Advertisement

ಪ್ರತಿವರ್ಷವೂ ಇಲ್ಲಿ ಟ್ಯಾಂಕರ್‌ ನೀರೇ ಗತಿ!

06:39 AM Apr 29, 2019 | Team Udayavani |

ಬೈಂದೂರು: ಇಲ್ಲಿನ ಜನರಿಗೆ ಬೇಸಗೆ ಬಂದರೆ ಸಾಕು ಊರು ಬಿಟ್ಟು ಹೋಗಬೇಕೆನ್ನುವ ಪರಿಸ್ಥಿತಿ ಇದೆ. ಉಪ್ಪು ನೀರಿನ ಪ್ರದೇಶವಾದ್ದರಿಂದ ಮಳೆಗಾದಲ್ಲೂ ಇಲ್ಲಿ ಸಂಕಷ್ಟ ತಪ್ಪಿಲ್ಲ. ಜಿಲ್ಲೆಯ ಅತೀ ದೊಡ್ಡ ಗ್ರಾ.ಪಂ ವ್ಯಾಪ್ತಿಯಾಗಿರುವ ಶಿರೂರಿನ ಕಳಿಹಿತ್ಲು,ಕರಾವಳಿ,ದೊಂಬೆ, ಬುಕಾರಿ ಕಾಲನಿ, ಹಡವಿನಕೋಣೆ, ಕೆಸರಕೋಡಿ, ಕರಿಕಟ್ಟೆ, ಆರ್ಮಿ, ಮುಂತಾದ ಭಾಗಗಳು ಪ್ರತಿವರ್ಷವೂ ನೀರಿಲ್ಲದೆ ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾಗಿದೆ.

Advertisement

ಈಡೇರದ ಶಾಶ್ವತ ಯೋಜನೆಗಳು
ಶಿರೂರಿನ ಈ ಭಾಗದಲ್ಲಿ ಪ್ರತಿ ಬೇಸಗೆಯಲ್ಲಿ ನೀರಿಗೆ ಕಾಯಬೇಕು. ಶಾಶ್ವತ ಯೋಜನೆಗೆ ಸಂಬಂಧಪಟ್ಟ ಯಾರೂ ಗಮನಕೊಡದ್ದರಿಂದ ಜನರು ಸಂಕಟಪಡುವಂತಾಗದೆ. ಇಲ್ಲಿ 25,000ರಿಂದ 30,000 ಜನಸಂಖ್ಯೆಯಿದೆ. 34 ಬೋರ್‌ವೆಲ್‌ 28 ತೆರೆದ ಬಾವಿಗಳಿದ್ದರೂ ನೀರಿನ ಸಮಸ್ಯೆ ಕಾಡುತ್ತಲೇ ಇದೆ. ಆದರೆ ಇಲ್ಲಿಗೆ ಹೊರಗಡೆಯಿಂದ ನೀರು ಸರಬರಾಜೂ ಆಗುತ್ತಿಲ್ಲ. ಊರನ್ನು ರೈಲ್ವೇ ಮಾರ್ಗ ಬೇರ್ಪಡಿಸಿದಂತೆ ಇರುವುದರಿಂದ ಪೈಪ್‌ಲೈನ್‌ ಹಾಕಲು ಆಗುತ್ತಿಲ್ಲ. 2015ರಲ್ಲಿ ಶಿರೂರಿಗೆ ಆಗಮಿಸಿದ ಅಂದಿನ ಹಾಗೂ ಪಂಚಾಯತ್‌ರಾಜ್‌ ಸಚಿವರು ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಸಿಹಿ ನೀರನ್ನಾಗಿ ಮಾರ್ಪಡಿಸುವ ಯೋಜನೆ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ಶಿರೂರು, ಪಡುವರಿ, ಯಡ್ತರೆ, ಬೈಂದೂರು ಸೇರಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಹತ್ತು ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ.

ಬತ್ತಿದ ನದಿ, ಕೆರೆಗಳು
ಶಿರೂರಿನಲ್ಲಿ ಮೂರು ಕೆರೆಗಳು, ನಾಲ್ಕು ಹೊಳೆ, ತೊರೆಗಳು ಈ ವರ್ಷ ಬಹಳ ಬೇಗ ಬತ್ತಿಹೋಗಿವೆ. ಅಂತರ್ಜಲ ವೃದ್ಧಿಗೆ ಚೆಕ್‌ಡ್ಯಾಂ, ಕೆರೆಗಳ ಹೂಳೆತ್ತುವುದು ಹಾಗೂ ಬಾವಿ ನಿರ್ಮಾಣದ ಬಗ್ಗೆ ಒತ್ತು ಕೊಡಬೇಕಾಗಿದೆ. ಪ್ರತಿವರ್ಷ ಗ್ರಾ.ಪಂ. ಮಾತ್ರವಲ್ಲದೆ ಸ್ಥಳೀಯ ದಾನಿಗಳೂ ಉಚಿತ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡುತ್ತಾರೆ.

ಈ ವರ್ಷ ಪಂಚಾಯತ್‌ ಸಹಕಾರವಿಲ್ಲದೆ ದಾನಿಗಳಿಂದ 2 ಬೋರ್‌ವೆàಲ್‌ ದುರಸ್ತಿ, ಐದಕ್ಕೂ ಅಧಿಕ ಬಾವಿ ದುರಸ್ತಿ ಮಾಡಲಾಗಿದೆ. ಬತ್ತಿಹೋದ ಸರಕಾರಿ ಬಾವಿಗಳ ಹೂಳು ತೆಗೆದು ರಿಂಗ್‌ ಅಳ ವಡಿಸುವ ಕಾರ್ಯ ಎಂ.ಎಂ. ಹೌಸ್‌ ವತಿಯಿಂದ ನಡೆಯುತ್ತಿದೆ.

ವಿಶೇಷ ಮುತುವರ್ಜಿ
ಶಿರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತದೆ. 20 ಟ್ರಿಪ್‌ನಂತೆ ಪ್ರತಿದಿನ 80 ಸಾವಿರ ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಪಂಚಾಯತ್‌ ನೀರಿನ ಸಮಸ್ಯೆ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದೆ. ಜನರಿಗೆ ತೊಂದರೆಯಾಗದಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಶ್ವತ ಯೋಜನೆಗಳ ಬಗ್ಗೆ ಮುಂದಿನ ದಿನದಲ್ಲಿ ಪ್ರಯತ್ನಿಸಲಾಗುವುದು
-ದಿಲ್‌ಶಾದ್‌ ಬೇಗಂ, ಅಧ್ಯಕ್ಷರು ಗ್ರಾ.ಪಂ. ಶಿರೂರು

Advertisement

ಶಾಶ್ವತ ಯೋಜನೆ ಅಗತ್ಯ
ಕುಡಿಯುವ ನೀರು ಪ್ರತಿ ವರ್ಷದ ಸಮಸ್ಯೆ. ಪಂಚಾಯತ್‌ ಸಮರ್ಪಕ ಹಾಗೂ ಶಾಶ್ವತ ಪರಿಹಾರದ ಬಗ್ಗೆ ಚಿಂತಿಸಬೇಕು. ಕಳಿಹಿತ್ಲು, ಮುದ್ರಮಕ್ಕಿ, ಹಡವಿನಕೋಣೆ ಮುಂತಾದ ಕಡೆಗಳಲ್ಲಿ ಉಪ್ಪು ನೀರಿನಿಂದಾವೃತವಾದ ಪ್ರದೇಶಗಳಿಗೆ ಪ್ರಾಧಾನ್ಯ ನೀಡಬೇಕು. ನೀರು ಪೋಲಾಗುವ ಬಗ್ಗೆ ಗಮನಹರಿಸಬೇಕು. ಶಾಶ್ವತ ಯೋಜನೆ ಬಗ್ಗೆ ಕ್ರಿಯಾತ್ಮಕ ಚಿಂತನೆ ಬೇಕು.
-ರಾಘು, ಮುದ್ರಮಕ್ಕಿ

ಜನರ ಬೇಡಿಕೆಗಳು
– ಪ್ರತಿವರ್ಷ ಸಮಸ್ಯೆ ಕಾಡದಂತೆ ಶಾಶ್ವತ ಪರಿಹಾರ ಬೇಕು.
– ಪೈಪ್‌ಲೈನ್‌ ದುರಸ್ತಿ ಮೂಲಕ ಮನೆ ಮನೆಗೆ ನಳ್ಳಿ ಕಲ್ಪಿಸಬೇಕು.
– ಟ್ಯಾಂಕರ್‌ ವ್ಯವಸ್ಥೆ ಸರಿಪಡಿಸಬೇಕು
– ಊರಿನ ತೋಡು, ಕೆರೆ, ಹಳ್ಳಗಳ ಹೂಳೆತ್ತಬೇಕು.
– ಪ್ರತಿ ಮನೆಯಲ್ಲಿ ಇಂಗುಗುಂಡಿ ನಿರ್ಮಿಸಬೇಕು.

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next