Advertisement
ಅಬ್ದುಲ್ ರಶೀದ್, ಮೂಲತಃ ಬೇಕರಿ ತಿಂಡಿಗಳ ತಯಾರಕರು. 35 ವರ್ಷಗಳಿಂದ ಮಾಲೂರಿನ ಬಹುತೇಕ ಅಂಗಡಿ, ಬೇಕರಿ, ಹೋಟೆಲ್‌ಗಳಲ್ಲಿ ಇವರು ತಯಾರಿಸಿದ ಸಿಹಿ ತಿಂಡಿ, ಕರಿದ ಐಟಂಗಳನ್ನು ಮಾರಾಟ ಮಾಡಲಾಗುತ್ತದೆ. ಮನೆಯಲ್ಲೇ ಬ್ರೆಡ್, ಬಿಸ್ಕೆಟ್, ವರ್ಕಿ, ದಿಲ್‌ಪಸಂದ್ ಹೀಗೆ ತರಹೇವಾರಿ ಸಿಹಿ ತಿಂಡಿಗಳನ್ನು ತಯಾರಿಸಿ ಮಾಲೂರು ಪಟ್ಟಣದ ಬೇಕರಿ, ಕಾಂಡಿಮೆಂಟ್ಸ್, ಟೀ ಸ್ಟಾಲ್ ಸೇರಿ ಸುತ್ತಮುತ್ತಲ ಹಳ್ಳಿಯ ಅಂಗಡಿಗಳಿಗೆ ಹೋಲ್‌ಸೆಲ್ ದರದಲ್ಲಿ ಮಾರಾಟ ಮಾಡ್ತಾರೆ.
ಮೊದಲು ಬೇಕರಿ ತಿಂಡಿ ಗಷ್ಟೇ ಸೀಮಿತವಾಗಿದ್ದ ರಶೀದ್‌ಗೆ, ಪಟ್ಟಣದಲ್ಲಿ ಉತ್ತಮ ಸಮೋಸ ತಯಾರಿಕರು ಯಾರೂ ಇಲ್ಲ ಎಂಬುದು ಗಮನಕ್ಕೆ ಬಂತು. 12 ವರ್ಷಗಳ ಹಿಂದೆ ಹಲವರ ಬೇಡಿಕೆ ಮೇರೆಗೆ ರಂಜಾನ್ ಪ್ರಾರಂಭಕ್ಕೂ ಒಂದು ತಿಂಗಳ ಮೊದಲು ಸಮೋಸ ತಯಾರಿಸಿ ಇತರೆ ಹೋಟೆಲ್, ಬೀದಿಬದಿ ಅಂಗಡಿಗಳಿಗೆ ನೀಡುವುದರ ಜೊತೆಗೆ ಮನೆಯ ಮುಂದೆಯೂ ಮಾರಾಟ ಮಾಡಲು ಆರಂಭಿಸಿದರು. ಈಗ ರಂಜಾನ್ ಬಂದರೆ ಸಾಕು; ಬೆಳಗ್ಗಿನಿಂದ ರಾತ್ರಿಯವರೆಗೂ ಸಮೋಸ ತಯಾರಿಸುವುದೇ ಒಂದು ಉದ್ಯೋಗವಾಗಿ ಪರಿಣಮಿಸಿದೆ. ಇಬ್ಬರು ನೌಕರರು ಈಗ ಖಾಯಂ ಆಗಿ ಮನೆಯ ಮುಂದೆಯೇ ಸ್ಟಾಲ್ ತೆರೆದು ಅಲ್ಲೇ ಕರಿದು ಗ್ರಾಹಕರಿಗೆ ಬಿಸಿ ಬಿಸಿಯಾದ ಸಮೋಸ ಮಾಡಿ ಕೊಡುತ್ತಾರೆ. ಇದರ ಜೊತೆಗೆ ಬೇಕರಿ ಸಿಹಿ ತಿಂಡಿಗಳನ್ನೂ ಮಾರಾಟ ಮಾಡ್ತಾರೆ. ನಿತ್ಯ ಸಂಜೆ ಟೀ ಜೊತೆಗೆ ಬಿಸಿ ಬಿಸಿಯಾದ, ಬಗೆ ಬಗೆಯ ಸಮೋಸಗಳು ಗ್ರಾಹಕರ ಜಿಹ್ವಾ ಚಾಪಲ್ಸವನ್ನು ತಣಿಸುತ್ತಿವೆ. ಬೇರೆ ಕಡೆಗಳಲ್ಲಿ ಈರುಳ್ಳಿ, ಮೊಟ್ಟೆ, ಚಿಕನ್ ಹೀಗೆ ವಿವಿಧ ಸ್ವಾದಗಳಲ್ಲಿ ಸಮೋಸ ತಯಾರಿಸಲಾಗುತ್ತದೆ. ಆದರೆ, ರಶೀದ್ ಅವರು ಸಸ್ಯಹಾರಿ ಸಮೋಸಗಳನ್ನು ಮಾತ್ರ ಮಾಡುತ್ತಾರೆ.
Related Articles
Advertisement
ಈ ವರ್ಷದಿಂದ ಸ್ಟಾಲ್ ಆರಂಭ:ಸದ್ಯ ರಂಜಾನ್ ತಿಂಗಳ ಹಿಂದೆ ಮುಂದೆ ಎರಡು ತಿಂಗಳು ಮಾತ್ರ ಮನೆಯ ಮುಂದೆ ಸ್ಟಾಲ್ ತೆರೆದು ಸಮೋಸ ಮಾರಾಟ ಮಾಡುತ್ತೇವೆ ಎನ್ನುವ ಆಸೀಬ್, ಮದುವೆ, ಸಭೆ, ಸಮಾರಂಭಗಳಿಗೂ ಸಮೋಸ ಮಾಡಿಕೊಡುತ್ತೇವೆ. ಮೊದಲಿಂದ ನಮ್ಮಲ್ಲಿ ಬೇಕರಿ ತಿಂಡಿ ಖರೀದಿಸುವ ತಿಂಡಿಪ್ರಿಯರು ವರ್ಷಪೂರ್ತಿ ಸಮೋಸ ಮಾಡುವಂತೆ ಒತ್ತಡ ಹಾಕುತ್ತಿದ್ದು, ಮಾಲೂರಲ್ಲೇ ಒಳ್ಳೆ ಜಾಗ ನೋಡಿ ಸ್ಟಾಲ್ ತೆರೆಯುತ್ತೇವೆ. ಗ್ರಾಹಕರು, ಬೇಕರಿ ತಿಂಡಿ ಜೊತೆ ಸಮೋಸವನ್ನೂ ಮನೆಗೆ ಪಾರ್ಸಲ್ ಕೊಂಡೊಯ್ಯುತ್ತಾರೆ. ಈಗ ಪ್ರತಿದಿನ 2000 ಸಾವಿರ ಸಮೋಸ ಖರ್ಚಾಗುತ್ತಿವೆ ಎನ್ನುತ್ತಾರೆ ಆಸೀಬ್. ಮನೆ ವಿಳಾಸ:
ಬೇಕರಿ ರಶೀದ್, ನಂಜಮ್ಮ ಆಸ್ಪತ್ರೆ ಮುಂಭಾಗದ ರಸ್ತೆ, ಮಾರುತಿ ಬಡಾವಣೆ, ಮಾಲೂರು ಪಟ್ಟಣ. ಮಾರಾಟದ ಸಮಯ:
ರಂಜಾನ್ ತಿಂಗಳಲ್ಲಿ ಮಾತ್ರ, ಮಧ್ಯಾಹ್ನ 2ರಿಂದ ರಾತ್ರಿ 8ಗಂಟೆವರೆಗೆ. ಈ ವರ್ಷದಿಂದ ಪ್ರತಿದಿನ ಮಾರಾಟ ಮಾಡಲು ಚಿಂತನೆ. – ಭೋಗೇಶ ಎಂ.ಆರ್/ಎಂ.ರವಿಕುಮಾರ್