Advertisement

ದಿಢೀರ್‌ ನೆರೆಗೆ ತುತ್ತಾಗುತ್ತಿರುವ ರಾಜಧಾನಿ

09:51 AM Nov 26, 2021 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಮಳೆಗಾಲದಲ್ಲಿ ಉತ್ತರದ ಬಯಲುಸೀಮೆಗಳು ಮತ್ತು ಭೂಕುಸಿತ ದಂತಹ ಘಟನೆಗಳಿಂದ ಘಟ್ಟ ಪ್ರದೇಶಗಳು ನೆರೆ ಹಾವಳಿಗೆ ತುತ್ತಾಗುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಆ “ನೆರೆ’ ಬೆಂಗಳೂರಿಗೂ ವ್ಯಾಪಿಸಿದ್ದು, ಕಳೆದ ಒಂದು ದಶಕದಲ್ಲಿ ಬಹುತೇಕ ಎಲ್ಲ ವರ್ಷಗಳಲ್ಲೂ ಬೆಂಗಳೂರು “ದಿಢೀರ್‌ ನೆರೆ’ಗೆ ಗುರಿಯಾಗಿದೆ.

Advertisement

ಹಾಗಿದ್ದರೆ ಇದೇ ಸ್ಥಿತಿ ಮುಂದುವರಿದರೆ, ನಗರ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ಪ್ರತಿ ವರ್ಷ ಕೆರೆಗಳ ಕೋಡಿ ಬಿದ್ದು ಅಥವಾ ತುಂಬಿಹರಿದು ಅಥವಾ ರಾಜಕಾಲುವೆಗಳು ಉಕ್ಕಿಹರಿದು ನಗರದ ಒಂದಿಲ್ಲೊಂದು ಪ್ರದೇಶದಲ್ಲಿ ಆಸ್ತಿಪಾಸ್ತಿ ಹಾನಿಯಾಗುತ್ತಿದ್ದು, ಕೆಲ ಸಲ ಪ್ರಾಣಹಾನಿಗಳೂ ಸಂಭವಿಸಿವೆ

. ಹೀಗೆ ಮಳೆಯಲ್ಲಿ ಕೊಚ್ಚಿಹೋದವರ ಪೈಕಿ ಹಲವರ ಶವಗಳು ಕೂಡ ಸಿಕ್ಕಿಲ್ಲ. ಅದರಲ್ಲೂ ನೆರೆ ಹಾವಳಿಯ ಹಾನಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಬೆಳವಣಿಗೆಗಳು ಆಳುವವರು ಸೇರಿದಂತೆ ಎಲ್ಲರಿಗೂ ಎಚ್ಚರಿಕೆ ಗಂಟೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಮೊದಲಿಗೆ ನಗರದ ಹೊರವಲಯಗಳಲ್ಲಿ ಸೀಮಿತ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತಿತ್ತು. ಕೇಂದ್ರ ಭಾಗಗಳೂ ನೆರೆಗೆ ತುತ್ತಾಗುತ್ತಿವೆ. ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ನಂದಿನಿ ಲೇಔಟ್‌, ರಾಜಾಜಿನಗರ, ಯಶವಂತಪುರ ಮತ್ತಿತರ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜಲದಿಗ್ಬಂಧನಗಳನ್ನು ಕಾಣಬಹುದು.

ನಗರೀಕರಣ ವಿಸ್ತಾರಗೊಂಡಂತೆ, ಕಾಂಕ್ರೀಟೀಕರಣ ಕೂಡ ವ್ಯಾಪಿಸಿದೆ. ಈ ಮಧ್ಯೆ ಜಾಗತಿಕ ಹವಾಮಾನ ವೈಪರೀತ್ಯದಿಂದ ಮಳೆ ಪ್ರಮಾಣ ಅಧಿಕವಾಗಿದೆ. ಇದರ ಫ‌ಲವಾಗಿ ರಸ್ತೆಗಳಲ್ಲಿ ಬೋಟುಗಳು ತೇಲುತ್ತಿವೆ. ವರ್ತುಲ ರಸ್ತೆಗಳಲ್ಲಿ ಜನ ಮೀನು ಹಿಡಿಯುತ್ತಿದ್ದಾರೆ. ದ್ವೀಪಗಳು ಸೃಷ್ಟಿಯಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಮಳೆಯ ಅವಾಂತರದ ಮೇಲೆ ಕಣ್ಣುಹಾಯಿಸಿದರೆ, ಅದರ ಗಂಭೀರತೆ ನಾವು ಕಾಣಬಹುದು.

2014ರಲ್ಲಿ ಅಕ್ಟೋಬರ್‌ ಒಂದೇ ತಿಂಗಳಿನಲ್ಲಿ ಮಳೆಗೆ ಐದು ಬಲಿಯಾಗಿದ್ದವು. ತಮಿಳುನಾಡಿನ ಬಾಲಕಿಯೊಬ್ಬಳು ಚರಂಡಿಯಲ್ಲಿ ಕೊಚ್ಚಿಹೋಗಿದ್ದಳು. ಎರಡು ದಿನಗಳ ನಂತರ ಆಕೆ ಶವವಾಗಿ ಪತ್ತೆಯಾಗಿದ್ದಳು. ಬೆನ್ನಲ್ಲೇ ಜೋಗುಪಾಳ್ಯದ 8ನೇ ಕ್ರಾಸ್‌ನಲ್ಲಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದರು. ಬಸವೇಶ್ವರನಗರ ಮತ್ತು ಮೆಜೆಸ್ಟಿಕ್‌ನಲ್ಲಿ ವಿದ್ಯುತ್‌ ತಗುಲಿ ಇಬ್ಬರು ಮೃತಪಟ್ಟಿ ದ್ದರು. ಆ ವರ್ಷ ರಾಜಕಾಲುವೆ ತುಂಬಿಹರಿದ ಪರಿಣಾಮ ಯಶವಂತಪುರ, ಮಂಗಮ್ಮನಪಾಳ್ಯ, ಮಾನ್ಯತಾ ಟೆಕ್‌ಪಾರ್ಕ್‌ ಸೇರಿದಂತೆ ಹಲವಾರು ಕಡೆ “ದಿಢೀರ್‌ ನೆರೆ’ ಉಂಟಾಗಿತ್ತು.

Advertisement

“ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಕಾಳಜಿ ಇದ್ದರೆ, ನಗರದ ರಾಜಕಾಲುವೆಗಳ ಉದ್ದ ಮತ್ತು ಅಗಲಗಳ ಸಮೀಕ್ಷೆ ನಡೆಸಬೇಕು. ಒತ್ತುವರಿ ತೆರವುಗೊಳಿಸಬೇಕು ಹಾಗೂ ಬಫ‌ರ್‌ಝೋನ್‌ನಲ್ಲಿ ತಲೆಯೆತ್ತಿದ ಕಟ್ಟಡಗಳ ಸಮೀಕ್ಷೆ ನಡೆಸಿ, ತೆರವು ಮಾಡಬೇಕು.” –  ಪ್ರೊ.ಟಿ.ವಿ. ರಾಮಚಂದ್ರ, ವಿಜ್ಞಾನಿ, ಐಐಎಸ್ಸಿ

ನೆರೆ ದಾಖಲಿಸುವ ಗೋಜಿಗೂ ಹೋಗದ ಬಿಬಿಎಂಪಿ!

2015ರಲ್ಲಿ ಕೋನಪ್ಪನ ಅಗ್ರಹಾರ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆರೆಯೊಂದು ಉಕ್ಕಿಹರಿದು, ಮಣ್ಣು ಮತ್ತು ಚರಂಡಿ ನೀರು, ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಸುಮಾರು 250 ಕುಟುಂಬಗಳ ಸಾವಿರಕ್ಕೂ ಹೆಚ್ಚು ಜನ ರಾತ್ರೋರಾತ್ರಿ ಬೀದಿಗೆ ಬಿದ್ದರು. ಇವು ಕೆಲವು ಸ್ಯಾಂಪಲ್‌ ಅಷ್ಟೇ. ಇಂತಹ ಹತ್ತಾರು ಉದಾಹರಣೆಗಳು ಇವೆ.

ಬಹುತೇಕ ಘಟನೆಗಳು ಹಿಂಗಾರಿನಲ್ಲೇ ಸಂಭವಿಸಿದ್ದು, ಅದರಲ್ಲಿ ಹೆಚ್ಚಿನವು ಕೆರೆ ಉಕ್ಕಿಹರಿದ ಘಟನೆಗಳೇ ಆಗಿವೆ. ವಿಚಿತ್ರವೆಂದರೆ ನಗರದಲ್ಲಿ ಮಳೆ ಇಷ್ಟೆಲ್ಲ ಅವಾಂತರ ಸೃಷ್ಟಿಸುತ್ತಿದ್ದರೂ, ಯಾವ ವರ್ಷದಲ್ಲಿ ಎಷ್ಟು ಪ್ರಾಣಹಾನಿ ಯಾಗಿದೆ? ಎಲ್ಲೆಲ್ಲಿ ನೆರೆ ಉಂಟಾಗಿದೆ? ಎಂಬ ಕನಿಷ್ಠ ಮಾಹಿತಿಯೂ ಬಿಬಿಎಂಪಿ ದಾಖಲಿಸಿಕೊಂಡಿಲ್ಲ! “ಇದು ನಾವೇ ಮಾಡಿಕೊಂಡ ಅವೈಜ್ಞಾನಿಕ ಮತ್ತು ನಿಸರ್ಗಕ್ಕೆ ವಿರುದ್ಧವಾದ ಕ್ರಮಗಳ ಫ‌ಲ.

1973ರಲ್ಲಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಿತ ಪ್ರದೇಶ ಇದ್ದದ್ದು ಶೇ. 7.97 ಹಾಗೂ ಹಸಿರೀಕರಣ ಶೇ. 68.26ರಷ್ಟು. ಆದರೆ, 2020-21ರಲ್ಲಿ ಹಸಿರು ಶೇ. 2.98 ಆಗಿದ್ದರೆ, ಕಟ್ಟಡ ನಿರ್ಮಿತ ಪ್ರದೇಶ ಶೇ. 85.53 ತಲುಪಿದೆ. 2025ರ ವೇಳೆಗೆ ಇದರ ಕಾಂಕ್ರೀಟೀಕರಣದ ಪ್ರಮಾಣ ಶೇ. 90ರ ಗಡಿ ದಾಟಲಿದೆ. ಮತ್ತೂಂದೆಡೆ ರಾಜಕಾಲುವೆಗಳ ಮರುವಿನ್ಯಾಸದ ನೆಪದಲ್ಲಿ ವಿಸ್ತೀರ್ಣವನ್ನು ತಗ್ಗಿಸಲಾಗಿದೆ. ಉದಾಹರಣೆಗೆ ಅಗರ, ಬೆಳ್ಳಂದೂರು ಕಾಲುವೆ ಈ ಹಿಂದೆ 80 ಮೀಟರ್‌ ಇತ್ತು.

ಈಗ ಅದು 18.5 ಮೀಟರ್‌ಗೆ ಕುಸಿದಿದೆ. ಈ ಮಧ್ಯೆ ಒತ್ತುವರಿ ಸಾಕಷ್ಟಾಗಿದೆ. ಜತೆಗೆ ಕಾಂಕ್ರೀಟ್‌ ರಾಜಕಾಲುವೆ ಮಾಡಿದ್ದರಿಂದ ನೀರಿನ ಹರಿವಿನ ವೇಗ ಹೆಚ್ಚಿದ್ದು, ನೀರು ಇಂಗುವಿಕೆ ಇಳಿಮುಖವಾಗಿದೆ. ಮಳೆ ಬೇರೆ ಹೆಚ್ಚಾಗುತ್ತಿದೆ. ನಗರದ ನೆರೆಗೆ ಈ ಎಲ್ಲ ಅಂಶಗಳು ಕೊಡುಗೆ ನೀಡಿವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿ ಪ್ರೊ.ಟಿ.ವಿ. ರಾಮಚಂದ್ರ ತಿಳಿಸುತ್ತಾರೆ. “ನಗರದ ಕೆರೆಗಳಿಗೆ ವಿಷವುಣಿಸುತ್ತಿದ್ದು, ಇದರಿಂದ ನೀರು ಮತ್ತು ಮಣ್ಣು ವಿಷಮಯವಾಗುತ್ತಿದೆ.

ಇದನ್ನೂ ಓದಿ:- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ನಿಧನ

ವಿಪರೀತ ವಾಹನಗಳಿಂದ ವಾಯುಮಾಲಿನ್ಯ ಉಂಟಾಗುತ್ತಿದ್ದು, ಕ್ಯಾನ್ಸರ್‌, ಹೃದಯಾಘಾತ ಸೇರಿದಂತೆ ಹಲವು ಕಾಯಿಲೆಗಳು ಬರುತ್ತಿವೆ. ಈ ಮಧ್ಯೆ ವರ್ಷಕ್ಕೊಮ್ಮೆ ಒಂದಿಲ್ಲೊಂದು ಪ್ರದೇಶದಲ್ಲಿ ನೆರೆ ಹಾವಳಿ ಉಂಟಾಗುತ್ತಿದೆ. ಹೀಗಿರುವಾಗ, ನಗರ ಸುರಕ್ಷಿತ ಎಂದು ಹೇಗೆ ಹೇಳುತ್ತೀರಿ?’ ಎಂದೂ ಅವರು ಕೇಳುತ್ತಾರೆ. “ನಗರದಲ್ಲಿನ ಇತ್ತೀಚಿನ ವರ್ಷಗಳ ಮಳೆ ಅವಾಂತರಗಳು ನಿಜಕ್ಕೂ ಆಘಾತಕಾರಿ ಆಗಿವೆ. ಕೆರೆ, ರಾಜಕಾಲುವೆ ಜಾಗಗಳನ್ನು ನುಂಗಿಹಾಕಿದ್ದೇವೆ.

ರಾಜಕಾಲುವೆ ವಿಸ್ತೀರ್ಣ ಕಿರಿದುಗೊಳಿಸಿದ್ದು, ಹೂಳು ಕೂಡ ಎತ್ತಿಲ್ಲ. ಜತೆಗೆ ಬೇಕಾಬಿಟ್ಟಿ ಕಸ ಸುರಿಯುತ್ತಿದ್ದೇವೆ. ಅದೆಲ್ಲವೂ ಕೆರೆಗೆ ಸೇರಿಕೊಂಡು ಸಮಸ್ಯೆಗೆ ಕಾರಣವಾಗುತ್ತಿದೆ. ಮೆಜೆಸ್ಟಿಕ್‌- ಬೆಳ್ಳಂದೂರು ನಡುವೆ “100-ಕೆ’ ಪ್ರಾಯೋಗಿಕ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಡಿ ರಾಜಕಾಲುವೆ ಹೂಳೆತ್ತಲಾಗುತ್ತಿದ್ದು, ಯಶಸ್ವಿಯಾದರೆ ಇದನ್ನು ಉಳಿದೆಡೆ ವಿಸ್ತರಿಸಬಹುದು’ ಎಂದು ಹಿರಿಯ ವಾಸ್ತುಶಿಲ್ಪಿ ನರೇಶ್‌ ನರಸಿಂಹನ್‌ ಅಭಿಪ್ರಾಯಪಡುತ್ತಾರೆ.

10ರಲ್ಲಿ 7 ವರ್ಷ ವಾಡಿಕೆಗಿಂತ ಹೆಚ್ಚು ಮಳೆ!

ನಗರದ ಮಳೆ ಪ್ರಮಾಣದಲ್ಲಿ ಕೂಡ 2000ರಿಂದ ಈಚೆಗೆ ಸಾಕಷ್ಟು ಬದಲಾವಣೆಯಾಗಿದ್ದು, ಈ ಹಿಂದೆ 850 ಮಿ.ಮೀ. ಇದ್ದ ವಾಡಿಕೆ ಮಳೆ, ಕಳೆದೆರಡು ದಶಕಗಳಲ್ಲಿ 977.4 ಮಿ.ಮೀ.ಗೆ ಏರಿಕೆಯಾಗಿದೆ. ಈ ಮಧ್ಯೆ ಕಳೆದೊಂದು ದಶಕದಲ್ಲಿ ಮೂರು ವರ್ಷ ಹೊರತುಪಡಿಸಿ, ಉಳಿದೆಲ್ಲ ಅವಧಿಯಲ್ಲಿ ಸಾವಿರ ಮಿ.ಮೀ.ಗಿಂತ ಅಧಿಕ ಮಳೆ ದಾಖಲಾಗಿದೆ! ಕಳೆದ ಹತ್ತು ವರ್ಷಗಳಲ್ಲಿ 2017 ಅತ್ಯಧಿಕ ಮಳೆ ವರ್ಷ ಎಂದು ಹೇಳಬಹುದು.

ಆ ವರ್ಷ ನಗರದಲ್ಲಿ 1,696 ಮಿ.ಮೀ. ಮಳೆಯಾಗಿತ್ತು. ಇದನ್ನು ಹೊರತುಪಡಿಸಿದರೆ, 2016ರಲ್ಲಿ 1,279.3 ಹಾಗೂ 2020ರಲ್ಲಿ 1,217 ಮಿ.ಮೀ. ಮಳೆ ದಾಖಲಾಗಿತ್ತು. ಇನ್ನು 2012 ಅತಿ ಕಡಿಮೆ 724.6 ಮಿ.ಮೀ. ಬಿದ್ದಿದೆ. ನಗರದಲ್ಲಿ ಮುಂಗಾರಿಗಿಂತ ಹಿಂಗಾರಿನಲ್ಲೇ ವರುಣನ ಆರ್ಭಟ ಹೆಚ್ಚಿರುವುದು ಕಂಡುಬಂದಿದೆ. ಈ ಮಧ್ಯೆ ಮಳೆ ದಿನಗಳು ಕೂಡ ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಹೆಚ್ಚಿರುವುದನ್ನು ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next