Advertisement

ಪ್ರತಿ ಭಾನುವಾರ ಪೂರ್ಣ ಲಾಕ್ ಡೌನ್

05:59 PM Jun 30, 2020 | Suhan S |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊವಿಡ್‌ ನಿಯಂತ್ರಿಸಲು ಜು.5 ರಿಂದ ಆ.2ರವರೆಗೆ ಪ್ರತಿ ಭಾನುವಾರ ಪೂರ್ಣ ಲಾಕ್‌ಡೌನ್‌ ಇರಲಿದೆ ಎಂದು ಡಿಸಿ ಹರೀಶ್‌ಕುಮಾರ್‌ಹೇಳಿದ್ದಾರೆ.

Advertisement

ಕೊವಿಡ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿ ಸರ್ಕಾರವು ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚಿನ ಮುಂಜಾಗೃತಾ ಕ್ರಮ ತೆಗೆದುಕೊಂಡಿದೆ. ಈ ಸಂಬಂಧ ಹಾಲಿ ಚಾಲ್ತಿಯಲ್ಲಿರುವ ಮುಂಜಾಗ್ರತಾ ಕ್ರಮಗಳ ಜತೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಪರಿಷ್ಕೃತಮಾರ್ಗಸೂಚಿಗಳನ್ನು ಹೊರಡಿಸಿದೆ.

ಸರ್ಕಾರದ ಆದೇಶದನ್ವಯ ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಹೊರತುಪಡಿಸಿ ಜು.5ರಿಂದ ಪ್ರತಿ ಆ.2ರವರೆಗೆ ಪ್ರತಿ ಭಾನುವಾರ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಚಲನವಲನಗಳನ್ನು ನಿಷೇಧಿಸಲು ಸಹ ಸೂಚಿಸಲಾಗಿದೆ. ಆದ್ದರಿಂದ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಜಿಲ್ಲಾಧಿಕಾರಿ ಡಾ| ಕೆ.ಹರೀಶಕುಮಾರ್‌ ಅವರು ಜಿಲ್ಲೆಯಾದ್ಯಂತ ಈ ಆದೇಶ ಜಾರಿಗೊಳಿಸಿದ್ದಾರೆ.

ಈ ನಿಷೇಧಿತ ಅವಧಿಯಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಹೊರತುಪಡಿಸಿ ಯಾವುದೇ ಕಾರಣಕ್ಕೂ ಪ್ರತಿದಿನ (ಭಾನುವಾರ ಹೊರತುಪಡಿಸಿ) ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಹೊರಗಡೆ ಸಂಚರಿಸ ತಕ್ಕದ್ದಲ್ಲ. ನಿಷೇಧಿತ ಅವಧಿಯ ಪ್ರತಿ ಭಾನುವಾರದಂದು ಪೂರ್ಣ ದಿನ ಸಾರ್ವಜನಿಕರಿಗೆ ವೈದ್ಯಕೀಯ ಕಾರಣಕ್ಕೆ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೆ ಮನೆಯಿಂದ ಹೊರಬರತಕ್ಕದ್ದಲ್ಲ. ಈ ನಿರ್ಬಂಧ ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next