ಅವರು ಇಷ್ಟಪಟ್ಟು ಒಪ್ಪಿದ್ದರಿಂದ ಈ “ಒಂದಲ್ಲಾ ಎರಡಲ್ಲಾ’ ಸಾಧ್ಯವಾಯಿತು’ ಎಂದರು ಸತ್ಯಪ್ರಕಾಶ್‌.

ಈ ಚಿತ್ರಕ್ಕೆ ತಾವು ಪೇಪರ್‌ ಮೇಲಷ್ಟೇ ನಿರ್ಮಾಪಕ ಎನ್ನುತ್ತಾರೆ ಉಮಾಪತಿ. “ನಿಜ ಹೇಳಬೇಕೆಂದರೆ, ನಾನು ಒಂದು ದಿನ ಸಹ ಸೆಟ್‌ಗೆ ಹೋಗಿಲ್ಲ. ಏನಾಗುತ್ತಿದೆ ಎಂದು ನೋಡಿಲ್ಲ. ಎಲ್ಲದರ ಜವಾಬ್ದಾರಿಯನ್ನೂ ಸತ್ಯ ಅವರೇ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಈ ಚಿತ್ರವನ್ನು ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶವಿದೆ. ನಾನು “ಹೆಬ್ಬುಲಿ’ ಮಾಡುವಾಗ 200 ಜನ, 20 ಕ್ಯಾರಾವಾನ್‌ಗಳೆಲ್ಲಾ ಇರುತ್ತಿದ್ದವು. ಆದರೆ, ಈ ಚಿತ್ರಕ್ಕೆ ಅದ್ಯಾವುದೂ ಇಲ್ಲದೆ ಮಂಗಳೂರಿನಲ್ಲಿ ಸದ್ದಿಲ್ಲದೆ ಚಿತ್ರೀಕರಣ ಮಾಡಿಕೊಂಡು ಬಂದರು ಸತ್ಯ ಮತ್ತು ಅವರ ತಂಡ. ಈ ಚಿತ್ರದ ಸಂಪೂರ್ಣ ಕ್ರೆಡಿಟ್‌ ಅವರಿಗೆ ಸಲ್ಲಬೇಕು’ ಎಂದರು ಉಮಾಪತಿ.

ಈ ಸಂದರ್ಭದಲ್ಲಿ ಚಿತ್ರದ ಸಂಗೀತ ನಿರ್ದೇಶಕ ವಾಸುಕಿ ವೈಭವ್‌, ಹಿರಿಯ ಸಂಕಲನಕಾರ ಬಿ.ಎಸ್‌. ಕೆಂಪರಾಜು, ಛಾಯಾಗ್ರಾಹಕ ಲವಿತ್‌, ನಿರ್ಮಾಪಕರಾದ ಸ್ಮಿತಾ ಉಮಾಪತಿ, ಕಲಾವಿದರಾದ ಸಾಯಿಕೃಷ್ಣ ಕುಡ್ಲ, ಎಂ.ಕೆ. ಮಠ, ಪ್ರಭುದೇವ ಹೊಸದುರ್ಗ, ರಂಜಾನ್‌ ಸಾಬ್‌ ಉಳ್ಳಾಗಡ್ಡಿ, ಜಿ.ಎಸ್‌. ರಂಗನಾಥ್‌ ಮುಂತಾದವರು ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next