Advertisement

ಮಳೆಗಾಲದಲ್ಲಿ ಸಂಚಾರ ಕಡಿತ ಸಮಸ್ಯೆಗೆ ಸಿಗಲಿದೆ ಮುಕ್ತಿ !

10:04 PM Sep 18, 2019 | Sriram |

ಹೆಬ್ರಿ: ಶಿವಮೊಗ್ಗ -ಉಡುಪಿ ರಾಷ್ಟ್ರೀಯ ಹೆದ್ದಾರಿಯ ಸೀತಾನದಿ ಬಳಿ ಪ್ರತಿವರ್ಷ ನದಿ ನೀರು ಉಕ್ಕಿ ರಸ್ತೆಯ ಮೇಲೆ ಹರಿದು ಸಂಚಾರ ಕಡಿತಗೊಳ್ಳುತ್ತಿತ್ತು. ಆದರೆ ಶೀಘ್ರವೇ ಈ ಸಮಸ್ಯೆಗೆ ಮುಕ್ತಿ ದೊರೆಯಬಹುದೆಂಬ ನಿರೀಕ್ಷೆಯಿದೆ.

Advertisement

ನಾಡಾ³ಲು ಗ್ರಾ.ಪಂ. ವ್ಯಾಪ್ತಿಯ ಸೀತಾನದಿ ಬ್ರಹ್ಮಲಿಂಗೇಶ್ವರ ಗುಡಿಯ ಸಮೀಪದ ರಸ್ತೆಯ ಬದಿಯಲ್ಲಿ ಸೀತಾನದಿ ಹರಿಯುತ್ತಿದ್ದು ಪ್ರತಿ ವರ್ಷ ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುವ ಕಾರಣ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಈ ಬಾರಿಯೂ ಮಳೆಗಾಲದಲ್ಲಿ ಮೂರು ಬಾರಿ ಸಂಪರ್ಕ ಕಡಿತಗೊಂಡು ಸಮಸ್ಯೆಯಾಗಿತ್ತು. ರಸ್ತೆಯಲ್ಲಿ ಹರಿವ ನೀರು ಸಮೀಪದ ಅಡಿಕೆ ತೋಟವನ್ನೂ ಆವರಿಸುವ ಕಾರಣ ಅಪಾರ ಹಾನಿಯಾಗುತ್ತಿದೆ.

ಅಪಾಯ ತಪ್ಪಿದ್ದಲ್ಲ
ಒಂದೆಡೆ ಆಗುಂಬೆ ಘಾಟಿ 7ನೇ ತಿರುವು ಸಂಪೂರ್ಣ ದುರಸ್ತಿಯಾಗಿಲ್ಲ. ಇನ್ನೊಂದೆಡೆ ಸೀತಾನದಿ ರಸ್ತೆಯಲ್ಲಿ ಹರಿಯುವು ದರಿಂದ ರಾತ್ರಿ ಸಮಯದಲ್ಲಿ ವಾಹನ ಸವಾರರು ನೀರಿನ ಆಳ ಅರಿಯದೆ ಸಂಚರಿಸಿದಲ್ಲಿ ಅಪಾಯ ತಪ್ಪಿದ್ದಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

ರೋಗಿಗಳಿಗೆ ಸಮಸ್ಯೆ
ಮಲೆನಾಡು -ಕರಾವಳಿಯ ಸಂಪರ್ಕ ಕೊಂಡಿಯಾದ ಆಗುಂಬೆ ರಸ್ತೆ ಸೀತಾನದಿ ಮಾರ್ಗವಾಗಿ ಉಡುಪಿಗೆ ಸಂಚರಿಸುವುದರಿಂದ ಈ ಮಾರ್ಗದಲ್ಲಿ ಸಂಪರ್ಕ ಕಡಿತವಾದರೆ ಸಮಸ್ಯೆಗಳೇ ಹೆಚ್ಚು. ಅದರಲ್ಲಿಯೂ ಚಿಕಿತ್ಸೆಗಾಗಿ ಶಿವಮೊಗ್ಗ, ಚಿಕ್ಕಮಗಳೂರು ಭಾಗದಿಂದ ಮಣಿಪಾಲಕ್ಕೆ ಬರುವ ರೋಗಿಗಳಿಗೆ ಬಹಳ ಸಮಸ್ಯೆಯಾಗುತ್ತಿದೆ.

ಪರಿಹಾರ ಹೇಗೆ?
ನೀರಿನಲ್ಲಿರುವ ಬೃಹತ್‌ ಬಂಡೆಗಳನ್ನು ತೆರವು ಗೊಳಿಸಿದಾಗ ನೀರು ರಭಸವಾಗಿ ಹರಿದು ಹೋಗಲು ಸಹಾಯಕವಾಗುತ್ತದೆ. ಅದರಂತೆ ನದಿಯ ನೀರಿನ ಮಟ್ಟಕ್ಕೆ ಸರಿಯಾಗಿ ರಸ್ತೆ ಇರುವುದರಿಂದ ರಸ್ತೆಯನ್ನು ಏರಿಸಿದಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಸ್ಥಳೀಯರ ಅನಿಸಿಕೆ.

Advertisement

ಪ್ರಸ್ತಾವನೆ ಸಲ್ಲಿಕೆ
ಈ ಬಗ್ಗೆ ಕಳೆದ ವಾರದಲ್ಲಿ ಸರ್ವೇ ಕಾರ್ಯ ನಡೆಸಿದ್ದು ನದಿಗೆ ತಡೆಗೋಡೆ ಸೇರಿದಂತೆ ನೀರಿನ ಮಟ್ಟಕ್ಕಿಂತ ಎತ್ತರದಲ್ಲಿ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
-ಮಂಜುನಾಥ ನಾಯಕ್‌,
ಸಹಾಯಕ ಕಾರ್ಯಕಾರಿ ಅಭಿಯಂತರರು, 169ಎ ರಾಷ್ಟ್ರೀಯ ಹೆದ್ದಾರಿ ವಿಭಾಗ

ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಇಲಾಖೆ ಗಮನಹರಿಸಲಿ
ಆಗುಂಬೆ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿದಲ್ಲಿ ಸೀತಾನದಿ ನೀರು ಉಕ್ಕಿ ಹರಿಯುವ ಕಾರಣ ರಾಷ್ಟ್ರೀಯ 169ಎ ಸಂಪರ್ಕ ಕಡಿತಗೊಳ್ಳುತ್ತದೆ. ರಸ್ತೆಯನ್ನು ವಿಸ್ತರಣೆ ಮಾಡಿ ನೀರಿನ ಮಟ್ಟಕ್ಕಿಂತ ಸ್ವಲ್ಪ ಏರಿಸಿದಲ್ಲಿ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಬಹುದು. ಈ ಬಗ್ಗೆ ಇಲಾಖೆ ಗಮನಹರಿಸಬೇಕಾಗಿದೆ.
-ನವೀನ್‌ ಕೆ. ಅಡ್ಯಂತಾಯ,
ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next