Advertisement
ವೇದಾಂತ ದರ್ಶನದಲ್ಲಿ ಅಧಿಭೂತ, ಅಧಿದೈವ ಮತ್ತು ಅಧ್ಯಾತ್ಮಗಳೆಂಬ ಮೂರು ಸ್ತರಗಳ ವಿವೇಚನೆ ಉಂಟು. ಅಧಿಭೂತ ವಾಸ್ತವ ಜಗತ್ತನ್ನು ಕುರಿತದ್ದಾದರೆ, ಅಧಿದೈವವು ಶ್ರದ್ಧೆ-ನಂಬಿಕೆಗಳ ವಲಯದ್ದು. ಅಧ್ಯಾತ್ಮವಾದರೋ ಕೇವಲ ಸ್ವಸಂವೇದನೆಯ ಸ್ತರ. ಇದು ಅಪ್ಪಟವಾಗಿ ಸಾರ್ವತ್ರಿಕಾನುಭವದ ನೆಲೆ. ಇದನ್ನು ದರ್ಶನಶಾಸ್ತ್ರಗಳ ವಲಯದಲ್ಲಿ ಬ್ರಹ್ಮಾನುಭೂತಿ ಎಂದೂ ಕಾವ್ಯಶಾಸ್ತ್ರದ ಚೌಕಟ್ಟಿನಲ್ಲಿ ರಸಾನುಭೂತಿ ಎಂದೂ ಗುರುತಿಸಿಕೊಳ್ಳಬಹುದು. ಯಾವುದೇ ಕಲಾಕೃತಿಯಲ್ಲಿ ಈ ಮೂರರ ಸಂಮ್ಮಿಶ್ರಣ ಇರಬಹುದಾದರೂ ಅಧ್ಯಾತ್ಮದ ಅಂಶ ಹೆಚ್ಚಿದಷ್ಟೂ ಅದಕ್ಕೆ ಮಿಗಿಲಾದ ಬೆಲೆ. ಅಂದರೆ, ರಸಸ್ಫೂರ್ತಿಯೇ ಕೃತಿಯ ಮಹತ್ವಕ್ಕೆ ಒರೆಗಲ್ಲು.
Related Articles
ಕೇವಲ ದಿಗªರ್ಶಕವಾಗಿ ಪರ್ವವು ವಿವೇಚಿಸುವ ಸಮಸ್ಯೆಗಳಲ್ಲೊಂದಾದ ಹುಟ್ಟನ್ನು ಗಮನಿಸಬಹುದು. ಇಲ್ಲಿ ಕ್ಷೇತ್ರ-ಬೀಜಗಳ ಮೇಲು-ಕೀಳುಗಳನ್ನು ಕುರಿತಂತೆ, ಅಕ್ರಮ-ಅವ್ಯವಸ್ಥೆಗಳನ್ನು ಕುರಿತಂತೆ ವಿಸ್ತೃತವಾದ ಚಿಂತನೆಯಿದೆ. ಇದೆಲ್ಲ ಕಥೆಯಾಗಿ, ಕಲೆಯಾಗಿ ಪರಿಣಮಿಸಿರುವುದು ಗಮನಾರ್ಹ. ಒಂದು ತಲೆಮಾರಿನ ಸರಿ ಮತ್ತೂಂದು ತಲೆಮಾರಿಗೆ ತಪ್ಪಾಗುವ ವಿಲಕ್ಷಣ ಸ್ಥಿತಿ ಯುಗ ಸಂಧಿಯದು. ಕನ್ಯೆಯ ಮಗನಾಗಿ ಕಾನೀನನೆನಿಸಿದ ಕೃಷ್ಣದ್ವೆ„ಪಾಯನ ಇಡಿಯ ಸಮಾಜದ ಮನ್ನಣೆ ಗಳಿಸಿದ ಭಗವಾನ್ ವೇದವ್ಯಾಸರಾದರೆ, ಅಂಥ ಮತ್ತೂಬ್ಬ ಕಾನೀನ ಕರ್ಣ, ಸಮಾಜದ ತಿರಸ್ಕಾರಕ್ಕೆ ಅಂಜಿ, ಹುಟ್ಟುವಾಗಲೇ ತನ್ನ ತಾಯಿಯಿಂದ ದೂರವಾಗುತ್ತಾನೆ. ನಿರ್ವೀರ್ಯನಾದ ಪತಿ ತನ್ನ ಪತ್ನಿಯರಿಗೆ ಸಮರ್ಥರಿಂದ ಸಂತಾನವನ್ನು ಗಳಿಸಿಕೊಟ್ಟರೆ ಅದು ನಿಯೋಗವೆಂಬ ಶಾಸ್ತ್ರೀಯವಾದ ಆಚರಣೆಯಾಗುತ್ತಿತ್ತು. ಇದು ಅಲ್ಪಕಾಲದಲ್ಲಿಯೇ ವ್ಯಭಿಚಾರವೆಂಬ ಆಕ್ಷೇಪಕ್ಕೆ ತುತ್ತಾಗುತ್ತದೆ. ಅಷ್ಟೇಕೆ, ತನ್ನ ಮಲತಮ್ಮ ವಿಚಿತ್ರವೀರ್ಯನ ವಿಧವೆಯರಿಗೆ ನಿಯೋಗದ ಮೂಲಕ ಸಂತಾನವಾಗುವಂತೆ ಮಾಡಿಸಿದ ಭೀಷ್ಮನೇ ದುರ್ಯೋಧನನ ಅಪಪ್ರಚಾರಕ್ಕೆ ಬಲಿಯಾಗಿ ಈ ಪದ್ಧತಿ ಶಾಸ್ತ್ರಸಮ್ಮತವೇ ಎಂದು ಖಚಿತಪಡಿಸಿಕೊಳ್ಳಲು ವ್ಯಾಸರ ಬಳಿಗೆ ಧಾವಿಸುತ್ತಾನೆ. ವಿಪರ್ಯಾಸವೇನೆಂದರೆ, ವಿಚಿತ್ರವೀರ್ಯನ ವಿಧವೆಯರಿಗೆ ನಿಯೋಗದ ಮೂಲಕ ಪಾಂಡು-ಧೃತರಾಷ್ಟ್ರರನ್ನು ಕರುಣಿಸಿದವನೇ ವ್ಯಾಸ!
Advertisement
ಇದು ಕೇವಲ ಒಂದು ಕುಟುಂಬದ, ಒಂದು ಪಂಗಡದ ಹುಟ್ಟಿಗೆ ಸೀಮಿತವಲ್ಲ. ಬೇರೆ ಬೇರೆ ವರ್ಣಗಳ, ಬೇರೆ ಬೇರೆ ಜಾತಿಗಳ ಹುಟ್ಟಿಗೂ ವ್ಯಾಪಿಸಿದೆ. ಇದೇ ವರ್ಣಸಂಕರದ ಸಮಸ್ಯೆ. ಬ್ರಾಹ್ಮಣಬೀಜಕ್ಕೆ ಹುಟ್ಟಿದ ದ್ರೋಣನಿಗೆ ಕ್ಷಾತ್ರಕರ್ಮದ ಸಾಂಕರ್ಯ ಬರುತ್ತದೆ. ಅವನ ಮಗ ಅಶ್ವತ್ಥಾಮನಿಗೆ ಬ್ರಾಹ್ಮಣ್ಯವೇ ದಕ್ಕದಂಥ ಸ್ಥಿತಿ ಬರುತ್ತದೆ. ಅರಮನೆಯ ದಾಸಿಯರಿಗೆ ದೊರೆಗಳ ಮೂಲಕ ಉಂಟಾದ ಅಕ್ರಮ ಸಂತಾನವೆಲ್ಲ ಸಕ್ರಮವೆನಿಸಿಕೊಂಡು ಆಳುವವರ ಊಳಿಗಕ್ಕೆ ಸಜ್ಜಾಗುತ್ತದೆ. ಇಂಥ ದುಡಿಮೆಯ ವರ್ಗವನ್ನು ಪ್ರಭುಗಳು ತಮ್ಮ ಅನುಕೂಲ ಕಂಡಂತೆ ಒಡಹುಟ್ಟಿದವರೆಂದು ಸುಮ್ಮಾನದಿಂದ ಕಾಣುವುದೂ ಊಳಿಗದವರೆಂದು ದುಮ್ಮಾನದಿಂದ ದೂರುವುದೂ ವಿರಳವಲ್ಲ. ಇದೇ ಬಗೆಯಾದದ್ದು ಅನುಲೋಮ-ಪ್ರತಿಲೋಮ ವಿವಾಹಗಳ ವೈಕಟ್ಯ, ಆರ್ಯ-ದಸುÂಗಳ ಸಂಘರ್ಷ, ಬಹುಪತಿತ್ವ ಮತ್ತು ಬಹುಪತ್ನಿàತ್ವಗಳ ತುಮುಲ. ಹೀàಗೆ ಪರ್ವ ಹುಟ್ಟೊಂದನ್ನು ಬೆನ್ನಟ್ಟಿ ಅದೆಷ್ಟು ಭಾವಗಳ ಬುಗ್ಗೆಗಳನ್ನು ಉಕ್ಕೇರಿಸುತ್ತದೆ !
ಇಂಥ ಮಹಾಕೃತಿಗೆ ಇದೀಗ ನಲವತ್ತರ ಪ್ರಾಯ. ಮಾನವನ ಜೀವನದಲ್ಲಿ ನಲವತ್ತರ ವಯಸ್ಸಿಗೊಂದು ವೈಶಿಷ್ಟ್ಯವಿದೆ. ಇದು ಆತನ ಪ್ರಜ್ಞೆ-ಪಾಟವಗಳು ಹದವನ್ನು ಮುಟ್ಟಿದ ಸಂಕೇತವೂ ಹೌದು. ಹೀಗಾಗಿ, ಪರ್ವದ ಪಕ್ವತೆಯನ್ನೂ ಅದರೊಡನೆ ನಮಗಾಗುತ್ತಿರುವ ರಸಾನುಭವವನ್ನೂ ವಿವೇಚಿಸುವ ಕಾರ್ಯ ಈಚೆಗೆ ಸಂಪನ್ನಗೊಂಡಿತು. ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಇತ್ತೀಚೆಗೆ ಆಯೋಜಿಸಿದ ರಾಷ್ಟ್ರಸ್ತರದ ವಿಚಾರಗೋಷ್ಠಿಯಲ್ಲಿ ದೇಶದ ಅನೇಕ ವಿದ್ವಾಂಸರು ಪರ್ವವನ್ನು ಕುರಿತ ತಮ್ಮ ವಿಶ್ಲೇಷಣೆಗಳನ್ನು ಮಂಡಿಸಿದರು. ಹೊಸ ಪೀಳಿಗೆಯ ಓದುಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡದ್ದೊಂದು ವಿಶೇಷ.
ಶತಾವಧಾನಿ ಆರ್. ಗಣೇಶ್