Advertisement

ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ಹೋರಾಟಕ್ಕೆ ಬೆಂಬಲ‌ ಸೂಚಿಸಿ: ಮಧುಬಂಗಾರಪ್ಪ

01:36 PM Mar 03, 2021 | Team Udayavani |

ಶಿವಮೊಗ್ಗ: ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ಹೋರಾಟಕ್ಕೆ ಬೆಂಬಲ‌ ಸೂಚಿಸಬೇಕು. ಕೇಂದ್ರ‌ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೊಧಿ ಕಾನೂನುಗಳನ್ನು ಚರ್ಚೆಯೇ ಇಲ್ಲದೆ ಜಾರಿಗೆ ತಂದಿದ್ದಾರೆ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸೊರಬದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸರ್ಕಾರಗಳಿಗೆ ಬುದ್ದಿ ಕಲಿಸಬೇಕು ಎಂದರೆ ಈ ರೀತಿಯ ಹೋರಾಟಗಳು ನಡೆಯಬೇಕು. ಶಿವಮೊಗ್ಗ ಹೋರಾಟದ ಭೂಮಿ, ಕರ್ನಾಟಕದಲ್ಲಿ ಇಲ್ಲಿಂದಲೇ ಹೋರಾಟ ಆರಂಭಗೊಂಡಿರುವುದು ಸ್ವಾಗತಾರ್ಹ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ‌ ಎಚ್.ಆರ್ ಬಸವರಾಜಪ್ಪ ಮಾತನಾಡಿ,  ದೆಹಲಿಯಲ್ಲಿ ನೂರು ದಿನದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ‌ಮೋದಿ ತನಗೇನು ತಿಳಿದೇ ಇಲ್ಲ ಎನ್ನುವಂತಿದ್ದಾರೆ. ಪ್ರಧಾನಿ ನಡವಳಿಕೆಯನ್ನು ನೋಡಿದರೆ ಪ್ರಧಾನಿ ರೈತ ವಿರೋಧಿ ಎಂಬುದು ತಿಳಿಯುತ್ತದೆ.

ಇದನ್ನೂ ಓದಿ: ಅಮೇಜಾನ್ ತನ್ನ ಲೋಗೋ ಬದಲಾಯಿಸಿದ್ದು ಇದೇ ಕಾರಣಕ್ಕಾ..?

Advertisement

ನರೇಂದ್ರ‌ ಮೋದಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ‌ ಮಾಡುತ್ತಿದ್ದಾರೆ. ಬಂಡವಾಳಶಾಹಿಗಳು ಹಾಗೂ ಶ್ರೀಮಂತರಿಗಾಗಿ ಸರ್ಕಾರವನ್ನು ಒತ್ತೆ ಇಟ್ಟು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಬಿಜೆಪಿ ಆಡಳಿತ ನಡೆಸುತ್ತದೆಯೋ ಅಥವಾ ಕಾರ್ಪೊರೇಟ್ ಕಂಪನಿಗಳು ದೇಶದಲ್ಲಿ ಆಡಳಿತ ನಡೆಸುತ್ತಿದೆಯೋ ಎಂಬ ಅನುಮಾನ ಮೂಡಿದೆ. ರೈತರೇ ಕಾಯ್ದೆ ಬೇಡ ಎಂದರೆ ವಾಪಸ್ ಪಡೆಯಬೇಕು. ಆದರೆ ಸರ್ಕಾರ ಮೊಂಡುತನ ಮಾಡುತ್ತಿದೆ ಎಂದರೆ ಕಾರ್ಪೊರೇಟ್ ಕಂಪನಿಗಳ ಗುಲಾಮವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಭಾರತದ ಇತಿಹಾಸದಲ್ಲಿ ಚರ್ಚೆಯೇ ಇಲ್ಲದೆ ಕಾಯ್ದೆ ಪಾಸ್ ಮಾಡಿದ ಉದಾಹರಣೆಯೇ ಇರಲಿಲ್ಲ. ಆದರೆ ಇದೀಗ ಎಪಿಎಂಸಿ ಕಾಯ್ದೆಗೆ ಬಿಜೆಪಿ ಸರ್ಕಾರ ಚರ್ಚೆಯೇ ಇಲ್ಲದೆ ಪಾಸ್ ಮಾಡಿದ್ದು ದುರಂತ. ಎಪಿಎಂಸಿ‌ ಕಾಯ್ದೆ ತಿದ್ದುಪಡಿ ಹಿಂಪಡೆಯುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಕಾಯ್ದೆ ಹಿಂಪಡೆದು ಕುರ್ಚಿ ಉಳಿಸಿಕೊಳ್ಳಿ, ಕಾಯ್ದೆ ಜಾರಿ ಮಾಡಿ ಕುರ್ಚಿ ಕಳೆದುಕೊಳ್ಳಿ ಎಂದು ತಿಳಿಸಿದರು.

ಇದನ್ನೂ ಓದಿ: ತೆರಿಗೆ ವಂಚನೆ ಆರೋಪ; ನಟಿ ತಾಪ್ಸಿ, ಅನುರಾಗ್ ಕಶ್ಯಪ್ ನಿವಾಸದ ಮೇಲೆ ಐಟಿ ದಾಳಿ

ರೈತ ಮುಖಂಡ ಕೆ.ಟಿ. ಗಂಗಾಧರ್‌ ಮಾತನಾಡಿ,  ಭೂ ಸುಧಾರಣಾ ‌ಕಾಯ್ದೆಗೆ ತಿದ್ದುಪಡಿ ತಂದು ಭೂ ಸುಧಾರಣಾ ‌ಕಾಯ್ದೆಯನ್ನೇ ತಿರುಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಕಾಯ್ದೆಗೆ ತಿದ್ದುಪಡಿ ತರುವ ಮೂಲಕ‌ ಬಂಡವಳಶಾಹಿಗಳಿಗೆ ಅವಕಾಶ ಮಾಡಿಕೊಡುವ ಕೆಲಸ ಸರ್ಕಾರಗಳು ಮಾಡಿಕೊಡುತ್ತಿವೆ.

ಉದ್ಯಮಗಳಲ್ಲೇ ಅತಿದೊಡ್ಡ ಉದ್ಯಮ ಕೃಷಿ. ಕೃಷಿ ಇದುವರೆಗೆ ಹಳ್ಳಿಗಳ ರೈತರ ಕೈಯಲ್ಲಿ ಇತ್ತು. ಇದೀಗ ಕೃಷಿಯನ್ನೂ ಬಂಡವಾಳಶಾಹಿಗಳ ಕೈಗೆ ಕೊಡಲು ಹೊರಟಿದ್ದಾರೆ. ಬಿಜೆಪಿ ಸರ್ಕಾರಗಳು ಭಾರತದ ಆಹಾರ ಸಾರ್ವಭೌಮತೆಯನ್ನು ಬಂಡವಾಳಶಾಹಿಗಳ ಕೈಗೆ ಕೊಡಲು ಹೊರಟಿದ್ದಾರೆ.

ಕೋವಿಡ್ ನಿಂದ  ಜನ ಪ್ರಾಣಭಯದಿಂದ ಇರುವಾಗ ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ತಂದಿದ್ದು ತಪ್ಪು. ಪ್ರಧಾನಿ ಯಾವುದೋ ಸತ್ಯವಾದ ವಿಚಾರವನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಈ ಕಾಯ್ದೆ ರೈತಪರವಾಗಿದ್ದರೆ ಪಾರ್ಲಿಮೆಂಟಲ್ಲಿ‌ ಮಂಡಿಸಿ ಅನುಮೋದನೆ ಪಡೆಯಬೇಕಿತ್ತು.

ಮಾರ್ಚ್ 20 ರಂದು ಶಿವಮೊಗ್ಗದಲ್ಲಿ  ರೈತ ಸಮಾವೇಶ ನಡೆಸಲಾಗುತ್ತದೆ. ಲಕ್ಷ‌ಲಕ್ಷ ಸಂಖ್ಯೆಯಲ್ಲಿ ರೈತರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಮಾವೇಶದಲ್ಲಿ ರಾಕೇಶ್ ಟಿಕಾಯತ್, ಯದ್ವೀರ್ ಸಿಂಗ್, ಯುಗೇಂದ್ರ ಯಾದವ್ ಭಾಗುಯಾಗಲಿದ್ದಾರೆ. ಪ್ರಧಾನಿ ಬಡವರ ಅನ್ನದ ಚೀಲಕ್ಕೆ ಕೈ ಹಾಕಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಸಿ.ಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ

Advertisement

Udayavani is now on Telegram. Click here to join our channel and stay updated with the latest news.

Next