Advertisement

ಯುವ ಬ್ರಿಗೇಡ್‌ನಿಂದ ಪ್ರತಿ ರವಿವಾರ ಕಡಬ ಪೇಟೆ ಸ್ವತ್ಛತೆ

10:43 PM Jul 15, 2019 | Team Udayavani |

ಕಡಬ: ಕೆಲ ಸಮಯದಿಂದ ಕಡಬ ಪೇಟೆಯಲ್ಲಿ ಪ್ರತಿ ಆದಿತ್ಯವಾರ ಕಡುನೀಲಿ ಬಣ್ಣದ ಸಮವಸ್ತ್ರ ಧರಿಸಿದ ಯುವ ಬ್ರಿಗೇಡ್‌ನ‌ ಯುವಕರ ತಂಡ ಕೈಗೆ ಗ್ಲೌಸ್‌ ಹಾಕಿಕೊಂಡು ಚರಂಡಿ, ಅಂಗಡಿಗಳ ಮುಂಭಾಗ, ರಸ್ತೆ, ಬಸ್‌ ತಂಗುದಾಣ ಮುಂತಾದೆಡೆ ಕಸ ತೆಗೆದು ಶುಚಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಸ್ವತ್ಛತೆಯ ಕುರಿತು ಜಾಗೃತಿ ಮೂಡಿಸುವ ವಿಶಿಷ್ಟ ಪ್ರಯತ್ನದಲ್ಲಿ ತೊಡಗಿದೆ.

Advertisement

ಆರಂಭದಲ್ಲಿ 11 ಮಂದಿ ಯುವಕರ ತಂಡ ಆರಂಭಿಸಿದ ಈ ಸ್ವತ್ಛತಾ ಅಭಿಯಾನದಲ್ಲಿ ಇಂದು ವಿದ್ಯಾರ್ಥಿಗಳು, ಆಟೋ ಚಾಲಕರು, ಖಾಸಗಿ ಉದ್ಯೋಗಿಗಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಮಾಜಮುಖೀ ಚಿಂತನೆಯ ಯುವಕರು ಸೇರಿಕೊಂಡಿದ್ದಾರೆ. ಕಳೆದ ಜೂ. 16ರ ರವಿವಾರ ಚಾಲನೆ ಪಡೆದ ಈ ಕಾರ್ಯಕ್ರಮ ಬಳಿಕ ಪ್ರತಿ ರವಿವಾರವೂ ನಡೆದು ಇದೀಗ 5ನೇ ಸುತ್ತಿನ ಸ್ವತ್ಛತಾ ಕಾರ್ಯ ಮುಗಿದಿದೆ.

ಯುವ ಬ್ರಿಗೇಡ್‌ನ‌ ದ.ಕ. ಜಿಲ್ಲಾ ಸಂಚಾಲಕ ತಿಲಕ್‌ ಶಿಶಿಲ ಅವರ ಪ್ರೇರಣೆಯಂತೆ ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಡಬ ಪರಿಸರದ ಯುವಕರ ಪ್ರಯತ್ನದಿಂದ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಬಳಿಕ ಕಡಬದ ಸಾಕಷ್ಟು ಯುವಕರು ಕೈಜೋಡಿಸುವ ಮೂಲಕ ಸ್ವತ್ಛ ಕಡಬ ಎನ್ನುವ ಕಲ್ಪನೆಗೆ ಶಕ್ತಿ ತುಂಬುತ್ತಿದ್ದಾರೆ. ಆರಂಭದಲ್ಲಿ ಯುವಕರ ಕೆಲಸವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಕಡಬ ಪೇಟೆಯ ಜನರು ಇದೀಗ ಈ ಯುವಕರ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡುತ್ತಿದ್ದಾರೆ. ಸ್ವತ್ಛತೆಯ ಕೆಲಸದಲ್ಲಿ ನಿರತರಾಗಿರುವ ಯುವಕರಿಗೆ ಪಾನೀಯ, ಫಲಹಾರ ನೀಡುವ ಮೂಲಕ ತಾವೂ ಸ್ವತ್ಛತೆಯ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ. ಕಡಬ ಗ್ರಾಮ ಪಂಚಾಯತ್‌ ಕೂಡ ತ್ಯಾಜ್ಯ ಸಾಗಿಸಲು ವಾಹನ, ಗ್ಲೌಸ್‌, ಹಾರೆ, ಬುಟ್ಟಿ ಮುಂತಾದ ಸಲಕರಣೆಗಳನ್ನು ನೀಡುವ ಮೂಲಕ ಸಹಕರಿಸುತ್ತಿದೆ.

ಬದಲಾವಣೆ ಆಗುತ್ತಿದೆ
5 ವಾರಗಳ ಹಿಂದೆ ಸ್ವತ್ಛತಾ ಕಾರ್ಯಕ್ರಮ ನಡೆದ ಮರುದಿನ ನಾವು ಸ್ವತ್ಛ ಮಾಡಿದ ಅಂಗಡಿಗಳ ಮುಂದೆ ಮತ್ತೆ ಎಂದಿನಂತೆಯೇ ಕಸಕಡ್ಡಿಗಳು, ಕೊಳೆತ ತರಕಾರಿಗಳನ್ನು ಬಿಸಾಡಿರುವುದನ್ನು ನೋಡಿ ನಮಗೆ ಭ್ರಮನಿರಸನವಾಗಿತ್ತು. ಆದರೆ ನಾವು ನಮ್ಮ ಪ್ರಯತ್ನ ಬಿಡಲಿಲ್ಲ. ಅಂತಹ ಅಂಗಡಿಗಳ ಮಾಲಕರಲ್ಲಿ ಮಾತುಕತೆ ನಡೆಸಿ ಅವರಿಗೆ ಸ್ವತ್ಛತೆಯ ಅನಿವಾರ್ಯತೆಯ ಕುರಿತು ಮನವರಿಕೆ ಮಾಡುವುದರೊಂದಿಗೆ ಪ್ರತಿ ಅಂಗಡಿಗಳಿಗೆ ಜಾಗೃತಿ ಕರಪತ್ರ ಹಂಚುವ ಕೆಲಸವನ್ನು ಮಾಡಿದೆವು. ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವೂ ಸಾಕಷ್ಟು ಫಲ ನೀಡಿದೆ. ಈಗ ಪ್ರತಿಯೊಬ್ಬರೂ ಸ್ಪಂದಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ಚೀಲ, ಪ್ಲಾಸ್ಟಿಕ್‌ ಬಾಟಲು, ಕಸಕಡ್ಡಿಗಳನ್ನು ಎಸೆಯುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ತಮ್ಮ ಅಂಗಡಿಯ ಮುಂದಿನ ರಸ್ತೆಗೆ ಕೊಳೆತ ತರಕಾರಿಗಳನ್ನು ಎಸೆಯುತ್ತಿದ್ದ ತರಕಾರಿ ಅಂಗಡಿಗಳವರು ಕೂಡ ಈಗ ಅದನ್ನು ನಿಲ್ಲಿಸಿದ್ದಾರೆ. ಇನ್ನೂ ಕೆಲವು ವಾರ ಈ ಸ್ವತ್ಛತೆ ನಡೆಯಲಿದೆ. ಜತೆ ಜತೆಗೆ “ಉಸಿರು ಹಂಚೋಣ’ ಎನ್ನುವ ಧ್ಯೇಯ ವಾಕ್ಯದಡಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನೂ ನಡೆಸುವ ಉದ್ದೇಶ ಇದೆ ಎನ್ನುತ್ತಾರೆ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪ್ರತಿ ವಾರ ಸ್ವತ್ಛತೆಯಲ್ಲಿ ಭಾಗವಹಿಸುತ್ತಿರುವ ಯುವ ಬ್ರಿಗೇಡ್‌ ಕಾರ್ಯಕರ್ತ ಮರ್ದಾಳದ ಮಿಥುನ್‌ ಅಚ್ಚಿಲ.

ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕಿದೆ
ಅಂಗಡಿಗಳಿಂದ ತಿಂಡಿ ತಿನಿಸುಗಳನ್ನು ಕೊಂಡು ತಿನ್ನುವ ವಿದ್ಯಾರ್ಥಿಗಳು ಅವುಗಳ ಪ್ಲಾಸ್ಟಿಕ್‌ ಪೊಟ್ಟಣಗಳನ್ನು ರಸ್ತೆಯಲ್ಲಿಯೇ ಬಿಸಾಡುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಶಾಲಾ ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿ ಸ್ವತ್ಛತೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಮನದಟ್ಟು ಮಾಡಬೇಕಿದೆ ಎನ್ನುತ್ತಾರೆ ಯುವ ಬ್ರಿಗೇಡ್‌ ಕಾರ್ಯಕರ್ತರು.

Advertisement

ಶ್ಲಾಘನೀಯ
ಸ್ವತ್ಛತೆ ಮತ್ತು ತ್ಯಾಜ್ಯ ವಿಲೇವಾರಿಯ ಕೆಲಸ ಇಂದು ಬಲು ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಸುಳ್ಳಲ್ಲ. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತರು ಕಡಬ ಪೇಟೆಯಲ್ಲಿ ಪ್ರತಿ ರವಿವಾರ ನಡೆಸುತ್ತಿರುವ ಸ್ವತ್ಛತಾ ಕಾರ್ಯ ಶ್ಲಾಘನಾರ್ಹ. ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸುವ ಅಗತ್ಯವಿದೆ. ಪಂಚಾಯತ್‌ ಕೂಡ ಯುವ ಬ್ರಿಗೇಡ್‌ನ‌ ಕಾರ್ಯಕರ್ತರಿಗೆ ಅಗತ್ಯ ನೆರವು ನೀಡುತ್ತಿದೆ.
– ಚೆನ್ನಪ್ಪ ಗೌಡ ಕಜೆಮೂಲೆ , ಕಡಬ ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next